ಕೋವಿಡ್ ಲಸಿಕೆ ಬದಲು ಮಹಿಳೆಯರಿಗೆ ಹುಚ್ಚು ನಾಯಿ ಕಡಿತದ ಲಸಿಕೆ ಕೊಟ್ಟ ಸಿಬ್ಬಂದಿ..!

ಉತ್ತರಪ್ರದೇಶ : ಕೊರೊನಾ ಲಸಿಕೆ ನೀಡುವ ಬದಲು ಮೂವರು ವೃದ್ದ ಮಹಿಳೆಯರಿಗೆ ಆಸ್ಪತ್ರೆ ಸಿಬ್ಬಂದಿ ಹುಚ್ಚು ನಾಯಿ ಕಡಿತದ ಲಸಿಕೆ ನೀಡಿ ನಿರ್ಲಕ್ಷ್ಯ ವಹಿಸಿರುವ ಘಟ‌ನೆ ಉತ್ತರಪ್ರದೇಶದ ಶಾಮಿಲಿ ಜಿಲ್ಲೆಯಲ್ಲಿ ನಡೆದಿದೆ.

ಸರೋಜಾ (70 ವರ್ಷ), ಅನಾರ್ಕಲಿ (72‌ ವರ್ಷ ) ಹಾಗೂ ಸತ್ಯವತಿ (60 ವರ್ಷ) ಎಂಬವರೇ ರೇಬಿಸ್ ಚುಚ್ಚುಮದ್ದು ಪಡೆದುಕೊಂಡವರು. ಮೂವರು ಮಹಿಳೆಯರು ಕೊರೊನಾ ಲಸಿಕೆ ತೆಗೆದುಕೊಳ್ಳುವ ಸಲುವಾಗಿ ಆಸ್ಪತ್ರೆಗೆ ತೆರಳಿದ್ದರು.

ಈ ವೇಳೆಯಲ್ಲಿ ಆಸ್ಪತ್ರೆಯ 2 ಮಹಡಿಯಲ್ಲಿ ಕೊರೊನಾ ಲಸಿಕೆ ನೀಡಲಾಗುತ್ತಿತ್ತು. ಮಹಿಳೆಯರು ಎರಡನೇ ಮಹಡಿಯ ಬದಲು ಒಂದನೇ ಮಹಡಿಗೆ ತೆರಳಿದ್ದಾರೆ‌. ಈ ವೇಳೆಯಲ್ಲಿ ಅಲ್ಲಿಯೇ ಇದ್ದ ಸಿಬ್ಬಂದಿಯೊರ್ವ ಅಪಾರ್ಥ ಮಾಡಿಕೊಂಡು ಮಹಿಳೆಯರಿಗೆ ರೇಬಿಸ್ ಚುಚ್ಚುಮದ್ದು ನೀಡಿದ್ದಾನೆ.

ಲಸಿಕೆ ಪಡೆದು ಮನೆಗೆ ತೆರಳಿದ ನಂತರದಲ್ಲಿ ಮೂವರೂ ಮಹಿಳೆಯರ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದೆ. ಕೂಡಲೇ ಸಂಬಂಧಿಕರು ವಾಪಾಸ್ ಆಸ್ಪತ್ರೆಗೆ ಬಂದು ವಿಚಾರಿಸಿದಾಗ ಕೊರೊನಾ ಲಸಿಕೆ ಬದಲುರೇಬಿಸ್ ಲಸಿಕೆ ನೀಡಿರುವುದು ಬೆಳಕಿಗೆ ಬಂದಿದೆ.

ಸಿಬ್ಬಂದಿಯ ನಿರ್ಲಕ್ಷ್ಯದ ವಿರುದ್ದ ಸಂಬಂಧಿಕರು ಶಾಮಿಲಿ ಜಿಲ್ಲಾ ವೈದ್ಯಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನಿರ್ಲಕ್ಷ್ಯ ವಹಿಸಿದ ಆಸ್ಪತ್ರೆಯ ಔಷಧಾಲಯ ಸಿಬ್ಬಂದಿಯನ್ನು ಕೆಲಸದಿಂದ ಅಮಾನತು ಮಾಡಿ ಆದೇಶಿಸಿದ್ದಾರೆ.

Comments are closed.