ಲಕ್ಷ್ಮದ್ವೀಪ : ಪ್ರವಾಸೋದ್ಯದಿಂದಲೇ ಜನರನ್ನು ತನ್ನತ್ತ ಸೆಳೆಯುತ್ತಿರುವ ಲಕ್ಷದ್ವೀಪ ಇದೀಗ ವಿವಾದ ಕೇಂದ್ರವಾಗಿ ಮಾರ್ಪಟ್ಟಿದೆ. ಕೇಂದ್ರಾಡಳಿತ ಪ್ರದೇಶದ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಕೈಗೊಂಡಿರುವ ಹಲವು ನಿರ್ಧಾರಗಳ ವಿರುದ್ದ ಕಾಂಗ್ರೆಸ್ ಹಾಗೂ ಕೇರಳ ಸರಕಾರ ಪ್ರಬಲ ವಿರೋಧ ವ್ಯಕ್ತಪಡಿಸಿದೆ.
ಪ್ರವಾಸೋದ್ಯಮದಿಂದಲೇ ಗಮನ ಸೆಳೆದಿದ್ದರೂ ಕೂಡ ಲಕ್ಷದ್ವೀಪ ಹೇಳಿಕೊಳ್ಳುವಷ್ಟರ ಮಟ್ಟಿಗೆ ಅಭಿವೃದ್ದಿಯನ್ನು ಕಂಡಿಲ್ಲ. ಈ ನಿಟ್ಟಿನಲ್ಲಿ ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಪ್ರಫುಲ್ ಪಟೇಲ್ ಹಲವು ನಿಯಮಗಳಲ್ಲಿ ಬದಲಾವಣೆಯನ್ನು ತಂದಿದ್ದಾರೆ. ಮೀನುಗಾರಿಕಾ ಇಲಾಖೆಯಲ್ಲಿ 39 ಮಂದಿಯನ್ನು ಸಾಮೂಹಿಕವಾಗಿ ವರ್ಗಾವಣೆ ಮಾಡಲಾಗಿದೆ. ಅಲ್ಲದೇ ಮೀನುಗಾರರ ಮನೆಗಳನ್ನು ಅಭಿವೃದ್ದಿಯ ನೆಪದಲ್ಲಿ ಧ್ವಂಸಗೊಳಿಸಲಾಗಿದೆ ಅನ್ನೋ ಆರೋಪ ಕೇಳಿಬಂದಿದೆ.
ಪ್ರಮುಖವಾಗಿ ಪ್ರಫುಲ್ ಪಟೇಲ್ ಲಕ್ಷದ್ವೀಪದ ಆಡಳಿತಾಧಿಕಾರಿಯಾಗಿ ನೇಮಕವಾಗುತ್ತಿದ್ದಂತೆಯೇ ಹಲವು ಬದಲಾವಣೆಗಳನ್ನು ಜಾರಿಗೆ ತಂದಿದ್ದಾರೆ. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಮದ್ಯ ಮಾರಾಟದ ಮೇಲಿದ್ದ ನಿಷೇಧವನ್ನು ತೆರವುಗೊಳಿಸಿದ್ದಾರೆ. ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ಮಾಂಸಾಹಾರವನ್ನು ನಿಷೇಧ ಹೇರಲಾಗಿದೆ. ಇನ್ನು ಮುಸ್ಲೀಂ ಪ್ರಾಬಲ್ಯ ಹೊಂದಿರುವ ಲಕ್ಷದ್ವೀಪದಲ್ಲಿ ಗೋಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ. ಲಕ್ಷದ್ವೀಪ ಅಭಿವೃದ್ದಿ ಪ್ರಾಧಿಕಾರವನ್ನು ರಚಿಸಲಾಗಿದ್ದು, ಅಭಿವೃದ್ದಿ ಯೋಜನೆಗಾಗಿ ಖಾಸಗಿಯವರಿಂದ ಭೂಮಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಅಪರಾಧ ಪ್ರಕರಣಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಗೂಂಡಾ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಅಲ್ದಲೇ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವನ್ನು ನಿರಾಕರಿಸಲಾಗಿದೆ. ಪ್ರಫುಲ್ ಪಟೇಲ್ ಅವರು ಆಡಳಿತಾಧಿಕಾರಿಯಾದ ನಂತರದಲ್ಲಿ ಜಾರಿಗೆ ತಂದ ನಿಯಮಗಳನ್ನು ಪ್ರಬಲವಾಗಿ ಸ್ಥಳೀಯರು ಹಾಗೂ ಕೇರಳ ಪ್ರಬಲವಾಗಿ ವಿರೋಧವನ್ನು ಮಾಡುತ್ತಿದೆ.
