ರಷ್ಯಾ ಉಕ್ರೇನ್ ವಿರುದ್ಧ (Russia vs Ukraine War) ಸಮರ ಸಾರಿದೆ. ಸಾಮಾಜಿಕ ಜಾಲತಾಣಗಳಲ್ಲಿ ಯುದ್ಧದ ಭಯಂಕರ ದೃಶ್ಯಗಳು ಹರಿದಾಡುತ್ತಿವೆ. ಅಲ್ಲೆಲ್ಲೋ ಯುದ್ಧ ನಡೆಯುತ್ತಿದ್ದರೂ ಇಲ್ಲೆಲ್ಲೋ ವಾಸಿಸುವ ನಮಗೂ ಯುದ್ಧ ನಡುಕ ಹುಟ್ಟಿಸುತ್ತಿದೆ. ಈಗಾಗಲೇ ಚಿನ್ನ ಬೆಳ್ಳಿ ತೈಲ ಬೆಲೆಗಳಲ್ಲಿ ಗಣನೀಯ ಏರಿಳಿತ (Gold Silver Price) ಆರಂಭವಾಗಿದೆ. ಯುದ್ಧ ಎಂದರೆ ಹಾಗೇ, ಸೋತವನು ಸತ್ತ, ಗೆದ್ದವನು ಸೋತ ಎಂಬ ಮಾತಿದೆ ನಮ್ಮಲ್ಲಿ. ಜನಸಾಮಾನ್ಯರ ಜೀವನಕ್ಕೆ ಬೆಂಕಿ ಇಡುವ ಯುದ್ಧಗಳು ಶಾಂತಿಯನ್ನು ಶತಮಾನಗಳ ಕಾಲ ಕಲಕಿಬಿಡುತ್ತವೆ. ಜೊತೆಗೆ ಸಾಮಾಜಿಕ ಬೆಳವಣಿಗೆ, ಸಂಸ್ಕೃತಿ, ಕಲೆ, ಸಾಹಿತ್ಯಗಳನ್ನು ನುಚ್ಚುನೂರು ಮಾಡುವ ಅಪಾಯವೂ ಇದ್ದೇ ಇದೆ. ರಷ್ಯಾ ಈಗಷ್ಟೇ ಉಕ್ರೇನ್ ಮೇಲೆ ನೇರವಾಗಿ ಯುದ್ಧ ಘೋಷಿಸಿದರೂ ಬಹು ಹಿಂದಿನಿಂದಲೂ ಹೇಗೆ ನಿರಂತರವಾಗಿ ಉಕ್ರೇನ್‌ನನ್ನು ಹಂತಹಂತವಾಗಿ ವಶಪಡಿಸಿಕೊಳ್ಳುತ್ತಲೇ ಇತ್ತು ಎಂಬ ವಿಶ್ಲೇಷಣೆಗಳು ಹರಿದಾಡುತ್ತಿವೆ. ಭಾಷೆ-ಸಂಸ್ಕೃತಿಗಳನ್ನು ಹತ್ತಿಕ್ಕುವ ಮೂಲಕ ಇಡೀ ದೇಶವನ್ನೇ ವಶಪಡಿಸಿಕೊಳ್ಳುವ ಪರೋಕ್ಷ ಆಕ್ರಮಣದ ಕುರಿತು ಓದಲೇಬೇಕಾದ ಆಯಾಮವೊಂದನ್ನು ಸಾಹಿತಿ, ಕಾದಂಬರಿಗಾರ್ತಿ ಪಲ್ಲವಿ ಇಡೂರು ಅವರು (Russia vs Ukraine Opinion) ವಿಶ್ಲೇಷಿಸಿದ್ದಾರೆ. ಅವರು ಫೇಸ್‌ಬುಕ್ ಗೋಡೆಯಲ್ಲಿ ಲಗ್ತತ್ತಿಸಿದ ಬರಹವನ್ನು ಕೃತಜ್ಞತಾಪೂರ್ವಕವಾಗಿ ಇಲ್ಲಿ ಪ್ರಕಟಿಸಲಾಗಿದೆ. ಸಂಕ್ಷಿಪ್ತ ಬರಹದ ಓದು ನಿಮಗಾಗಿ ಇಲ್ಲಿದೆ.
