ಮಹಾರಾಷ್ಟ್ರ : liquor online : ಆನ್ಲೈನ್ನಲ್ಲಿ 1700 ರೂಪಾಯಿ ಮೌಲ್ಯದ ಮದ್ಯ ಖರೀದಿ ಮಾಡಲು ಯತ್ನಿಸಿದ 29 ವರ್ಷದ ಮಹಿಳೆಯೊಬ್ಬರು ಸೈಬರ್ ವಂಚಕನಿಂದ ಬರೋಬ್ಬರಿ 1.6 ಲಕ್ಷ ರೂಪಾಯಿ ಮೋಸಕ್ಕೆ ಒಳಗಾದ ಘಟನೆಯು ಮಹಾರಾಷ್ಟ್ರದ ಮಲಾಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತಾನು ಮದ್ಯದಂಗಡಿಯ ಸಿಬ್ಬಂದಿ ಎಂದು ಹೇಳಿಕೊಂಡ ಸೈಬರ್ ವಂಚಕನು ಮಹಿಳೆಗೆ ಲಕ್ಷಗಟ್ಟಲೇ ಹಣ ಪಂಗನಾಮ ಹಾಕಿದ್ದಾನೆ.ಜುಲೈ 14ರಂದು ನಡೆದ ಘಟನೆಯು ತಡವಾಗಿ ಬೆಳಕಿಗೆ ಬಂದಿದ್ದು ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಖಾಸಗಿ ಕೋಚಿಂಗ್ ಸೆಂಟರ್ನಲ್ಲಿ ಉಪನ್ಯಾಕಸಿಯಾಗಿರುವ ಮಹಿಳೆಯು ಮಲಾಡ್ನಲ್ಲಿ ತಮ್ಮ ಪತಿಯೊಂದಿಗೆ ವಾಸವಿದ್ದಾರೆ. ಜುಲೈ 14ರ ಸಂಜೆ 7 ಗಂಟೆ ಸುಮಾರಿಗೆ ಈ ದಂಪತಿ ಸ್ಥಳೀಯ ಮದ್ಯದ ಅಂಗಡಿಯಿದ ಮದ್ಯವನ್ನು ಆರ್ಡರ್ ಮಾಡಲು ನಿರ್ಧರಿಸಿದ್ದರು.
ಪೊಲೀಸರಿಗೆ ನೀಡಲಾದ ದೂರಿನಲ್ಲಿ ಮಹಿಳೆಯು, ‘ ಚಿಂಚೋಳಿಯ ವೈನ್ಶಾಪ್ನಿಂದ ಬ್ಲೆಂಡರ್ಸ್ ಫ್ರೈಡ್ ಆರ್ಡರ್ ಮಾಡುವಂತೆ ಪತಿಯು ನನಗೆ ಹೇಳಿದ್ದರು. ನಾನು ವೈನ್ಶಾಪ್ನ ನಂಬರ್ನ್ನು ಗೂಗಲ್ನಲ್ಲಿ ಹುಡುಕಿ ಕರೆ ಮಾಡಿದೆ. ವೈನ್ಶಾಪ್ ಸಿಬ್ಬಂದಿ ಎಂದು ಹೇಳಿಕೊಂಡ ಸೈಬರ್ ವಂಚಕನು ನೀವು 1700 ರೂಪಾಯಿ ಪಾವತಿ ಮಾಡಿದ್ದೀರಿ. ಆದರೆ ಜಿಎಸ್ಟಿ ಪಾವತಿ ಮಾಡಬೇಕಿದೆ ಎಂದು ಹೇಳಿದರು. ಅಲ್ಲದೇ ವಾಟ್ಸಾಪ್ನಲ್ಲಿ ಕ್ಯೂಆರ್ ಕೋಡ್ ಕಳುಹಿಸಿ ಇದನ್ನು ಸ್ಕ್ಯಾನ್ ಮಾಡಿ ಹಣ ಪಾವತಿಸುವಂತೆ ಹೇಳಿದ್ದರು. ಇಲ್ಲಿ ಸ್ಕ್ಯಾನ್ ಮಾಡುತ್ತಿದ್ದಂತೆಯೇ ನನ್ನ ಖಾತೆಯಿಂದ 19,860 ರೂಪಾಯಿ ಹಣ ಡೆಬಿಟ್ ಆಯ್ತು ಎಂದು ತಿಳಿಸಿದ್ದಾರೆ .
