ಬೆಂಗಳೂರು : ಕೊನೆಗೂ ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಕಗ್ಗಂಟು ಬಗೆ ಹರಿದಿದೆ.ಅಳೆದು ತೂಗಿ ಬಿಜೆಪಿ ನೂತನ ಸಚಿವರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ವಲಸೆ ಶಾಸಕರಿಗಷ್ಟೇ ಸಚಿವ ಸ್ಥಾನ ನೀಡಲು ಮುಂದಾಗಿದೆ. ಪಕ್ಷದಲ್ಲಿ ಆಂತರಿಕ ಕಚ್ಚಾಟ ಶುರುವಾಗುತ್ತಿದ್ದಂತೆಯೇ ಬಿಜೆಪಿ ಹೈಕಮಾಂಡ್ ಮಾಸ್ಟರ್ ಪ್ಲಾನ್ ರೂಪಿಸಿದ್ದು, ಉಪಚುನಾವಣೆಯಲ್ಲಿ ಗೆದ್ದ 10 ಮಂದಿ ಶಾಸಕರಿಗಷ್ಟೇ ಸಚಿವ ಸ್ಥಾನ ನೀಡಲು ಮುಂದಾಗಿದೆ.

ವಲಸೆ ಶಾಸಕರನ್ನು ಸಂಪುಟಕ್ಕೆ ಸೇರ್ಪಡೆಗೊಳಿಸಬೇಕೆಂಬ ಕೂಗು ಬಲವಾಗಿ ಕೇಳಿಬರುತ್ತಿದ್ದಂತೆಯೇ ಯಡಿಯೂರಪ್ಪ ಸಂಪುಟ ವಿಸ್ತರಣೆ ಮನಸ್ಸು ಮಾಡಿದ್ದರು. ಆದರೆ ಅರ್ಹ, ಅನರ್ಹ ಶಾಸಕರಿಗೆಲ್ಲಾ ಸಚಿವ ಸ್ಥಾನ ನೀಡುವುದು ಅಸಾಧ್ಯವಾಗಿತ್ತು. ವಲಸೆ ನಾಯಕರ ನಡುವೆ ಭಿನ್ನಮತ ಶುರುವಾಗುತ್ತಿದ್ದಂತೆಯೇ, ಬಿಜೆಪಿಯ ಮೂಲ ಶಾಸಕರೂ ಸಚಿವ ಸ್ಥಾನಕ್ಕೆ ಒತ್ತಡ ಹೇರಿದ್ದಾರೆ. ಜೊತೆಗೆ ಪ್ರಭಾವಿ ಹುದ್ದೆಗಳ ಮೇಲೆ ಕಣ್ಣಿಟ್ಟಿದ್ದು, ಮೂಲ ಬಿಜೆಪಿ ಶಾಸಕರಲ್ಲೇ ಬಣ ರಾಜಕೀಯ ಶುರುವಾಗಿತ್ತು. ಕಲ್ಯಾಣ ಕರ್ನಾಟಕ ಭಾಗದ ಶಾಸಕರು ಪ್ರತ್ಯೇಕವಾಗಿ ಸಭೆ ನಡೆದಿದ್ದರು. ಅದರಲ್ಲೂ ಸೋತ ಶಾಸಕರಿಗೆ ಸಚಿವ ಸ್ಥಾನ ನೀಡಲು ಮುಂದಾಗಿರೊ ಹೈಕಮಾಂಡ್ ವಿರುದ್ದ ಮೂಲ ಬಿಜೆಪಿ ಶಾಸಕರು ತೊಡೆತಟ್ಟಿದ್ದರು. ಇದೆಲ್ಲದರ ಬೆನ್ನಲ್ಲೇ ಬಿಜೆಪಿ ಹೈಕಮಾಂಡ್ ಉಪಚುನಾವಣೆಯಲ್ಲಿ ಗೆದ್ದಿರುವ 10 ಮಂದಿ ಶಾಸಕರಿಗಷ್ಟೇ ಸಚಿವ ಸ್ಥಾನ ನೀಡಲು ಸೂಚನೆಯನ್ನು ನೀಡಿದ್ದು, ಸಚಿವ ಸಂಪುಟ ವಿಸ್ತರಣೆಯ ಬಳಿಕ ದೆಹಲಿಗೆ ಬರುವಂತೆ ಸೂಚಿಸಿದೆ.

ಹೈಕಮಾಂಡ್ ಸೂಚನೆಯ ಮೇರೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೂತನ ಸಚಿವ ಪಟ್ಟಿಯನ್ನು ರಾಜಭವನಕ್ಕೆ ಕಳುಹಿಸಿದ್ದಾರೆ. ಮಹೇಶ್ ಕುಮಟಳ್ಳಿ ಹೊರತು ಪಡಿಸಿ ಎಸ್.ಟಿ.ಸೋಮೇಶೇಖರ್, ಬೈರತಿ ಬಸವರಾಜ್, ರಮೇಶ್ ಜಾರಕಿಹೊಳಿ, ಆನಂದ ಸಿಂಗ್, ಶಿವರಾಮ ಹೆಬ್ಬಾರ್, ಬಿ.ಸಿ.ಪಾಟೀಲ್, ಗೋಪಾಲಯ್ಯ, ನಾರಾಯಣ ಗೌಡ ಹಾಗೂ ಶ್ರೀಮಂತ ಪಾಟೀಲ್ ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.