ಕುಂದಾಪುರ : 9 ತುಂಡುಗಳಾಗಿದ್ದ ಅಲ್ವಿನ್ ಪ್ರಕಾಶ್ ಕುಂದರ್ ಹುಟ್ಟೂರಲ್ಲಿ ಅಂತ್ಯಕ್ರೀಯೆ, ಆರೋಪಿಗಳ ಪತ್ತೆಗೆ ಆಗ್ರಹ
ಪ್ರಕಾಶ್ ಕುಂದರ್ ಮನೆಗೆ ಪಾರ್ಥಿವ ಶರೀರ ತರಲಾಯಿತು. ಧರ್ಮ ಗುರುಗಳು ಪ್ರಾರ್ಥನೆ ನಡೆಸಿಕೊಟ್ಟರು. ನೂರಾರು ಬಂಧುಗಳು ಭಾಗಿಯಾದರು.
By ಅಶ್ವಥ್ ಆಚಾರ್ಯ | Ashwath Acharya
1 min read
ಕುಂದಾಪುರ : ಶಾರ್ಜಾದಲ್ಲಿ ಭೀಕರವಾಗಿ ಕೊಲೆಗೀಡಾದ, ಉಡುಪಿ ಮೂಲದ ಅಲ್ವಿನ್ ಪ್ರಕಾಶ್ ಕುಂದರ್ ಶವ ತವರಿಗೆ ಬಂದಿದೆ. ಕುಟುಂಬಿಕರು ಕಳೆದ ಎರಡು ತಿಂಗಳಿಂದ ಸಾಹಸ ಪಟ್ಟು ಕೊನೆಗೂ ಮನೆಮಗನಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಒಂಬತ್ತು ತುಂಡುಗಳಾಗಿದ್ದ ಮೃತಶರೀರ, ಊರಿಗೆ ಊರನ್ನೇ ಮನಕಲಕುವಂತೆ ಮಾಡಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಶೀಘ್ರ ಪತ್ತೆಗೆ ನಾಗರಿಕರು ಒತ್ತಾಯಿಸಿದ್ದಾರೆ.
ಇದೊಂದು ಅತಿಭೀಕರ ಕೃತ್ಯ! ಕೊಲೆ ಅನ್ನೋದೇ ಅಮಾನುಷ ಅದರಲ್ಲೂ ಈ ಘಟನೆ ಅಮಾನವೀಯ. ಉಡುಪಿಯ ಕುಂದಾಪುರ ಮೂಲದ ಪ್ರಕಾಶ್ ಕುಂದರ್, ಶವ ಕೊನೆಗೂ ಶಾರ್ಜಾದಿಂದ ತವರಿಗೆ ಬಂದಿದೆ. ಬಹುತೇಕ ಜುಲೈ ತಿಂಗಳ ಕೊನೆಯ ಭಾಗದಲ್ಲಿ ಕೊಲೆ ನಡೆದಿದ್ದು, ತಡವಾಗಿ ಕುಟುಂಬಕ್ಕೆ ಗೊತ್ತಾಗಿತ್ತು.
ವಿಷಯ ತಿಳಿಯುತ್ತಿದ್ದಂತೆ ಶವ ತರಲು ಕುಟುಂಬ ಸದಸ್ಯರು ಹರಸಾಹಸ ಪಟ್ಟರು. ಕೊನೆಗೂ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನಪ್ರತಿನಿಧಿಗಳ ಸತತ ಪ್ರಯತ್ನದಿಂದ, ಮೃತ ಶರೀರ, ಮುಚ್ಚಿದ ಬಾಕ್ಸ್ ನಲ್ಲಿ ಮನೆಗೆ ಬಂದಿದೆ.
ಕುಂದಾಪುರದಲ್ಲಿ ಮಣ್ಣಾದ ಪ್ರಕಾಶ್ ಕುಂದರ್
ಶುಕ್ರವಾರ ಮುಂಜಾನೆ ಮಂಗಳೂರು ವಿಮಾನ ನಿಲ್ದಾಣಕ್ಕೆ, ತೆರಳಿ ಸಹೋದರ ಪ್ರಶಾಂತ್ ಕುಂದರ್ ಶವಪೆಟ್ಟಿಗೆ ಪಡೆದಿದ್ದಾರೆ. ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂಎ ಗಫೂರ್, ಸ್ಥಳದಲ್ಲಿ ಇದ್ದು ನೆರವು ನೀಡಿದ್ದಾರೆ. ಬಳಿಕ ಆಂಬುಲೆನ್ಸ್ ನಲ್ಲಿ ಕುಂದಾಪುರ ಪೇಟೆಯ ಪ್ರಕಾಶ್ ಕುಂದರ್ ಮನೆಗೆ ಪಾರ್ಥಿವ ಶರೀರ ತರಲಾಯಿತು. ಧರ್ಮ ಗುರುಗಳು ಪ್ರಾರ್ಥನೆ ನಡೆಸಿಕೊಟ್ಟರು. ನೂರಾರು ಬಂಧುಗಳು ಭಾಗಿಯಾದರು.
