
ಬೆಂಗಳೂರು : ಕಾಂಗ್ರೆಸ್ ರಾಷ್ಟ್ರಮಟ್ಟದಲ್ಲಿ ನಾಯಕತ್ವ ಬದಲಾವಣೆಯ ಕೂಗು ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿಂದು ಎಐಸಿಸಿ ಮಹತ್ವದ ಸಭೆ ನಡೆಯಲಿದೆ. ಈ ವೇಳೆಯಲ್ಲಿ ಎಐಸಿಸಿಗೆ ನೂತನ ಅಧ್ಯಕ್ಷರ ಆಯ್ಕೆ ನಡೆಯುವ ಸಾಧ್ಯತೆಯಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ ಎನ್ನಲಾಗುತ್ತಿದೆ.

ಹೌದು, ಒಂದೆಡೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರನ್ನು ಕಾಡುತ್ತಿರುವ ಅನಾರೋಗ್ಯ, ಇನ್ನೊಂದೆಡೆ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲು ನಿರಾಕರಿಸುತ್ತಿರುವ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ. ಇನ್ನು ಗಾಂಧಿ ಕುಟುಂಬದ ಹೊರತಾದ ವ್ಯಕ್ತಿ ಅಧ್ಯಕ್ಷ ಪಟ್ಟಕ್ಕೇರಲಿ ಅಂತಿರುವ ಪ್ರಿಯಾಂಕ ಗಾಂಧಿ ವಾದ್ರಾ. ಮೂವರು ಕೂಡ ಒಂದೊಂದು ಕಾರಣಗಳಿಂದಾಗಿ ರಾಷ್ಟ್ರೀಯ ಕಾಂಗ್ರೆಸ್ ಹೊಣೆ ಹೊರುವುದಕ್ಕೆ ಸಿದ್ದರಲಿಲ್ಲ.

ಇನ್ನು ಸೋನಿಯಾ ಗಾಂಧಿ ಈ ಹಿಂದೆಯೇ ಎಐಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದು ರಾಹುಲ್ ಗಾಂಧಿಗೆ ಪಟ್ಟ ಕಟ್ಟಿದ್ದರು. ಆದರೆ ಚುನಾವಣಾ ಸೋಲಿನ ಬೆನ್ನಲ್ಲೇ ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಲೇ ಸೋನಿಯಾ ಗಾಂಧಿ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡಿದ್ದರು.

ಇದೀಗ ಪಕ್ಷದ ಆಂತರಿಕವಲಯದಲ್ಲಿಯೂ ಗಾಂಧಿ ಕುಟುಂಬದ ಹೊರತು ಪಡಿಸಿದ ನಾಯಕನಿಗೆ ಪಟ್ಟಕಟ್ಟಬೇಕೆಂಬ ಕೂಗು ಜೋರಾಗಿದೆ. ಮಾತ್ರವಲ್ಲ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಈಗಾಗಲೇ ಹಲವರ ಹೆಸರು ಕೇಳಿಬಂದಿದೆ. ಅದ್ರಲ್ಲೂ ಪ್ರಮುಖವಾಗಿ ಮಾಜಿ ಮುಖ್ಯಮಂತ್ರಿ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಮಾಜಿ ಕೇಂದ್ರ ಸಚಿವ ದಿಗ್ವಿಜಯ್ ಸಿಂಗ್, ಗಾಂಧಿ ಕುಟುಂಬದ ಕುಡಿ ಪ್ರಿಯಾಂಕವಾದ್ರಾ , ಮಾಜಿ ಸಚಿವ ಶಶಿತರೂರ್ ಹಾಗೂ ಮಧುಸೂದನ್ ಮಿಸ್ತ್ರಿ ಅವರ ಹೆಸರು ಕೇಳಿಬಂದಿದೆ. ಅದ್ರಲ್ಲೂ ಮಾಜಿ ಸಿಎಂ ಹಾಗೂ ಕರ್ನಾಟಕ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ.

ಜನತಾಪರಿವಾರ ನಾಯಕರಾಗಿ ಗುರುತಿಸಿಕೊಂಡಿದ್ದ ಸಿದ್ದರಾಮಯ್ಯ 2006ರಲ್ಲಿ ಕಾಂಗ್ರೆಸ್ ಪಕ್ಷ ಸೇರುತ್ತಲೇ ತಮ್ಮ ಸಾಮರ್ಥ್ಯವನ್ನು ಸಾಭೀತುಪಡಿಸಿದ್ದಾರೆ. ರಾಜ್ಯದಲ್ಲಿ ಸೊರಗಿ ಹೋಗಿರುವ ಕಾಂಗ್ರೆಸ್ ಪಕ್ಷಕ್ಕೆ ಮರು ಚೈತನ್ಯವನ್ನು ನೀಡಿದ್ದು ಮಾತ್ರವಲ್ಲ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅತ್ಯಧಿಕ ಬಹುಮತದಿಂದ ಅಧಿಕಾರದ ಗದ್ದುಗೆಗೇರಿಸಿದ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಎಂದ್ರೆ ಸಿದ್ದರಾಮಯ್ಯ, ಸಿದ್ದರಾಮಯ್ಯ ಎಂದ್ರೆ ಕಾಂಗ್ರೆಸ್ ಅನ್ನುವಷ್ಟರ ಮಟ್ಟಿಗೆ ರಾಜ್ಯದಲ್ಲಿ ತಮ್ಮ ಪ್ರಭಾವವನ್ನು ಬೀರಿದವರು ಕೂಡ ಸಿದ್ದರಾಮಯ್ಯ.

