ಭೂಪಾಲ್ : ಮದ್ಯ ಸಿಗದೆ ಸ್ಯಾನಿಟೈಸರ್ ಕುಡಿದು ಇಬ್ಬರು ಯುವಕರು ಸಾವನ್ನಪ್ಪಿ, ಓರ್ವ ಗಂಭೀರವಾಗಿ ಅಸ್ವಸ್ಥಗೊಂಡಿರುವ ಘಟನೆ ಮಧ್ಯಪ್ರದೇಶದ ಬಿಂಡ್ ಜಿಲ್ಲೆಯಲ್ಲಿ ನಡೆದಿದೆ.

ಚತುರ್ವೇದಿ ನಗರದ ರಿಂಕು ಲೋದಿ ಹಾಗೂ ಅಮಿತ್ ರಜಪೂತ್ ಎಂಬವರೇ ಸಾವನ್ನಪ್ಪಿದ ದುರ್ದೈವಿಗಳು. ಸಂಜು ಸ್ಯಾನಿಟೈಸರ್ ಕುಡಿದಿದ್ದ ಸಂಜು ಎಂಬಾತ ಗಂಭೀರವಾಗಿ ಅಸ್ವಸ್ಥಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ.
ಹೋಳಿಯ ಹಿನ್ನೆಲೆಯಲ್ಲಿ ಮದ್ಯದಂಗಡಿ ತೆರವಿಗೆ ನಿಷೇಧ ಹೇರಲಾಗಿತ್ತು. ಈ ಹಿನ್ನೆಲೆಯಲ್ಲಿ ಮೂವರು ಯುವಕರು ಡ್ರಿಂಕ್ಸ್ ಪಡೆಯಲು ಎಲ್ಲೆಡೆ ಸುತ್ತಿದ್ದಾರೆ. ಆದರೆ ಮದ್ಯ ಸಿಗದೇ ಇದ್ದಾಗ ಕೊನೆಗೆ ಸ್ಯಾನಿಟೈಸರ್ ಕುಡಿದಿದ್ದು ಈ ದುರ್ಘಟನೆ ಸಂಭವಿಸಿದೆ.

ವಿಷಯ ತಿಳಿಯುತ್ತಿದ್ದಂತೆಯೇ ಮೃತರ ಮನೆಗಳಿಗೆ ಆಗಮಿಸಿದ್ದ ಪೊಲೀಸರು ಸ್ಯಾನಿಟೈಟರ್ ಬಾಟಲಿಗಳನ್ನು ವಶಕ್ಕೆ ಪಡೆದಿದ್ದಾರೆ. ಸಾಮಾನ್ಯವಾಗಿ ಸ್ಯಾನಿಟೈಸರ್ ನಲ್ಲಿ ಎಥೆನಾಲ್ ಅಂಶ ಹೆಚ್ಚಾಗಿರುವುದರಿಂದ ದೇಹದ ಮೇಲೆ ಗಂಭೀರವಾಗಿ ಪರಿಣಾಮವನ್ನು ಬೀರುತ್ತಿದೆ. ಘಟನೆಗೆ ಸಂಬಂಧಿಸಿದಂತೆ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಬಿಂದ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಸಿಂಗ್ ತಿಳಿಸಿದ್ದಾರೆ.