ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟ ಪುನರಚನೆಯಾಗುತ್ತಿದೆ. ಈ ಹೊತ್ತಲೇ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಸೇರಿದಂತೆ ಒಟ್ಟು ನಾಲ್ವರು ಸಚಿವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಮಹತ್ವದ ಬೆಳವಣಿಗೆಯೊಂದರಲ್ಲಿ ಕರ್ನಾಟಕದ ಸಂಸದ ಡಿ.ವಿ.ಸದಾನಂದ ಗೌಡ, ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ , ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ದೇಬಶ್ರೀ ಚೌದರಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದಾರೆ. ಹೀಗಾಗಿ ಇನ್ನಷ್ಟು ಹೊಸಬರಿಗೆ ಕೇಂದ್ರ ಸಂಪುಟದಲ್ಲಿ ಅವಕಾಶ ಸಿಗೋದು ಖಚಿತವಾಗಿದೆ.
ಮುಂಬರುವ ವಿಧಾನಸಭಾ ಚುನಾವಣೆಯನ್ನು ದೃಷ್ಠಿಯಲ್ಲಿಟ್ಟುಕೊಂಡು ಕ್ಯಾಬಿನೆಟ್ ರಚಿಸಲಾಗುತ್ತಿದ್ದು, ಈ ಬಾರಿ ಅತೀ ಹೆಚ್ಚು ಹಿಂದುಳಿದ ವರ್ಗಗಳ ಸಂಸದರಿಗೆ ಸಚಿವ ಸ್ಥಾನ ಲಭಿಸುವ ಸಾಧ್ಯತೆಯಿದೆ. ಅದ್ರಲ್ಲೂ ಜ್ಯೋತಿರಾದಿತ್ಯ ಸಿಂಧಿಯಾ, ಸರ್ಬಾನಂದ ಸೋನೊವಾಲ್, ನಾರಾಯಣ್ ರಾಣೆ ಮತ್ತು ಪಶುಪತಿ ನಾಥ್ ಪರಾಸ್ ಅವರಂತಹ ಹೆಸರುಗಳು ಹೊಸ ಸಂಪುಟ ಸೇರ್ಪಡೆಯಾಗಲಿದೆ ಎಂಬುದಾಗಿ ಕೇಳಿ ಬರುತ್ತಿದೆ.
ಚುನಾವಣೆ ನಡೆಯಲಿರುವ ರಾಜ್ಯಗಳ ಜೊತೆ ಜೊತೆಗೆ ಉಳಿದ ರಾಜ್ಯಗಳಿಗೆ ಹಾಗೂ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗುತ್ತದೆ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ ಸಂಪುಟ ಪುನರಚನೆಯ ಹೊತ್ತಲೇ ಹಿರಿಯ ಸಚಿವರಿಗೆ ಸಂಪುಟದಿಂದ ಕೋಕ್ ನೀಡಲಾಗಿದೆ.