ಡಿಕೆ ಸಹೋದರರಿಗೆ ಸಿಬಿಐ ಸಂಕಷ್ಟ : ಬೆಂಗಳೂರು ಸೇರಿದಂತೆ 14 ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ

0

ಬೆಂಗಳೂರು : ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಅವರಿಗೆ ಸಿಬಿಐ ಸಂಕಷ್ಟ ಎದುರಾಗಿದೆ. ಇಂದು 60 ಮಂದಿ ಸಿಬಿಐ ಅಧಿಕಾರಿಗಳು ಡಿ.ಕೆ.ಶಿವಕುಮಾರ್ ಅವರ ನಿವಾಸ, ಕಚೇರಿ ಹಾಗೂ ಸಂಬಂಧಿಕರ ಮನೆ ಸೇರಿದಂತೆ ಒಟ್ಟು 14ಕಡೆಗಳಲ್ಲಿ ದಾಳಿಯನ್ನು ನಡೆಸಲಾಗಿದೆ.

ಅಕ್ರಮ ಆಸ್ತಿ ಸಂಪಾದನೆ, ಅಕ್ರಮ ಹಣ ವರ್ಗಾವಣೆಯ ಆರೋಪದ ಹಿನ್ನೆಲೆಯಲ್ಲಿ ಈ ಹಿಂದೆ ನಡೆದಿದ್ದ ಐಟಿ ದಾಳಿಯ ಬಳಿಕ ನಡೆದಿರುವ ಬಹುದೊಡ್ಡ ದಾಳಿ ಇದಾಗಿದೆ. ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಡಿ.ಕೆ.ಶಿವಕುಮಾರ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದು, ನಂತರದಲ್ಲಿ ಬಂಧಿಸಿದ್ದರು. ಇದೀಗ ಸಿಬಿಐ ತನಿಖೆಗೆ ಮುಂದಾಗಿದೆ.

ಇಂದು ಮುಂಜಾನೆ ಬೆಳಗ್ಗೆ 6 ಗಂಟೆಗೆ ಡಿ.ಕೆ.ಶಿವಕುಮಾರ್ ಅವರ ನಿವಾಸ, ಸಹೋದರ ಸಂಸದ ಡಿ.ಕೆ.ಸುರೇಶ್ ಕುಮಾರ್ ಅವರ ಮನೆ, ಕನಕಪುರದಲ್ಲಿರುವ ದೊಡ್ಡನಹಳ್ಳಿಯಲ್ಲಿರುವ ಮನೆ, ಡಿ.ಕೆ.ಶಿವಕುಮಾರ್ ಅವರ ಕಚೇರಿ ಅಲ್ಲದೇ ಡಿ.ಕೆ.ಶಿವಕುಮಾರ್ ಅವರ ಸಂಬಂಧಿಕರ ಮನೆಗಳ ಮೇಲೆ ಏಕಕಾಲದಲ್ಲಿ ಈ ದಾಳಿಯನ್ನು ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಸುಮಾರು 3 ಗಂಟೆಗಳ ಕಾಲ ಸಿಬಿಐ ಅಧಿಕಾರಿಗಳ ಪರಿಶೀಲನೆಯನ್ನು ನಡೆಸಿದ್ದಾರೆ. ಪ್ರಮುಖವಾಗಿ ಡಿ.ಕೆ.ಶಿವಕುಮಾರ್ ಅವರು ಅಕ್ರಮವಾಗಿ ಆಸ್ತಿಯನ್ನು ಸಂಪಾದನೆ ಮಾಡಿರುವ ಕುರಿತು ದೂರು ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಕೂಡ ತನಿಖೆಗೆ ಆದೇಶವನ್ನು ನೀಡಿತ್ತು. ಇದನ್ನು ಪ್ರಶ್ನಿಸಿ ಡಿ.ಕೆ.ಶಿವಕುಮಾರ್ ಅವರ ಬೆಂಬಲಿಗ ಶಿವಣ್ಣ ಎಂಬವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆನ್ನಲಾಗಿದೆ.

ಸಿಬಿಐ ಅಧಿಕಾರಿಗಳು ಇನ್ನೂ ಹಲವು ಕಡೆಗಳಲ್ಲಿ ದಾಳಿ ನಡೆಸುವ ಸಾಧ್ಯತೆಯಿದೆ ಎನ್ನಲಾಗುತ್ತಿದ್ದು, ದಾಳಿಯ ವೇಳೆಯಲ್ಲಿ ಲಭ್ಯವಾಗಿರುವ ದಾಖಲೆಗಳ ಆಧಾರದ ಮೇಲೆಯೇ ಮುಂದಿನ ಕ್ರಮವನ್ನು ಕೈಗೊಳ್ಳುವ ಸಾಧ್ಯತೆಯಿದೆ. ಒಂದೊಮ್ಮೆ ದಾಳಿಯ ವೇಳೆಯಲ್ಲಿ ಅಕ್ರಮ ಆಸ್ತಿ ಸಂಪಾದನೆಗೆ ಸಂಬಂಧಿಸಿದಂತೆ ದಾಖಲೆಗಳು ಲಭ್ಯವಾಗಿದ್ದೆ ಆದ್ರೆ ಡಿ.ಕೆ ಸಹೋದರರಿಗೆ ಮುಳುವಾಗೋದು ಗ್ಯಾರಂಟಿ. ದಾಖಲೆಗಳ ಆಧಾರದ ಮೇಲೆಯೇ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸುವ ಸಾಧ್ಯತೆಯೂ ಇದೆ.

ಸಿಬಿಐ ದಾಳಿಯ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಪ್ರಕರಣದ ಪರ ವಾದಿಸುತ್ತಿರುವ ವಕೀಲ ವಿಕ್ರಮ್ ಅವರು ಕೂಡ ಮನೆಗೆ ಭೇಟಿ ನೀಡಿದ್ದಾರೆ. ಅಲ್ಲದೇ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಕೂಡ ಆಗಮಿಸುತ್ತಿದ್ದಾರೆ.

Leave A Reply

Your email address will not be published.