ಮಹಿಳೆಗೆ ತಾನು ಸೈಬರ್ ವಂಚನೆ ಆಗಿದೆ ಎಂದು ತಿಳಿಯುತ್ತಿದ್ದಂತೆಯೇ ವಂಚಕನಿಗೆ ಈ ಬಗ್ಗೆ ಹೇಳಿದ್ದಾರೆ. ಆದರೆ ಆತ ಇಲ್ಲ ತಪ್ಪಾಗಿ ಈ ರೀತಿ ಆಗಿದೆ ಎಂದು ಹೇಳಿ ಮತ್ತೊಂದು ಕ್ಯೂ ಆರ್ ಕೋಡ್ ಕಳುಹಿಸಿದ್ದ. ಇದನ್ನು ಸ್ಕ್ಯಾನ್ ಮಾಡುತ್ತಿದ್ದಂತೆಯೇ ಮಹಿಳೆಯ ಖಾತೆಗೆ 10 ರೂಪಾಯಿ ಪಾವತಿಯಾಗಿದೆ. ಇದಾದ ಬಳಿಕ ವಂಚಕ ಮತ್ತೊಂದು ಕ್ಯೂ ಆರ್ ಕೋಡ್ ಕಳಿಸಿದ್ದ ಇದನ್ನೂ ಮಹಿಳೆ ಸ್ಕ್ಯಾನ್ ಮಾಡಿದ್ದು ಕೂಡಲೇ ಆಕೆಯ ಖಾತೆಯಿಂದ 81,200 ರೂಪಾಯಿ ಖಾಲಿ ಆಗಿದೆ.
ಇದರಿಂದ ಆತಂಕಗೊಂಡ ಮಹಿಳೆಯು ಮತ್ತದೇ ನಂಬರ್ಗೆ ಕರೆ ಮಾಡಿದರೆ ಆತ ನನ್ನ ಖಾತೆಯಲ್ಲಿ ತಾಂತ್ರಿಕ ಸಮಸ್ಯೆಯಿಂದ ಈ ರೀತಿ ಆಗಿದೆ ಎಂದು ಕ್ಷಮೆಯಾಚಿಸಿದ್ದಾನೆ. ಹಣವನ್ನು ಮರು ಪಾವತಿ ಮಾಡಲು ನಿಮ್ಮ ಫೋನ್ ನಂಬರ್ ಹಾಗೂ ಬ್ಯಾಂಕ್ ಖಾತೆಯ ವಿವರ ನೀಡಿ ಎಂದು ಕೇಳಿದ್ದಾನೆ. ಈ ಬಾರಿ ಆಕೆ ತನ್ನ ಪತಿಯ ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ವಿವರವನ್ನು ನೀಡಿದ್ದಾಳೆ. ಅಲ್ಲದೇ ಮತ್ತೊಂದು ಕ್ಯೂ ಆರ್ ಕೋಡ್ ಪಡೆದಿದ್ದಳು. ಇದನ್ನು ಸ್ಕ್ಯಾನ್ ಮಾಡಿದಾಗ ಖಾತೆಯಿಂದ ಮತ್ತೆ 79,460 ರೂಪಾಯಿ ಡೆಬಿಟ್ ಆಗಿದೆ.
ಮಹಿಳೆಯು ಮತ್ತೆ ಅದೇ ಸಂಖ್ಯೆಗೆ ಕರೆ ಮಾಡಿದ್ದು ವಂಚಕನು ನಿಮ್ಮ ಮನೆಗೆ ಮದ್ಯ ತಲುಪಿಸಲು ಬಂದಾಗ ಈ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸುತ್ತೇನೆಂದು ಹೇಳಿದ್ದಾರೆ. ಆದರೆ ಎಷ್ಟು ಹೊತ್ತು ಕಳೆದರೂ ಯಾರೊಬ್ಬರೂ ಮನೆಗೆ ಆಗಮಿಸದೇ ಹೋದದ್ದನ್ನು ಕಂಡು ಪತಿಯು ಮದ್ಯದಂಗಡಿಗೆ ಹೋಗಿ ವಿಚಾರಿಸಿದಾಗ ಸೈಬರ್ ವಂಚನೆಯಾಗಿರುವುದು ದೃಢವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ .
ಇದನ್ನು ಓದಿ :First Child Via IVF : ಮದುವೆಗಾಗಿ 54 ವರ್ಷಗಳ ಬಳಿಕ ಮೊದಲ ಮಗುವನ್ನು ಬರಮಾಡಿಕೊಂಡ ವೃದ್ಧ ದಂಪತಿ
ಇದನ್ನೂ ಓದಿ : STUDENTS STOLEN BULLETS : ಐಷಾರಾಮಿ ಜೀವನಕ್ಕೆಂದು ಬೈಕ್ ಕಳ್ಳತನಕ್ಕೆ ಇಳಿದ ವಿದ್ಯಾರ್ಥಿಗಳ ಬಂಧನ
Mumbai woman tries to order liquor online for Rs 1,700, loses Rs 1.6 lakh