- ಭಾಗ್ಯ ದಿವಾಣ
ಕನ್ನಡ ಕಿರುತೆರೆಯ ಸೂಪರ್ ಹಿಟ್ ರಿಯಾಲಿಟಿ ಶೋಗಳಲ್ಲಿ ಒಂದಾಗಿರುವ ಬಿಗ್ ಬಾಸ್ ಕಾರ್ಯಕ್ರಮವೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಬಿಗ್ ಬಾಸ್ ಮನೆಯ ಆಗುಹೋಗುಗಳು, ನೆಚ್ಚಿನ ಸ್ಪರ್ಧಿಗಳ ಬಗೆ ಇನ್ನಷ್ಟು ತಿಳಿಯುವ ಕುತೂಹಲ ನೋಡುಗರನ್ನು ತುಂಬಿಕೊಂಡರೆ, ಬಿಗ್ ಬಾಸ್ ನ ಈ ಸೀಸನ್ನಲ್ಲಾದರೂ ಸ್ಪರ್ಧಿಸುವ ಅವಕಾಶ ಲಭ್ಯವಾದರೆ ಲೈಫ್ ಸೆಟಲ್ಲಪ್ಪಾ ಅಂತ ಯೋಚಿಸುವ ಮಂದಿ ಮತ್ತೆ ಹಲವರು. ಅದೂ ನಿಜವೇ ಬಿಗ್ ಬಾಸ್ ನಲ್ಲಿ ಪಾಲ್ಗೊಂಡ ಅನೇಕ ಸ್ಪರ್ಧಿಗಳ ಬದುಕೇ ಬದಲಾಗಿದೆ.

ಈಗ ನೋಡಿ. ಸಾಮಾನ್ಯ ಸೇಲ್ಸ್ ಮ್ಯಾನ್ ಆಗಿ ಮನೆ ಪ್ರವೇಶ ಮಾಡಿದ್ದ ಬಿಗ್ ಬಾಸ್ ಸೀಸನ್ ೪ರ ಸ್ಪರ್ಧಿ, ಸೀಸನ್ ನ ರನ್ನರ್ ಅಪ್ ಆಗುವ ಮೂಲಕ ಭಾರೀ ಹೆಸರು ಮಾಡಿದ್ದರು. ಮೈಸೂರು ಜಿಲ್ಲೆ ಟಿ.ನರಸೀಪುರವರಾದ ಸೇಲ್ಸ್ ಮ್ಯಾನ್ ದಿವಾಕರ್, ಬಿಗ್ ಬಾಸ್ ಸ್ಪರ್ಧಿಯಾಗಿ ಬಂದು, ಘಟಾನುಘಟಿಗಳ ಸರಿಸಮನಾಗಿ ನಿಂತು ಎಲ್ಲರ ಗಮನಸೆಳೆದಿದ್ದರು.

ಬಿಗ್ ಬಾಸ್ ಸೀಸನ್ ಮುಗಿದ ಬಳಿಕವೂ ಹೊಟ್ಟೆಪಾಡಿಗಾಗಿ ಮತ್ತದೇ ಸೇಲ್ಸ್ ಮ್ಯಾನ್ ವೃತ್ತಿಯನ್ನು ಮುಂದುವರಿಸಿದ್ದು ಇದೀಗ ಮತ್ತೊಂದು ಹೆಜ್ಜೆ ಮುಂದಿಡುವ ಪ್ರಯತ್ನದಲ್ಲಿದ್ದಾರೆ. ಹೌದು. ನವೆಂಬರ್ ೩ರಂದು ಶಿರಾ ಉಪಚುನಾವಣೆ ನಡೆಯಲಿದೆ.ಇತ್ತೀಚೆಗಷ್ಟೇ ಜೆ.ಡಿ.ಎಸ್ ಶಾಸಕ ಬಿ.ಸತ್ಯನಾರಾಯಣ್ ಅವರಿಂದ ತೆರವಾಗಿದ್ದ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ದಿವಾಕರ್ ಕಣಕ್ಕಿಳಿಯಲಿದ್ದು, ಅದಕ್ಕಾಗಿ ತಯಾರಿಯನ್ನೂ ನಡೆಸಿದ್ದಾರಂತೆ.

ಈ ಬಗ್ಗೆ ಮಾಧ್ಯಮಳೊಂದಿಗೆ ಮಾಹಿತಿ ಹಂಚಿಕೊಂಡ ದಿವಾಕರ್, ಶಿರಾದ ಜನರೊಂದಿಗೆ ಸೇಲ್ಸ್ ಮ್ಯಾನ್ ಆಗುವ ಮೊದಲಿನಿಂದ ಇಂದಿನವರೆಗೂ ಉತ್ತಮ ಬಾಂಧವ್ಯವಿದೆ. ಅಲ್ಲಿನ ಜನರೆಲ್ಲರೂ ನನಗೆ ಚಿರಪರಿಚಿತರಾಗಿದ್ದು, ಜನರ ಸೇವೆ ಮಾಡುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವ ಯೋಚನೆ ನನ್ನದು. ಇದಕ್ಕೆ ನನ್ನ ಸ್ನೇಹಿತರು ಅನೇಕರ ಬೆಂಬಲವೂ ಇದೆ.

ಸದ್ಯ ಪಕ್ಷಗಳ ಜೊತೆಗೆ ಟಿಕೆಟ್ ವಿಚಾರವಾಗಿ ಮಾತುಕತೆ ನಡೆಸಿದ್ದು, ಉತ್ತರಕ್ಕಾಗಿ ಕಾಯುತ್ತಿದ್ದೇನೆ. ಒಂದು ವೇಳೆ ಟಿಕೆಟ್ ಸಿಕ್ಕಿಲ್ಲ ವೆಂದಾದರೂ, ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಭರವಸೆ ನನಗಿದೆ, ಜನಬೆಂಬಲವಿರುವವರೆಗೂ ನನಗ್ಯಾವ ಭಯವಿಲ್ಲ ಎಂಬುದಾಗಿ ತಿಳಿಸಿದ್ದಾರೆ.

ಪಕ್ಷಗಳು ಸೇಲ್ಸ್ ಮ್ಯಾನ್ ದಿವಾಕರ್ ಗೆ ಮಣೆಹಾಕಲಿವ್ಯಾ? ಹಾಕಿದರೂ ಶಿರಾದ ಜನ ದಿವಾಕರ್ ಗೆ ಸೈ ಅನ್ನಲಿದ್ದಾರಾ ಎಂಬೆಲ್ಲಾ ಪ್ರಶ್ನೆಗಳಿಗೆ ಮುಂಬರುವ ದಿನಗಳಲ್ಲಿ ಉತ್ತರ ಸಿಗಬೇಕಿದೆ.