Maharashtra Crisis : ಮಹಾರಾಷ್ಟ್ರದಲ್ಲಿ ಶಿವಸೇನಾ ನೇತೃತ್ವದ ಮೈತ್ರಿ ಸರ್ಕಾರಕ್ಕೆ ಅಸ್ಥಿರತೆ ಎದುರಾಗಿದ್ದು ಉದ್ಧವ್ ಠಾಕ್ರೆ ಸಿಎಂ ಸ್ಥಾನಕ್ಕೆ ಬಹುದೊಡ್ಡ ಅಗ್ನಿಪರೀಕ್ಷೆ ಎದುರಾಗಿದೆ. ಶಿವಸೇನಾ ನಾಯಕರಾದ ಏಕನಾಥ್ ಶಿಂದೆ ಬಂಡಾಯವೆದ್ದಿರುವುದು ಠಾಕ್ರೆ ನೇತೃತ್ವದ ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ. ಬಂಡಾಯ ಶಾಸಕರು ಬಿಜೆಪಿ ಆಡಳಿತವಿರುವ ಆಸ್ಸಾಂನ ಗುವಾಹಟಿಯಲ್ಲಿರುವ ರಾಡಿಸನ್ ಬ್ಲೂ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಇದರಿಂದ ಮಹಾ ವಿಕಾಸ್ ಅಘಾಡಿ ಸರ್ಕಾರಕ್ಕೆ ಉರುಳುವ ಭೀತಿ ಎದುರಾಗಿದೆ. ಅಲ್ಲದೇ ಶಿವಸೇನಾ ಸರ್ಕಾರಕ್ಕೆ ಮತ್ತೊಂದು ಶಾಕಿಂಗ್ ನ್ಯೂಸ್ ಎಂಬಂತೆ ಇಂದು ಬೆಳಗ್ಗೆ ಮೂವರು ಶಿವಸೇನಾ ಶಾಸಕರು ಬ್ಲೂ ರಾಡಿಸನ್ ಹೋಟೆಲ್ನತ್ತ ಮುಖ ಮಾಡಡಿದ್ದಾರೆ. ಈ ಮೂಲಕ ರಾಡಿಸನ್ ಬ್ಲೂ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿರುವ ಶಿವಸೇನಾ ಬಂಡಾಯ ಶಾಸಕರ ಸಂಖ್ಯೆ 41ಕ್ಕೆ ಏರಿಕೆ ಕಂಡಿದೆ. ಆದರೆ ಶಿವಸೇನಾ ಬಂಡಾಯ ಶಾಸಕ ಏಕನಾಥ್ ಶಿಂದೆ 46 ಶಾಸಕರು ನನ್ನ ಪರವಾಗಿದ್ದಾರೆಂದು ಹೇಳಿಕೊಂಡಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿರುವ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ತಡರಾತ್ರಿ ಸಿಎಂ ಅಧಿಕೃತ ನಿವಾಸ ವರ್ಷದಿಂದ ನಿರ್ಗಮಿಸಿದ್ದಾರೆ. ಕುಟುಂಬಸ್ಥರ ಸಮೇತ ಉದ್ಧವ್ ಠಾಕ್ರೆ ತಮ್ಮ ಖಾಸಗಿ ನಿವಾಸ ಮಾತೋಶ್ರೀಗೆ ಆಗಮಸಿದ್ದಾರೆ. ಈ ವೇಳೆ ಸಾವಿರಾರು ಮಂದಿ ಶಿವಸೇನಾ ಕಾರ್ಯಕರ್ತರು ಮಾತೋಶ್ರೀ ನಿವಾಸದ ಎದುರು ಆಗಮಿಸುವ ಮೂಲಕ ಠಾಕ್ರೆಗೆ ತಮ್ಮ ಬೆಂಬಲವನ್ನು ಸೂಚಿಸಿದರು.
ಸಿಎಂ ಉದ್ಧವ್ ಠಾಕ್ರೆ ತಮ್ಮ ಪತ್ನಿ ರಶ್ಮಿ ಠಾಕ್ರೆ, ಪುತ್ರ ಆದಿತ್ಯ ಹಾಗೂ ತೇಜಸ್ ಠಾಕ್ರೆ ಜೊತೆಯಲ್ಲಿ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ವರ್ಷದಿಂದ ಮಾತೋಶ್ರೀಗೆ ತೆರಳುತ್ತಿದ್ದ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಘೋಷಣೆ ಕೂಗುವ ಜೊತೆಯಲ್ಲಿ ಪುಷ್ಪಗಳನ್ನು ಎಸೆಯುವ ಮೂಲಕ ಗೌರವ ಸಲ್ಲಿಸಿದರು.