ಈ ಹಿಂದೆ ಲಕ್ಷದ್ವೀಪದಲ ಆಡಳಿತಾಧಿಕಾರಿಯಾಗಿದ್ದ ದಿನೇಶ್ವರ ಶರ್ಮಾ ಅವರು ನಿಧನರಾದ ಬಳಿಕ 2020ರ ಡಿಸೆಂಬರ್ 5 ರಂದು ಲಕ್ಷದ್ವೀಪಕ್ಕೆ ದಾದ್ರಾ ನಾಗರ್ ಹವೇಲಿ, ದಾಮನ್ ದಿಯು ಆಡಳಿತಾಧಿಕಾರಿಯಾಗಿದ್ದ ಪ್ರಫುಲ್ ಖೋಡಾ ಪಟೇಲ್ ಅವನ್ನು ಕೇಂದ್ರ ಸರಕಾರ ಆಡಳಿತಾಧಿಕಾರಿಯಾಗಿ ನೇಮಕ ಮಾಡಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಪ್ರಫುಲ್ ಖೋಡಾ ಪಟೇಲ್ ಅವರು ಗೃಹ ಇಲಾಖೆಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು. ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ ಅಮಿತ್ ಶಾ ಜೈಲು ಸೇರುತ್ತಿದ್ದಂತೆಯೇ ಪ್ರಫುಲ್ ಖೋಡಾ ಪಟೇಲ್ ಗುಜರಾತ್ ಗೃಹ ಸಚಿವರಾಗಿಯೂ ಸೇವೆ ಸಲ್ಲಸಿದ್ದಾರೆ. ಅಷ್ಟಕ್ಕೂ ಪ್ರಫುಲ್ ಪಟೇಲ್ ಆರ್ ಎಸ್ಎಸ್ ನಾಯಕರಾಗಿರುವ ರಂಜೋದ್ಭಾಯ್ ಪಟೇಲ್ ಅವರ ಪುತ್ರ. ಇಂಜಿನಿಯರಿಂಗ್ ಪದವೀಧರಾಗಿದ್ದ ಪ್ರಫುಲ್ ಪಟೇಲ್ 2007ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದು ಸಂಪುಟ ಸಚಿವರಾಗಿಯೂ ಸೇವೆ ಸಲ್ಲಸಿದ್ದರು. ಆದರೆ 2012ರಲ್ಲಿ ಹಿಮಾತ್ ನಗರದಲ್ಲಿ ಸೋಲು ಕಂಡ ಬಳಿಕ ರಾಜಕೀಯದಿಂದ ದೂರ ಉಳಿದಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿಯಾಗುತ್ತಿದ್ದಂತೆಯೇ ಪ್ರಫುಲ್ ಖೋಡಾ ಪಟೇಲ್ ಅವರು ರಾಜಕೀಯದಲ್ಲಿ ಸಕ್ರೀಯರಾಗಿದ್ದಾರೆ.
ಪ್ರಫುಲ್ ಪಟೇಲ್ ಅವರ ನಿರ್ಧಾರದ ವಿರುದ್ದ ಬಿಜೆಪಿಯ ನಾಯಕರೇ ಅಪಸ್ವರ ಎತ್ತಿದ್ದಾರೆ. ಜನರ ವಿಶ್ವಾಸ ಪಡೆದು ನಿರ್ಧಾರ ಕೈಗೊಳ್ಳುವಂತೆಯೂ ಕೇಂದ್ರದ ನಾಯಕರು ಸೂಚನೆಯನ್ನು ನೀಡಿದ್ದಾರೆ. ಇನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪಟೇಲ್ ಅವರ ನಿಲುವಿನ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶ ಮಾಡಬೇಕೆಂದು ಪ್ರಧಾನಿಗಳಿಗೆ ಪತ್ರ ಬರೆಯುವುದಾಗಿ ಹೇಳಿದ್ದಾರೆ. ಒಟ್ಟಿನಲ್ಲಿ ತನ್ನ ನಿಸರ್ಗ ಸೌಂದರ್ಯದ ಮೂಲಕ ಶಾಂತಿಗೆ ಹೆಸರಾಗಿದ್ದ ಲಕ್ಷದ್ವೀಪವೀಗ ವಿವಾದದ ಕೇಂದ್ರವಾಗಿ ಮಾರ್ಪಟ್ಟಿರೋದು ಮಾತ್ರ ದುರಂತರವೇ ಸರಿ.