ಬೆಂಗಳೂರು : ಕೆಎಸ್‌ಆರ್‌ಟಿಸಿ ಟ್ರೇಡ್ ಮಾರ್ಕ್ ಕೇರಳದ ಸೊತ್ತಲ್ಲ. ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಬೌದ್ಧಿಕ ಆಸ್ತಿ ಮೇಲ್ಮನವಿ ಮಂಡಳಿಯ (ಐಪಿಎಬಿ) ಮುಂದೆ ಸಲ್ಲಿಸಿದ್ದ ಮೇಲ್ಮನವಿ ಸಂಬಂಧ ಯಾವುದೇ ಅಂತಿಮ ಆದೇಶ ಹೊರಬಿದ್ದಿಲ್ಲ ಎಂದು ಸಾರಿಗೆ ಖಾತೆ ಹೊಣೆ ಹೊತ್ತಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.
ಕರ್ನಾಟಕದಿಂದ ಕೆಎಸ್‌ಆರ್‌ಟಿಸಿ ಎಂಬ ಹೆಸರು ಕೈತಪ್ಪಿದೆ ಎಂಬ ಆತಂಕ ಬೇಕಾಗಿಲ್ಲ. ಇದು ವಾಸ್ತವಕ್ಕೆ ದೂರವಾದ ಸಂಗತಿ. ಕೇರಳ ಸರ್ಕಾರವು ಈ ಬಗ್ಗೆ ಏನೇ ಹೇಳಿಕೆ ನೀಡಿದರೂ ನಮ್ಮ ಕರ್ನಾಟಕ ಸರ್ಕಾರವು ಈ ಬಗ್ಗೆ ಸೂಕ್ತ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳುವ ಮೂಲಕ ರಾಜ್ಯದ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುತ್ತದೆ. ಕೇಂದ್ರ ತಿಳಿಸಿದ್ದಾರೆ ಟ್ರೇಡ್ ಮಾರ್ಕ್ ರಿಜಿಸ್ಟ್ರಿ ಅವರಿಂದ ಇಂತಹ ಯಾವುದೇ ಸೂಚನೆ ಅಥವಾ ಆದೇಶ ಇಂದಿನವರೆಗೂ ಬಂದಿಲ್ಲ. ಕೆಎಸ್‌ಆರ್‌ಟಿಸಿ ಎಂಬ ಹೆಸರನ್ನು ಕರ್ನಾಟಕವು ಮುಂದೆಯೂ ಬಳಸಲು ಸ್ವತಂತ್ರವಾಗಿದೆ. ಈ ಬಗ್ಗೆ ಕೇರಳ ಸರ್ಕಾರದ ಅನುಮತಿ ನಮಗೆ ಬೇಕಾಗಿಲ್ಲ. ಅಗತ್ಯಬಿದ್ದರೆ ಕಾನೂನು ಹೋರಾಟ ನಡೆಸುತ್ತೇವೆ ಎಂದು ಹೇಳಿದ್ದಾರೆ.
ಕೇರಳ ಎಸ್‌ಆರ್‌ಟಿಸಿಯು ನಮ್ಮ ಸಂಸ್ಥೆಗೆ ಅಥವಾ ಕರ್ನಾಟಕ ಸರ್ಕಾರಕ್ಕೆ ನೋಟಿಸ್ ನೀಡಲು ಉದ್ದೇಶಿಸಿದೆ ಎಂಬ ಕುರಿತು ಮಾದ್ಯಮಗಳು ವರದಿ ಪ್ರಕಟಿಸಿವೆ ಒಂದೊಮ್ಮೆ ಅಂತಹ ನೋಟಿಸ್ ನೀಡಿದರೆ, ಸಂಸ್ಥೆಯಿಂದ ಸೂಕ್ತವಾದ ಉತ್ತರವನ್ನು ನೀಡಲಾಗುತ್ತದೆ. ಯಾವುದೇ ವದಂತಿಯನ್ನು ನಂಬಿ ಆತಂಕಪಡಬೇಕಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ಅಲ್ಲದೇ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಶಿವಯೋಗಿ ಕಳಸದ ಅವರು ಕೂಡ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಎರಡು ದಿನ ಕಳೆದರೂ ಕೇರಳ ಸಾರಿಗೆ ನಿಗಮವು ತಮ್ಮ ಪರ ಟ್ರೇಡ್ ಮಾರ್ಕ್ ರಿಜಿಸ್ಟ್ರಿ ನೀಡಿದೆ ಎನ್ನಲಾದ ತೀರ್ಪಿನ ಪ್ರತಿ ಅಥವಾ ದಾಖಲೆಗಳನ್ನು ಈವರೆಗೂ ಬಿಡುಗಡೆ ಮಾಡಿಲ್ಲ. ಹೀಗಾಗಿ ಈ ಟ್ರೇಡ್ ಮಾರ್ಕ್ ಗೊಂದಲ ಮುಂದುವರಿದಿದೆ. ನಮ್ಮ ಹಕ್ಕನ್ನು ರಕ್ಷಿಸಲು ಕಾನೂನು ಕ್ರಮ ಕೈಗೊಳ್ಳುವ ಸಂಬಂಧ ವಕೀಲರನ್ನು ಸಂಪರ್ಕಿಸುತ್ತಿದ್ದೇವೆ ಎಂದು ಹೇಳಿದ್ದಾರೆ.