1800ರ ಸುಮಾರಿನಿಂದಲೇ systematically,ಹಂತ ಹಂತವಾಗಿ ಯುಕ್ರೇನ್ ನ ಮೂಲ ನಿವಾಸಿಗಳನ್ನು ಸದೆ ಬಡಿಯುತ್ತ, ಅವರ ಭಾಷೆಯ ಮೇಲೆ ನಿರ್ಬಂಧ ಹೇರುತ್ತಾ ಬಂದ ರಷ್ಯಾದ ರಾಜಮನೆತನದಿಂದ ಹಿಡಿದು ಮುಂದೆ ಬಂದ ಸರಕಾರಗಳು, ಈಗ ಹೇಳುವುದು ಯುಕ್ರೇನ್ ಮತ್ತು ರಷ್ಯಾ ಒಂದೇ. ನಾವು ಅದನ್ನು ನಮ್ಮ ವಶ ಮಾಡಿಕೊಳ್ಳುತ್ತೇವೆ. ಇವತ್ತು ಯುಕ್ರೇನ್ ನಲ್ಲಿ ಪ್ರತೀ 6ರಲ್ಲಿ 3 ಜನ ರಷ್ಯಾ ಭಾಷೆ ಮಾತನಾಡುತ್ತಾರೆ. ಪೂರ್ವ ಯುಕ್ರೇನ್ ಸಂಪೂರ್ಣ ರಷ್ಯಾ ಹಿಡಿತದಲ್ಲಿದೆ. ಪಶ್ಚಿಮ ಯುಕ್ರೇನ್ ಗೆ ಯುರೋಪಿಯನ್ ಸಂಸ್ಕೃತಿ ಹಾಗೂ ಅಭಿವೃದ್ಧಿಯ ಒಲವಿರುವುದರಿಂದ ಹಾಗೂ ರಷ್ಯಾದವರ ಧೋರಣೆ ಗೊತ್ತಿರುವುದರಿಂದ ರಷ್ಯಾವನ್ನು ವಿರೋಧಿಸುತ್ತಿದೆ. ಇದರ ಇತಿಹಾಸ ಇನ್ನೂ ದೊಡ್ಡದಿದ್ದರೂ ಭಾಷೆಯೆನ್ನುವುದು ಎಷ್ಟು ಮುಖ್ಯವೆನ್ನುವುದಕ್ಕೆ ಇದನ್ನು ಹೇಳಬೇಕಾಯಿತು.
ಒಂದು ಭಾಷೆಯನ್ನು ಹತ್ತಿಕ್ಕಿದರೆ ಅಲ್ಲಿನ ಸಂಸ್ಕೃತಿಯನ್ನೂ ಹೇಗೆ ಮುಗಿಸಬಹುದು ಮತ್ತು ಆ ಮೂಲಕ ಬೇರೊಂದು ಸಂಸ್ಕೃತಿ, ಭಾಷೆ ಅದಿಕಾರವನ್ನು ಹೇಗೆ ಹೇರಬಹುದು ಅನ್ನುವುದಕ್ಕೆ ಸಾಕ್ಷಿ.
ಈ ಕಾರಣಕ್ಕೇ ಹೇಳುವುದು ನಮ್ಮ ಮುಂದಿನ ಪೀಳಿಗೆಗೆ ಅಸ್ತಿತ್ವವಿರಬೇಕೆಂದರೆ ನಮ್ಮ ಭಾಷೆ ಉಳಿಸಿಕೊಂಡು ಹೋಗಬೇಕೆಂದು.
(Russia vs Ukraine Opinion how russia attack using language and culture of Ukraine)