ಚಿತ್ರದುರ್ಗ : ಸಾಹಿತ್ಯ ಕ್ಷೇತ್ರದ ಹಿರಿಯ ಕೊಂಡಿಯೊಂದು ಕಳಚಿದೆ. ಖ್ಯಾತ ಹಿರಿಯ ಸಾಹಿತಿ ಕನ್ನಡ ಕಿಂಕರ, ಭೀಮಯ್ಯ ಮೇಷ್ಟ್ರು ಎಂದೇ ಕರೆಯಿಸಿಕೊಳ್ಳುತ್ತಿದ್ಧ ಭೀಮಯ್ಯ (96 ವರ್ಷ) ನಿಧನರಾಗಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಮಾರೇನಹಳ್ಳಿ ಗ್ರಾಮದ ಕೃಷಿ ಕುಟುಂಬದಲ್ಲಿ 1925ರಲ್ಲಿ ಭೀಮಯ್ಯ ಜನಿಸಿದರು. ಬಾಲ್ಯದಿಂದಲೇ ಭೀಮಯ್ಯ ಅವರು ತನ್ನ ತಾತ ಸಣ್ಣಲಿಂಗೇಗೌಡ ಪ್ರಭಾವಕ್ಕೆ ಒಳಗಾಗಿ ಸಾಹಿತ್ಯ ಲೋಕದಲ್ಲಿ ತಮ್ಮನ್ನು ಗುರುತಿಸಿ ಕೊಂಡಿದ್ದಾರೆ.
ಹಿರಿಯೂರಿನಲ್ಲಿ ನಡೆದಿದ್ದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿದ್ದರು. ಪಟ್ಟನಾಯಕನಹಳ್ಳಿ ಮಠದ ‘ಸ್ಪಟಿಕಶ್ರೀ’ ಪ್ರಶಸ್ತಿ (2010), ತತ್ವಜ್ಞಾನಿ ಪಟೇಲ್ ಬೊಮ್ಮೆಗೌಡ ಸ್ಮಾರಕದ ತತ್ವಶ್ರೀ ಪ್ರಶಸ್ತಿಯನ್ನು ಪಡೆದಿದ್ದರು. ಆನಂದ ಮಠ’ ಎಂಬ ಸಂಘವನ್ನು ಸ್ಥಾಪಿಸಿದ್ದರು. ನಾಟಕ, ಕಾವ್ಯ, ವಚನಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದರು. ಭೀಮಯ್ಯ ‘ಚಿದಾನಂದ ಲೀಲೆ ನಾಟಕ, ರಾಮಾಯಣ ಸಂದರ್ಶನ, ಮಂಕು ಭೀಮನ ಬೊಗಳೆ ಕೃತಿಗಳನ್ನು ರಚಿಸಿದ್ದಾರೆ.
ಹಿರಿಯ ಸಾಹಿತಿ ಭೀಮಯ್ಯ ಅವರು ಇಬ್ಬರು ಪುತ್ರಿಯರು, ಮೂವರು ಪುತ್ರರು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.