ಶೀಘ್ರದಲ್ಲೇ ಆರೋಪಿಗಳ ಪತ್ತೆ : ಸಂಸದ ಶ್ರೀನಿವಾಸ ಪೂಜಾರಿ
ಎರಡು ತಿಂಗಳ ಹಿಂದೆ ಕೊಲೆ ನಡೆದ ಕಾರಣ ಪೆಟ್ಟಿಗೆಯೊಳಗಿಂದ ಶವದ ಮುಖದರ್ಶನ ಮಾಡಲಿಲ್ಲ. ಸಂಪೂರ್ಣ ಫ್ರೀಜ್ ಮಾಡಿದ ಸ್ಥಿತಿಯಲ್ಲಿ ಶವವನ್ನು ರವಾನಿಸಲಾಗಿತ್ತು. ಈ ಭೀಕರ ಕೊಲೆ ಕೇವಲ ಕುಟುಂಬ ಮಾತ್ರವಲ್ಲ ದೇಶವನ್ನೇ ಬೆಚ್ಚಿ ಬೀಳಿಸಿದೆ. ಆರೋಪಿಗಳ ಪತ್ತೆಗೆ ಎಲ್ಲಾ ರೀತಿಯ ಪ್ರಯತ್ನ ಮಾಡುವುದಾಗಿ ಅಂತಿಮ ದರ್ಶನ ಕೈಗೊಂಡ ಸಂಸದ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದ್ದಾರೆ.
ಅಂತಿಮ ನಮನ ಸಲ್ಲಿಸಿದ ಬಳಿಕ ಶವವನ್ನು ಕುಂದಾಪುರ ಶಾಸ್ತ್ರೀ ಸರ್ಕಲ್ ಬಳಿಯ, ಪ್ರೊಟೆಸ್ಟೆಂಟ್ ಸಿ ಎಸ್ ಐ ಕೃಪಾ ಧಫನಭೂಮಿಗೆ ತರಲಾಯಿತು. ಇಲ್ಲೂ ಕೂಡ ನೂರಾರು ಬಂಧುಗಳು ಸೇರಿದ್ದರು. ಕೊಲೆಯ ಭೀಕರತೆ ಕಂಡು ನಾಗರಿಕರು ಮರುಗಿದರು. ಈ ಘಟನೆಯ ಬಳಿಕ ಮೃತರ ಪತ್ನಿ ಟೀನ ಕುಂದರ್ ಹಾಗೂ ಪುತ್ರ ಕಣ್ಮರೆಯಾಗಿದ್ದಾರೆ.
ಸರಕಾರಕ್ಕೆ ಅಲ್ವಿನ್ ಪ್ರಕಾಶ್ ಕುಂದರ್ ಕುಟುಂಬಸ್ಥರ ಮನವಿ
ಶಾರ್ಜಾದಿಂದ ಪರಾರಿಯಾಗಿ ಭಾರತ ತಲುಪಿದ್ದಾರೆ. ಹಾಗಾಗಿ ಭಾರತದಲ್ಲಿ ಅವರನ್ನು ಪತ್ತೆ ಮಾಡಬೇಕು. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲು ಅನುಕೂಲವಾಗುವಂತೆ ಕ್ರಮವಹಿಸಬೇಕೆಂದು ಎಂದು ಕರಾವಳಿ ಅಭಿವೃದ್ದಿ ಮಂಡಳಿ ಅಧ್ಯಕ್ಷ ಎಂಎ ಗಫೂರ್ ಹಾಗೂ ಪ್ರಕಾಶ್ ಕುಂದರ್ ಅವರ ಸಹೋದರ ಪ್ರಶಾಂತ್ ಕುಂದರ್ ಆಗ್ರಹಿಸಿದ್ದಾರೆ.
ನೊಂದ ಕುಟುಂಬಕ್ಕೆ ಎಲ್ಲಾ ರೀತಿಯ ಕಾನೂನು ಸಹಾಯ ದೊರಕಿಸಿ ಕೊಡುವುದಾಗಿ ಜನಪ್ರತಿನಿಧಿಗಳು ಭರವಸೆ ನೀಡಿದ್ದಾರೆ. ಕೇಂದ್ರ ಸರ್ಕಾರದ ಮೂಲಕ ವಿದೇಶಾಂಗ ಇಲಾಖೆಯ ಸಂಪರ್ಕ ಮಾಡಿದ್ದು, ದೇಶ ಮತ್ತು ವಿದೇಶ ಎರಡು ಕಡೆಗಳಲ್ಲಿ ತನಿಖೆ ನಡೆಸಿ ನ್ಯಾಯ ನೀಡಬೇಕೆಂದು ಸಹೋದರ ಆಗ್ರಹಿಸಿದ್ದಾರೆ.
ಭಾರತಕ್ಕೆ ಬಂದಿರುವ ಪತ್ನಿಯ ಸುಳಿವು ಪತ್ತೆ ಮಾಡುವುದು, ಇಲಾಖೆಗೆ ದೊಡ್ಡ ಕೆಲಸವೇನಲ್ಲ. ಶೀಘ್ರ ಆರೋಪಿಗಳ ಪತ್ತೆಯಾಗಲಿ ಅನ್ನೋದು ನಾಗರಿಕರ ಒತ್ತಾಯ.
Topics
ಸಂಬಂಧಿತ ಸುದ್ದಿಗಳು
udupi
ಕೋಟೇಶ್ವರ : ಸಹಕಾರಿ ಸಂಘದ ಸಿಇಓ ರಾಘವೇಂದ್ರ ಜೋಗಿ ಆತ್ಮಹತ್ಯೆ
udupi
ಕುಂದಾಪುರಕ್ಕೆ ಬಂದ ಅಲ್ವಿನ್ ಪ್ರಕಾಶ್ ಕುಂದರ್ ಮೃತದೇಹ
udupi
ಪಡುಬಿದ್ರಿ : ಸಿಗಡಿ ಸಾಕಾಣಿಕೆಗೆ ಕರ್ನಾಟಕ ಬ್ಯಾಂಕ್ನಿಂದ 3 ಕೋಟಿ ಸಾಲ ಪಡೆದು ವಂಚನೆ, ನಾಲ್ವರ ವಿರುದ್ದ ಪ್ರಕರಣ ದಾಖಲು
udupi

