ಅಹಮದಾಬಾದ್ : ಋತು ಚಕ್ರದ ಸಮಯದಲ್ಲಿ ಮಹಿಳೆಯನ್ನು ಮುಟ್ಟಬಾರು. ಒಂದೊಮ್ಮೆ ಮುಟ್ಟಿದ್ರೆ ಅಪವಿತ್ರವಾಗುತ್ತೆ ಅನ್ನೋ ಮೂಢನಂಬಿಕೆ ಈಗ ಮರೆಯಾಗಿದೆ. ಶಿಕ್ಷಿತರಾಗುತ್ತಿದ್ದಂತೆಯೇ ಮೌಢ್ಯ ಕಳಚುತ್ತಿದೆ. ಆದ್ರೆ ಋತುಮತಿ ಅಡುಗೆ ಮಾಡಿದ್ರೆ ಆಕೆ ಮುಂದಿನ ಜನ್ಮದಲ್ಲಿ ನಾಯಿ ಆಗಿ ಜನ್ಮತಾಳುತ್ತಾಳೆ ಎಂದು ಭುಜ್ ನಗರದ ಸ್ವಾಮಿ ನಾರಾಯಣ್ ಮಂದಿರದ ಕೃಷ್ಣಸ್ವರೂಪ್ ದಾಸ್ ಜೀ ಹೇಳಿರೋ ಹೇಳಿಕೆ ಇದೀಗ ಬಾರೀ ವಿವಾದಕ್ಕೆ ಕಾರಣವಾಗಿದೆ.

ಕಳೆದ ಕೆಲ ದಿನಗಳ ಹಿಂದೆಯಷ್ಟೇ ಸ್ವಾಮಿ ನಾರಾಯಣ್ ಮಂದಿರ ನಡೆಸುತ್ತಿರುವ ಶಾಲೆಯಲ್ಲಿ ಋತುಮತಿಯರನ್ನು ಗುರುತಿಸಲು 60 ವಿದ್ಯಾರ್ಥಿನಿಯರ ಒಳ ಉಡುಪು ಕಳಚುವಂತೆ ಕೃಷ್ಣಸ್ವರೂಪ್ ದಾಸ್ ಜೀ ಸೂಚಿಸಿದ್ದು ಬಾರೀ ವಿವಾದವನ್ನು ಹುಟ್ಟುಹಾಕಿತ್ತು. ಮಾತ್ರವಲ್ಲ ಈ ಕುರಿತು ಸ್ವಾಮೀಜಿ ವಿರುದ್ದ ಪ್ರಕರಣ ಕೂಡ ದಾಖಲಾಗಿತ್ತು. ಇದರ ಬೆನ್ನಲ್ಲೇ ಮತ್ತೊಂದು ವಿವಾದಾತ್ಮಕ ಹೇಳಿಕೆಯನ್ನು ಸ್ವಾಮೀಜಿ ನೀಡಿದ್ದಾರೆ. ಋತುಮತಿಯರು ಮಾಡಿದ ಅಡುಗೆ ಊಟ ಮಾಡಿದರೆ ಮುಂದಿನ ಜನ್ಮದಲ್ಲಿ ನೀವು ಎತ್ತಾಗಿ ಹುಟ್ಟುತ್ತೀರಿ.

ಮಹಿಳೆಯರು ಋತುಚಕ್ರದ ಅವಧಿಯಲ್ಲಿ ಗಂಡನಿಗೆ ಊಟ ಮಾಡಿ ಬಡಿಸಿದರೆ ಅಂಥವರು ಮುಂದಿನ ಜನ್ಮದಲ್ಲಿ ವೇಶ್ಯೆ ಅಥವಾ ಹೆಣ್ಣುನಾಯಿ ಆಗಿ ಜನ್ಮ ತಾಳುತ್ತಾರೆಂದು ಹೇಳಿದ್ದು ಮಾತ್ರವಲ್ಲ, ವಿರೋಧ ವ್ಯಕ್ತವಾದರೂ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ನಾನು ಹೇಳಿದ ಮಾತು ನಿಮಗೆ ಹೇಗೆ ಅನ್ನಿಸುತ್ತದೆಯೋ ಹಾಗೆಯೇ ಬಾವಿಸಿಕೊಳ್ಳಿ. ಶಾಸ್ತ್ರದಲ್ಲಿ ಬರೆದಿದ್ದನ್ನು ನಾನು ನಿಮಗೆ ಹೇಳಿದ್ದೇನೆ ಎಂದಿದ್ದಾರೆ. ಸ್ವಾಮೀಜಿಯ ವಿವಾದಾತ್ಮಕ ಹೇಳಿಕೆಗೆ ಬಾರೀ ವಿರೋಧ ವ್ಯಕ್ತವಾಗಿದ್ದು, ಸ್ವಾಮೀಜಿ ಪಟ್ಟದಿಂದ ಕೆಳಗಿಳಿಯುವಂತೆ ಒಂದು ಸಮುದಾಯ ಪಟ್ಟು ಹಿಡಿದಿದೆ.