ಬುಧವಾರದಂದು ಸರ್ಕಾರಕ್ಕೆ ಎದುರಾಗಿರುವ ಅಸ್ಥಿರತೆ ಕುರಿತು ಮಾತನಾಡಿರುವ ಉದ್ಧವ್ ಠಾಕ್ರೆ, ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ. ಆದರೆ ಬಂಡಾಯ ಶಾಸಕರು ರೆಸಾರ್ಟ್ಗಳಲ್ಲಿ ವಾಸ್ತವ್ಯ ಹೂಡಿ ಆಕ್ರೋಶ ಹೊರ ಹಾಕುವ ಬದಲು ನೇರವಾಗಿ ನನ್ನೊಡನೆ ಮಾತನಾಡಲಿ ಎಂದು ಹೇಳಿದ್ದಾರೆ.
ಇನ್ನು ಇದೇ ವಿಚಾರವಾಗಿ ಮಾತನಾಡಿರುವ ಶಿವಸೇನಾ ರಾಷ್ಟ್ರೀಯ ವಕ್ತಾರ ಸಂಜಯ್ ರಾವತ್, ಪಕ್ಷವು ರಾಡಿಸನ್ ಬ್ಲೂ ಹೋಟೆಲ್ನಲ್ಲಿರುವ 20 ಶಾಸಕರ ಜೊತೆ ಸಂಪರ್ಕದಲ್ಲಿದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಇವರಿಗೆಲ್ಲ ಯಾವ ರೀತಿಯಲ್ಲಿ ಒತ್ತಡ ಹೇರಿ ಅಲ್ಲಿ ಉಳಿಸಿಕೊಳ್ಳಲಾಗಿದೆ ಎನ್ನುವುದು ಅವರೆಲ್ಲ ಒಮ್ಮೆ ಮುಂಬೈಗೆ ಬಂದ ಬಳಿಕ ತಿಳಿಯಲಿದೆ ಎಂದು ರಾವತ್ ಹೇಳಿದ್ದಾರೆ.
ಇವರೆಲ್ಲ ಜಾರಿ ನಿರ್ದೇಶನಾಲಯದ ಒತ್ತಡಕ್ಕೆ ಮಣಿದು ರೆಸಾರ್ಟ್ನತ್ತ ಮುಖ ಮಾಡುತ್ತಿದ್ದಾರೆ. ಇಡಿ ಒತ್ತಡಕ್ಕೆ ಮಣಿದು ಪಕ್ಷ ತೊರೆಯುವವನು ನಿಜವಾದ ಬಾಳಾಸಾಹೇಬ್ ಭಕ್ತನಲ್ಲ. ನಾವು ಕೂಡ ಜಾರಿ ನಿರ್ದೇಶನಾಲಯದ ಒತ್ತಡವನ್ನು ಎದುರಿಸುತ್ತಿದ್ದೇವೆ. ಆದರೆ ನಾವು ಉದ್ಧವ್ ಠಾಕ್ರೆ ಬೆಂಬಲಕ್ಕೆ ನಿಲ್ಲುತ್ತೇವೆ ಎಂದು ಹೇಳಿದ್ದಾರೆ.
ಇದನ್ನು ಓದಿ : CM Uddhav Leaves Official Home : ಸಿಎಂ ಅಧಿಕೃತ ನಿವಾಸದಿಂದ ನಿರ್ಗಮಿಸಿದ ಉದ್ಧವ್ ಠಾಕ್ರೆ
ಇದನ್ನೂ ಓದಿ : ಮಾನ್ಸೂನ್ ಪ್ರವಾಸಕ್ಕೆ ಹೇಳಿ ಮಾಡಿದ ಸ್ಥಳ : ಭಾರತದ ಜಲಪಾತಗಳ ಗ್ರಾಮ ಕೊಡಗಿನ ಕರಿಕೆ
Maharashtra Crisis : Sena Says ’20 MLAs in Touch’ As More Rebels Reach Assam