ಕುಂದಾಪುರ : ಬಾರ್‌ನಲ್ಲಿ ಊಟ ಮಾಡುತ್ತಿದ್ದವರ ಗಲಾಟೆ, ಸೋಡಾ ಬಾಟಲಿಯಿಂದ ಹಲ್ಲೆ
ಸಾರ್ವಜನಿಕರು ಗಾಯಗೊಂಡಿದ್ದ ದಿನೇಶ್ ಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯ್ತು, ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
By Arun Gundmi | ಅರುಣ್ ಗುಂಡ್ಮಿ · Editor-in-Chief
1 min read
ಕುಂದಾಪುರ: ಬಾರ್‌ನಲ್ಲಿ ಊಟ ಮಾಡುತ್ತಿದ್ದ ವೇಳೆಯಲ್ಲಿ ಮಾತಿಗೆ ಮಾತು ಬೆಳೆದು ಸೋಡಾ ಬಾಟಲಿಯಿಂದ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಕುಂದಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಬಗ್ವಾಡಿಯಲ್ಲಿ ನಡೆದಿದೆ. ಈ ಕುರಿತು ನಾಲ್ವರ ವಿರುದ್ದ ಪ್ರಕರಣ ದಾಖಲಾಗಿದೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ದೇವಲ್ಕುಂದ ಗ್ರಾಮದ ದಿನೇಶ್ ಲೂವಿಸ್ (36) ಎಂಬುವವರು ಬಗ್ವಾಡಿ ಕ್ರಾಸ್ ನಲ್ಲಿರುವ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ಊಟ ಮಾಡುವುದಕ್ಕೆ ಕುಳಿತಿದ್ದರು. ಇದೇ ವೇಳೆಯಲ್ಲಿ ಪಕ್ಕದ ಟೇಬಲ್‌ನಲ್ಲಿ ಪರಿಚಯಸ್ಥರಾದ ಸಚಿನ್, ರಜತ್ ಶ್ರೀಕಾಂತ್ ಶೆಟ್ಟಿ ಮತ್ತು ಮಂಜು ಶೆಟ್ಟಿ ಕೂಡ ಊಟ ಮಾಡುತ್ತಾ ಕುಳಿತಿದ್ದರು. ಅಲ್ಲದೇ ಜೋರಾದ ಧ್ವನಿಯಲ್ಲಿ ಮಾತನಾಡುತ್ತಿದ್ದರು.
ಅವರ ಬಳಿಗೆ ತೆರಳಿದ ದಿನೇಶ್ ಲೂವಿಸ್ ನೀವು ಹೀಗೆಲ್ಲಾ ಕೂಗಾಡಿದ್ರೆ ನಮಗೆ ತೊಂದರೆ ಆಗುತ್ತೆ. ನಿಧಾನಕ್ಕೆ ಮಾತನಾಡಿ ಎಂದು ಮನವಿ ಮಾಡಿಕೊಂಡಿದ್ದರು. ಇಷ್ಟಕ್ಕೆ ಕೋಪಗೊಂಡ ರಜತ್ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ದೂಡಿದ್ದಾನೆ.
ಸೋಡಾ ಬಾಟಲಿಯಿಂದ ಹಲ್ಲೆ
ಇಬ್ಬರ ನಡುವೆ ಮಾತಿಗೆ ಮಾತು ಬೆಳೆಯುತ್ತಿದ್ದಂತೆಯೇ ಸಚಿನ್ ಎಂಬಾತ ಸೋಡಾ ಬಾಟಲಿಯಿಂದ ದಿನೇಶ್ ತಲೆಗೆ ಬಲವಾಗಿ ಹೊಡೆದಿದ್ದಾನೆ. ಇದರಿಂದಾಗಿ ಬಾಟಲಿ ಒಡೆದು ದಿನೇಶ್ ತಲೆಗೆ ಗಾಯವಾಗಿದ್ದು, ಬಾಟಲಿಯ ಚೂರುಗಳಿಂದಾಗಿ ಎಡ ಕೆನ್ನೆಗೆ ಗಂಭೀರ ಗಾಯವಾಗಿದೆ. ಈ ವೇಳೆ ಶ್ರೀಕಾಂತ್ ಶೆಟ್ಟಿ ಮತ್ತು ಮಂಜು ಶೆಟ್ಟಿ ಕೂಡ ದಿನೇಶ್‌ಗೆ ಕೈಯಿಂದ ಹೊಡೆದು, ಕಾಲಿನಿಂದ ಒದ್ದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ವೇಳೆಯಲ್ಲಿ ಬಾರಿನಲ್ಲಿದ್ದವರು, ಸಾರ್ವಜನಿಕರು ಹಲ್ಲೆಯನ್ನು ತಡೆದಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ ಬಳಿಕ ಆರೋಪಿಗಳು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಕೂಡಲೇ ಸಾರ್ವಜನಿಕರು ಗಾಯಗೊಂಡಿದ್ದ ದಿನೇಶ್ ಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯ್ತು, ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಗಾಯಾಳು ದಿನೇಶ್ ನೀಡಿರುವ ದೂರಿನ ಆಧಾರದ ಮೇಲೆ ಕುಂದಾಪುರ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪೊಲೀಸರ ತನಿಖೆಯ ನಂತರವಷ್ಟೇ ಸತ್ಯಾಸತ್ಯತೆ ಹೊರಬರೋದಕ್ಕೆ ಸಾಧ್ಯ.
Topics

