ನವದೆಹಲಿ : ದೇಶದಲ್ಲಿ 75ನೇ ಸ್ವಾತಂತ್ರ್ಯೋತ್ಸವವನ್ನು ಸರಳವಾಗಿ ಆಚರಿಸಲಾಗುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಿದ್ದು, ದೇಶವನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ.
ದೇಶಕ್ಕಾಗಿ ಹೋರಾಡಿದ ಎಲ್ಲರನ್ನೂ ಸ್ಮರಿಸಿದ ನರೇಂದ್ರ ಮೋದಿ ಅವರು ಸ್ವಾತಂತ್ರ್ಯೋತ್ಸವನ್ನು ತಂದುಕೊಟ್ಟ ಮಹಾತ್ಮಗಾಂಧೀಜಿ, ಚಂದ್ರಶೇಖರ್ ಅಜಾದ್, ರಾಣಿ ಚೆನ್ನಮ್ಮ, ಭಾರತದ ಪ್ರಥಮ ಗೃಹ ಸಚಿವ ವಲ್ಲಭ್ ಬಾಯಿ ಪಟೇಲ್ ಅವರನ್ನು ಸ್ಮರಿಸಿದ್ದಾರೆ.
ಕೊರೊನಾ ಸಂಕಷ್ಟದ ಕಾಲದಲ್ಲಿ ಆರೋಗ್ಯ ಇಲಾಖೆಯ ವೈದ್ಯರು, ದಾದಿಯರು, ಆರೋಗ್ಯ ಸಿಬ್ಬಂದಿಗಳು, ಸ್ವಚ್ಚತಾ ಕಾರ್ಯ ಮಾಡುವವರು, ವಿಜ್ಞಾನಿಗಳ ಕೊರೊನಾ ವಾರಿಯರ್ಸ್ ಹಾಗೂ ನಾಗರೀಕರ ಸೇವಾ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಭಾರತದಲ್ಲಿ ಅತಿದೊಡ್ಡ ಕೊರೋನಾ ಲಸಿಕೆ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಇದೂವರೆಗೆ ರೂ.54 ಕೋಟಿಗೂ ಹೆಚ್ಚು ಜನರು ಲಸಿಕೆ ಪಡೆದುಕೊಂಡಿದ್ದಾರೆಂದು ಎಂದಿದ್ದಾರೆ.
ದೇಶ ವಿಭಜನೆಯನ್ನೂ ನೆನೆದ ಮೋದಿ, ಆಗಸ್ಟ್ 14ನ್ನು ವಿಭಜನೆಯ ಕರಾಳ ದಿನವನ್ನಾಗಿ ಆಚರಿಸಲು ನಾವು ನಿರ್ಧಾರ ಕೈಗೊಂಡಿರುವುದಾಗಿ ಘೋಷಿಸಿದ್ದಾರೆ. ದೇಶದ ಪ್ರತೀ ಹಳ್ಳಿಗಳು ಕೂಡ ವೇಗವಾಗಿ ಬದಲಾಗುತ್ತಿವೆ. ದೇಶದ ಹಳ್ಳಿಗಳಿಗೆ ರಸ್ತೆ, ವಿದ್ಯುತ್ ಸಂಪರ್ಕ ಒದಗಿಸಲಾಗಿದೆ. ಡಿಜಿಟಲ್ ತಂತ್ರಜ್ಞಾನವನ್ನೂ ಅಳವಡಿಸಿಕೊಳ್ಳಲಾಗುತ್ತಿದೆ. ಪ್ರತೀ ಹಳ್ಳಿಗಳಿಂದಲೂ ಉದ್ಯಮಿಗಳು ಸಿದ್ದವಾಗುತ್ತಿದ್ದಾರೆ. ರೈತರ ಶಕ್ತಿಯನ್ನು ಹೆಚ್ಚಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗುವಂತೆ ಮಾಡುವ ಉದ್ದೇಶ ಹೊಂದಲಾಗಿದೆ ಎಂದಿದ್ದಾರೆ. ಇನ್ನು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಹೆಮ್ಮೆ ತಂದ ಕ್ರೀಡಾಪಟುಗಳಿಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.