ಆಂಧ್ರಪ್ರದೇಶ: ಮುಖ್ಯಮಂತ್ರಿಗಳು ಪ್ರಯಾಣಿಸುವಾಗ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗುತ್ತೆ. ಅದ್ರಲ್ಲೂ ತುರ್ತು ಕಾರ್ಯ ಅಂದ್ರೆ ಕೇಳೋದೆ ಬೇಡಾ. ಆದರೂ ಆಂಧ್ರ ಮುಖ್ಯಮಂತ್ರಿ ವೈಎಸ್ ಜಗಮೋಹನ್ ರೆಡ್ಢಿತುರ್ತು ಕೆಲಸದ ನಡುವೆಯೂ ಆ್ಯಂಬುಲೆನ್ಸ್ ಹೋಗಲು ತನ್ನ ಇಡೀ ಬೆಂಗಾವಲು ಪಡೆಯನ್ನೇ ನಿಲ್ಲಿಸಿ ದಾರಿ ಬಿಟ್ಟು ವ್ಯಕ್ತಿಯ ಪ್ರಾಣ ಉಳಿಸಿದ್ದಾರೆ.

ಸಿಎಂ ಜಗನ್ ಮೋಹನ್ ರೆಡ್ಡಿ ವಿಮಾನ ನಿಲ್ದಾಣದಿಂದ ಹಿಂದಿರುಗುತ್ತಿದ್ದರು. ಅದೇ ಮಾರ್ಗದಲ್ಲೇ ಆ್ಯಂಬುಲೆನ್ಸ್ ಕೂಡ ಬಂದಿದೆ. ಈ ವೇಳೆ ತಮ್ಮ ತುರ್ತು ಕೆಲಸದ ಮಧ್ಯೆಯೂ ಸಾಲುಗಟ್ಟಲೇ ವಾಹನಗಳಿದ್ದ ಇಡೀ ಬೆಂಗಾವಲನ್ನು ನಿಲ್ಲಿಸಿ ಆ್ಯಂಬುಲೆನ್ಸ್ ಹೋಗಲು ದಾರಿ ಮಾಡಿಕೊಟ್ಟಿದ್ದಾರೆ. ಈ ಮೂಲಕ ಓರ್ವ ವ್ಯಕ್ತಿ ಪ್ರಾಣ ಉಳಿಸಲು ಸಹಾಯರಾಗಿದ್ದಾರೆ.

ರಸ್ತೆ ಅಪಘಾತವೊಂದರಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಚಾಪರ್ಥಿನಾ ಶೇಖರ್ ಎಂಬ ವ್ಯಕ್ತಿಯನ್ನು ಆ್ಯಂಬುಲೆನ್ಸ್‌ನಲ್ಲಿ ಕರೆದೊಯ್ಯಲಾಗುತ್ತಿತ್ತು. ಗಂಭೀರವಾಗಿ ಗಾಯಗೊಂಡ ಗಾಯಾಳು ಶೇಖರ್‌ರನ್ನು ಆ್ಯಂಬುಲೆನ್ಸ್‌ನಲ್ಲಿ ವಿಜಯವಾಡದ ಇಎಸ್‌ಐ ಆಸ್ಪತ್ರೆಗೆ ಕರೆದೊಯ್ಯುವಾಗ ಅದೇ ದಾರಿಯಲ್ಲೇ ಸಿಎಂ ಜಗನ್ ಬರುತ್ತಿದ್ದರು.

ಇನ್ನು, ಸಿಎಂ ಬರುತ್ತಿದ್ದ ಕಾರಣ ಆ್ಯಂಬುಲೆನ್ಸ್ ಹೋಗಲು ತೊಂದರೆಯಾಗಿತ್ತು. ಸಿಎಂ ವಿಮಾನ ನಿಲ್ದಾಣದಿಂದ ತಡೆಪಲ್ಲಿಯ ತಮ್ಮ ನಿವಾಸಕ್ಕೆ ಹೋಗುತ್ತಿದ್ದರು. ಈ ವೇಳೆ ಹೀಗೆ ಸಿಎಂ ತಮ್ಮ ಕೆಲಸಕ್ಕಿಂತಲೂ ವ್ಯಕ್ತಿ ಪ್ರಾಣಕ್ಕೆ ಮಹತ್ವ ನೀಡಿ ಆ್ಯಂಬುಲೆನ್ಸ್ಗೆ ದಾರಿ ಬಿಟ್ಟಿದ್ಧಾರೆ.

ಜಗಮೋಹನ್ ರೆಡ್ಡಿ ಸಿಎಂ ಆಗಿ ಅಧಿಕಾರವಹಿಸಿಕೊಂಡ ದಿನದಿಂದಲೂ ಸದಾ ಒಂದಿಲ್ಲೊಂದು ಮಾನವೀಯ, ಸಾಮಾಜಿಕ ಕಾರ್ಯ ಗಳಿಂದಲೂ ಸುದ್ದಿಯಾಗುತ್ತಿದ್ದಾರೆ. ಇದೀಗ ಅಂಬ್ಯುಲೆನ್ಸ್ ಗೆ ದಾರಿಬಿಟ್ಟಿರುವುದು ಭಾರೀ ಪ್ರಶಂಸೆಗೆ ಪಾತ್ರವಾಗಿದೆ.

ಅಷ್ಟೇ ಅಲ್ಲಾ ಮಾನವೀಯತೆ ತೋರಿ ಇತರರಿಗೆ ಮಾದರಿಯಾದ ಜಗನ್ ನಡೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಅಭಿಮಾನಿಗಳು ಜಗನ್ ಸರಳ ಪ್ರತೀಕ ಮತ್ತು ಬಡವರಿಗೆ ಆಪತ್ಭಾಂದವ ಎಂದು ಬಣ್ಣಿಸುತ್ತಿದ್ದಾರೆ.