ಮುಖ್ಯಮಂತ್ರಿಯಾಗಿ 5 ವರ್ಷಗಳ ಕಾಲ ಆಡಳಿತ ನೀಡಿದ ಕೆಲವೇ ಕೆಲವು ಮುಖ್ಯಮಂತ್ರಿಗಳ ಸಾಲಿನಲ್ಲಿ ನಿಂತಿದ್ದಾರೆ. ಅಹಿಂದ ನಾಯಕರಾಗಿ ಕುರುಬ ಮತಗಳ ಜೊತೆಗೆ ಹಿಂದುಳಿದ ವರ್ಗಗಳ ಜನರು ಕಾಂಗ್ರೆಸ್ ಪರ ಒಲವು ತೋರುವಂತೆ ಮಾಡಿರುವುದು ಕೂಡ ಇದೇ ಸಿದ್ದರಾಮಯ್ಯ.
ಸದನದ ಒಳಗಿರಲಿ ಅಥವಾ ಸದನದ ಹೊರಗಿರಲಿ, ಬಿಜೆಪಿ ಹಾಗೂ ಜೆಡಿಎಸ್ ಪಕ್ಷವನ್ನು ಸಮರ್ಥವಾಗಿ ಎದುರಿಸುವ ತಾಕತ್ತು ಇರೋದು ಕೂಡ ಸಿದ್ದರಾಮಯ್ಯ ಅವರಿಗೆ. ಕೇವಲ ರಾಜ್ಯಕ್ಕೆ ಮಾತ್ರವೇ ಸೀಮಿತವಾಗಿರದೇ ರಾಷ್ಟ್ರಮಟ್ಟದ ಬಿಜೆಪಿ ನಾಯಕರಾದ ಗೃಹ ಸಚಿವ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಎದುರಿಸುವ ಸಾಮರ್ಥ್ಯ ಸಿದ್ದರಾಮಯ್ಯನಿಗಿದೆ.

130 ವರ್ಷಗಳ ಇತಿಹಾಸವನ್ನು ಹೊಂದಿರುವ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೇರುವುದು ಅಷ್ಟು ಸುಲಭದ ಮಾತಲ್ಲ. ವಕೀಲ ವೃತ್ತಿಯಿಂದಲೇ ರಾಜಕೀಯ ಕ್ಷೇತ್ರಕ್ಕೆ ಧುಮುಕಿರುವ ಸಿದ್ದರಾಮಯ್ಯ, ಕಾನೂನು ಜ್ಞಾನದಿಂದಲೇ ಎದುರಾಳಿಗಳನ್ನು ಎದುರಿಸುವ ತಾಕತ್ತು ಇದೆ.

ರಾಜ್ಯದಲ್ಲಿಯೂ ಸಾಕಷ್ಟು ವರ್ಚಸ್ಸು ಹೊಂದಿರುವ ಸಿದ್ದರಾಮಯ್ಯರನ್ನು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಕ ಮಾಡುವ ಮೂಲಕ ಹಿಂದುಳಿದ ವರ್ಗಗಳ ಮತ ಬ್ಯಾಂಕ್ ಗೆ ಕನ್ನ ಹಾಕುವ ಲೆಕ್ಕಾಚಾರವೂ ಕಾಂಗ್ರೆಸ್ ಪಾಳಯದಲ್ಲಿದೆ. ಕಾಂಗ್ರೆಸ್ ಪಕ್ಷದಲ್ಲಿ ಹಲವು ನಾಯಕರ ಹೆಸರು ಕೇಳಿಬಂದಿದ್ದರೂ ಕೂಡ, ಸದ್ಯ ಭ್ರಷ್ಟಾಚಾರದ ಹಣೆ ಪಟ್ಟಿ ಕಟ್ಟಿಕೊಂಡಿರದ ನಾಯಕರಲ್ಲಿ ಮುಂಚೂಣಿಯಲ್ಲಿ ಸಿದ್ದರಾಮಯ್ಯ ನಿಲ್ಲುತ್ತಿದ್ದಾರೆ. ದೇಶದಾದ್ಯಂತ ಪಕ್ಷವನ್ನು ಸಂಘಟಿಸುವ ಸಾಮರ್ಥ್ಯ ಕೂಡ ಸಿದ್ದರಾಮಯ್ಯನಿಗಿದೆ ಅನ್ನೋದು ಸೋನಿಯಾ ಗಾಂಧಿ ಅವರಿಗೂ ಅರಿವಿದೆ.

ಒಟ್ಟಿನಲ್ಲಿ ಇಂದು ನಡೆಯಲಿರುವ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸಭೆ ಹಲವು ಕುತೂಹಲಗಳನ್ನು ಹುಟ್ಟುಹಾಕಿದೆ. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಎಐಸಿಸಿ ಹುದ್ದೆಯಿಂದ ಕೆಳಗಿಳಿಯುತ್ತಾರಾ ? ಒಂದೊಮ್ಮೆ ಅಧ್ಯಕ್ಷ ಸ್ಥಾನದಿಂದ ಕಳೆಗಿಳಿದ್ರೆ ಯಾರಿಗೆ ಪಟ್ಟ ಕಟ್ಟುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.