ಬೆಂಗಳೂರು : ಒಂದೆಡೆ ಕೊರೊನಾ ಅಬ್ಬರ ಇನ್ನೊಂದೆಡೆ ರಾಜ್ಯ ರಾಜಕೀಯದಲ್ಲಿ ಬಿರುಗಾಳಿಯೇ ಬೀಸುತ್ತಿದೆ. ರಾಜ್ಯದಲ್ಲೀಗ ನಾಯಕತ್ವ ಬದಲಾವಣೆಗೆ ಬಿಜೆಪಿ ಶಾಸಕರೇ ಪಟ್ಟು ಹಿಡಿದಿದ್ದು, 20 ಶಾಸಕರು ದೆಹಲಿಗೆ ಹಾರಿದ್ದಾರೆ.
ಕಳೆದ ಕೆಲ ತಿಂಗಳಿನಿಂದಲೂ ಸಿಎಂ ಯಡಿಯೂರಪ್ಪ ಅವರನ್ನು ಸಿಎಂ ಕುರ್ಚಿಯಿಂದ ಕೆಳಗಿಸಲು ಬಿಜೆಪಿ ಪಾಳಯದಲ್ಲಿಯೇ ಯತ್ನಗಳು ನಡೆಯುತ್ತಿದೆ. ಅದ್ರಲ್ಲೂ ಬಸನಗೌಡ ಪಾಟೀಲ ಯತ್ನಾಳ್ ಖುದ್ದು ಬಹಿರಂಗವಾಗಿಯೇ ಸಿಎಂ ಬದಲಾವಣೆಯ ಕುರಿತು ಹೇಳಿಕೆಯನ್ನು ನೀಡಿದ್ದರು. ಇದೀಗ ಸಿಎಂ ಬದಲಾವಣೆ ಖಚಿತವಾದಂತಿದೆ.
ಕಳೆದೆರಡು ದಿನಗಳಿಂದಲೂ ಬಿಜೆಪಿಯ 20 ಶಾಸಕರು ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಶಾಸಕರು ಬೆಂಗಳೂರು – ಚೆನ್ನೈ ಮೂಲಕ ದೆಹಲಿಗೆ ತಲುಪಿದ್ದಾರೆ. ಈ ವಾರ ಮತ್ತೆ 10 ಮಂದಿ ಶಾಸಕರು ದೆಹಲಿಗೆ ತೆರಳಲಿದ್ದಾರೆ. ಪ್ರಮುಖವಾಗಿ ಶಾಸಕರು ಸಿಎಂ ಯಡಿಯೂರಪ್ಪ ಬದಲಾವಣೆಗೆ ಬಿಗಿಪಟ್ಟು ಹಿಡಿದಿದ್ದಾರೆನ್ನುವ ಮಾತುಗಳು ಕೇಳಿಬರುತ್ತಿದೆ. ಇನ್ನೊಂದೆಡೆ ಬಿಜೆಪಿ ಪಾಳಯದಲ್ಲಿ ಸಿಎಂ ಗಾದಿಗಾಗಿ ಪ್ರಬಲ ಪೈಪೋಟಿ ನಡೆಯುತ್ತಿದೆ. ಒಂದೆಡೆ ಉಪಮುಖ್ಯಮಂತ್ರಿ ಡಾ.ಅಶ್ವತ್ ನಾರಾಯಣ್ ಹಾಗೂ ಸಂಸದ ಪ್ರಹ್ಲಾದ್ ಜೋಷಿ ಅವರ ಹೆಸರುಗಳು ಬಲವಾಗಿಯೇ ಕೇಳಿಬರುತ್ತಿದೆ.
ಕಳೆದೆರಡು ದಿನಗಳಿಂದಲೂ ಬಿಜೆಪಿ ವರಿಷ್ಠರ ಭೇಟಿಗಾಗಿ ಶಾಸಕರು ಕಾದು ಕುಳಿತಿದಿದ್ದಾರೆ. ಬಿಜೆಪಿಯ ರೆಬಲ್ ಶಾಸಕರ ನಾಯಕತ್ವವನ್ನು ಸಿಪಿ ಯೋಗೀಶ್ವರ್ ವಹಿಸಿಕೊಂಡಿದ್ದಾರೆನ್ನುವ ಮಾತುಗಳು ಕೇಳಿಬರುತ್ತಿದೆ. ಅಲ್ಲದೇ ನಾಳೆ ಸಂಜೆಯೇ ಬಿಜೆಪಿ ವರಿಷ್ಠರ ಜೊತೆಗೆ ಬಿಜೆಪಿ ಶಾಸಕರು ಸಭೆ ನಡೆಸೋದು ಬಹುತೇಕ ಖಚಿತ. ಅಲ್ಲದೇ ರಾಜ್ಯದಲ್ಲಿ ಜೂನ್ 10ರ ಒಳಗಾಗಿ ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಬದಲಾವಣೆಗೆ ಬಿಗಿಪಟ್ಟು ಹಿಡಿಯಲಿದ್ದಾರೆ ಎನ್ನಲಾಗುತ್ತಿದೆ.
ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತಕ್ಕೆ ಬರುತ್ತಿದ್ದಂತೆಯೇ ಕೇವಲ 6 ತಿಂಗಳ ಅವಧಿಗೆ ಯಡಿಯೂರಪ್ಪ ಅವರನ್ನು ಸಿಎಂ ಕುರ್ಚಿಯಲ್ಲಿ ಕೂರಿಸಲಾಗಿತ್ತು. ಆದ್ರೆ ಯಡಿಯೂರಪ್ಪ ಅಧಿಕಾರದ ಗದ್ದುಗೆ ಏರುತ್ತಿದ್ದಂತೆಯೇ ಪ್ರವಾಹ, ಕೊರೊನಾ ಅಬ್ಬರದಿಂದಲಾಗಿ ಸಿಎಂ ಕುರ್ಚಿ ಭದ್ರವಾಗಿತ್ತು. ಆದ್ರೀಗ ಕೊರೊನಾ ಸಂಕಷ್ಟದ ನಡುವಲ್ಲೇ ಬಿಜೆಪಿ ಶಾಸಕರೇ ನಾಯಕತ್ವ ಬದಲಾವಣೆಗೆ ಕಹಳೆ ಮೊಳಗಿಸಿದ್ದಾರೆ. ಒಂದೊಮ್ಮೆ ಯಡಿಯೂರಪ್ಪ ಅವರನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸಿದ್ರೆ ಮಹಾರಾಷ್ಟ್ರದ ರಾಜ್ಯಪಾಲರಾಗಿ ನೇಮಕವಾಗುವ ಸಾಧ್ಯತೆಯಿದೆ.