ಬೀದರ್ : ಉಗ್ರರ ವಿರುದ್ಧದ ಹೋರಾಟದ ವೇಳೆ ಗುಂಡು ತಗುಲಿ ಬೀದರ್ ಜಿಲ್ಲೆ ಔರಾದ ತಾಲೂಕಿನ ಆಲೂರ ಗ್ರಾಮದ ಯೋಧ ಬಸವರಾಜ್ ಹುತಾತ್ಮರಾಗಿದ್ದಾರೆ. ಪಂಜಾಬ್ ಗಡಿಯಲ್ಲಿ ಬಿಎಸ್ಎಫ್ ನಲ್ಲಿ ಬಸವರಾಜ್ 8 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ಹುತಾತ್ಮ ಯೋಧ ಪತ್ನಿ, ಮಗು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

2013 ರಲ್ಲಿ ಭಾರತೀಯ ಸೇನೆ ಸೇರಿದ್ದ ಬಸವರಾಜ ಇಂದೋರ್ ನಲ್ಲಿ ತರಬೇತಿ ಪಡೆದು ಬಳಿಕ ಕಲ್ಕತ್ತಾ ಹಾಗೂ ತ್ರಿಪುರಾದಲ್ಲಿ ಸೇವೆ ಸಲ್ಲಿಸಿದ್ದರು. ಕಳೆದ 20 ದಿನಗಳ ಹಿಂದಷ್ಟೇ ಪಂಜಾಬ್ ಗಡಿಗೆ ನಿಯುಕ್ತಿ ಗೊಂಡಿದ್ದ ಅವರಿಗೆ 5 ವರ್ಷಗಳ ಹಿಂದೆ ಮಂಜುಳಾ ಅವರೊಂದಿಗೆ ವಿವಾಹವಾಗಿತ್ತು.

ಇನ್ನು ಬಸವರಾಜ ಅವರ ಪಾರ್ಥಿವ ಶರೀರವನ್ನುಸ್ವಗ್ರಾಮಕ್ಕೆ ತರುವ ಬಗ್ಗೆ ಯಾವುದೇ ಮಾಹಿತಿಗಳು ಬಂದಿಲ್ಲ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮಾಹಿತಿಯ ಬಳಿಕ ಸ್ವಗ್ರಾಮದಲ್ಲೇ ಯೋಧನ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.