ಚಂಡೀಗಢ: ಹರಿಯಾಣಾ(Hariyana) ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಕುಸ್ತಿಪಟು ವಿನೀಶಾ ಪೋಗಟ್ (Vinesh Phogat) ಗೆಲುವು ಸಾಧಿಸಿದ್ದಾರೆ. ಚೊಚ್ಚಲ ಚುನಾವಣೆಯಲ್ಲಿಯೇ ವಿನೀಶಾ ವಿಜಯ ಸಾಧಿಸಿದ್ದು, ಕಾಂಗ್ರೆಸ್ ಪಕ್ಷದಿಂದ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ.
ಜಿಂಡ್ ಜಿಲ್ಲೆಯ ಜುಲಾನಾ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಫರ್ಧಿಸಿದ್ದ ವಿನೀಶಾ ಪೋಗಟ್, ತಮ್ಮ ಪ್ರತಿಸ್ಫರ್ಧಿ ಬಿಜೆಪಿ ಅಭ್ಯರ್ಥಿಯಾಗಿದ್ದ ಯೋಗೇಶ್ ಕುಮಾರ್ ಬೈರಾಗಿ ಅವರನ್ನು 6,015 ಮತಗಳ ಅಂತರದಿಂದ ಸೋಲಿಸಿದ್ದಾರೆ. ಇಂಡಿಯನ್ ನ್ಯಾಷನಲ್ ಲೋಕದಳ ಅಭ್ಯರ್ಥಿಯಾಗಿದ್ದ ಸುರೀಂದರ್ ಲಾಥೆರ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.ಸೆಪ್ಟೆಂಬರ್ 6 ರಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದ ವಿನೀಶಾ ಪೋಗಟ್ ಅವರನ್ನು ಜುಲಾನಾ ಕ್ಷೇತ್ರದಿಂದ ಕಣಕ್ಕಿಳಿಸಲಾಗಿತ್ತು.

Image Credit to Original Source
ಇಂದು ಮತ ಎಣಿಕೆ ಆರಂಭವಾಗುತ್ತಿದ್ದಂತೆಯೇ ಆರಂಭಿಕ ಸುತ್ತಿನಲ್ಲಿ ಮುನ್ನಡೆ ಪಡೆದಿದ್ದ ವಿನೀಶಾ ಪೋಗಟ್ ಒಂದು ಸುತ್ತಿನಲ್ಲಿ ಹಿನ್ನಡೆ ಕಂಡಿದ್ದರು. ನಂತರ ಸತತವಾಗಿ ಮುನ್ನಡೆ ಕಾಯ್ದುಕೊಂಡಿದ್ದ ವಿನೀಶಾ ಬಳಿಕ ಸುಲಭ ಜಯ ಸಾಧಿಸಿದರು. ಬಿಜೆಪಿ ಅಭ್ಯರ್ಥಿಯಾಗಿದ್ದ ಯೋಗೇಶ್ ಬೈರಾಗಿ ಮಾಜಿ ಸೇನಾ ಕ್ಯಾಪ್ಟನ್ ಆಗಿದ್ದು, ವಿಮಾನ ಪೈಲಟ್ ಆಗಿಯೂ ಸೇವೆ ಸಲ್ಲಿಸಿದ್ದರು.
ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷರಾಗಿದ್ದ ಮಾಜಿ ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿ ವಿನೀಶಾ ಪೋಗಟ್ ಮುಂಚೂಣಿಯಲ್ಲಿದ್ದರು.
ಕಳೆದ ಆಗಸ್ಟ್ ತಿಂಗಳಿನಲ್ಲಿ ನಡೆದಿದ್ದ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಮಹಿಳೆಯರ ಐವತ್ತು ಕೆಜಿ ಕುಸ್ತಿ ವಿಭಾಗದಲ್ಲಿ ಫೈನಲ್ ಗೆ ತಲುಪಿದ್ದ ವಿನೀಶಾ ಪೋಗಟ್, ಕೊನೆಯ ಕ್ಷಣದಲ್ಲಿ ತೂಕ ಹೆಚ್ಚಾಗಿದ್ದ ಕಾರಣಕ್ಕೆ ಸ್ಫರ್ಧೆಯಿಂದ ಅನರ್ಹಗೊಂಡಿದ್ದರು. ಒಲಿಂಪಿಕ್ಸ್ ಮುಗಿಸಿ ಭಾರತಕ್ಕೆ ವಾಪಾಸಾಗಿದ್ದ ಪೋಗಟ್, ಕೆಲವೇ ದಿನಗಳಲ್ಲಿ ಕುಸ್ತಿ ಕ್ರೀಡೆಯಿಂದ ನಿವೃತ್ತಿ ಘೋಷಣೆ ಮಾಡಿದ್ದರಲ್ಲದೇ ಬಳಿಕ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗಿದ್ದರು.
ವಿನೀಶಾ ಪೋಗಟ್ ಗೆಲುವಿನಿಂದ ಹತ್ತೊಂಬತ್ತು ವರ್ಷಗಳ ಬಳಿಕ ಜುಲಾನಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದೆ. 2005 ರಲ್ಲಿ ಕೊನೆಯ ಬಾರಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ವಿಜಯ ಸಾಧಿಸಿತ್ತು. 2009ರಿಂದ 2019 ರವರೆಗೆ ಜುಲಾನಾ ಕ್ಷೇತ್ರ ಐಎನ್ ಎಲ್ ಡಿ ಕೈಯಲ್ಲಿತ್ತು.
ವಿನೀಶಾ ಪೋಗಟ್ ಸಹೋದರಿ ಸಂಬಂಧಿಯಾಗಿರುವ ಬಬಿತಾ ಪೋಗಟ್ ಕೂಡಾ ಕುಸ್ತಿಪಟುವಾಗಿದ್ದು, 2019ರ ವಿಧಾನಸಭಾ ಚುನಾವಣೆಯಲ್ಲಿ ಚಾರ್ಖಿ ದದ್ರಿ ಕ್ಷೇತ್ರದಿಂದ ಹರಿಯಾಣಾ ವಿಧಾನಸಭೆಗೆ ಸ್ಪರ್ಧಿಸಿ ಸೋತಿದ್ದರು.

Image Credit to Original Source