CM BSY : ಬೂಕನಕೆರೆ TO ವಿಧಾನಸೌಧ : ನಿಂಬೆಹಣ್ಣು ವ್ಯಾಪಾರಿ ಮಗ, ರೈಸ್ ಮಿಲ್ ರೈಟರ್ ಯಡಿಯೂರಪ್ಪ ಸಿಎಂ ಆಗಿದ್ದು ಹೇಗೆ ಗೊತ್ತಾ ?

  • ಅರುಣ್ ಗುಂಡ್ಮಿ

ಬೆಂಗಳೂರು : ರಾಜ್ಯದ ಬಿಜೆಪಿ ಸರಕಾರವೀಗ ಎರಡು ವರ್ಷ ಪೂರೈಸಿದೆ. ನಾಲ್ಕನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರದ ಗದ್ದುಗೆ ಹಿಡಿದಿದ್ದ ಬಿ.ಎಸ್.ಯಡಿಯೂರಪ್ಪ ಬದಲಾವಣೆಯ ಮಾತು ಕೇಳಿಬರುತ್ತಿದೆ. ಆದರೆ ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಅಧಿಕಾರದ ಗದ್ದುಗೆಗೆ ಏರಿಸಿದ್ದ ಖ್ಯಾತ ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ. ಅದ್ರಲ್ಲೂ ರಾಜ್ಯದ ಮುಖ್ಯಮಂತ್ರಿ ಹುದ್ದೆಯಿಂದ ಇಳಿಯುತ್ತಿರೋ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅವರ ಜೀವನ ಕಲ್ಲುಮುಳ್ಳಿನ ಹಾಸಿಗೆಯಾಗಿತ್ತು. ಸಾಮಾನ್ಯ ನಿಂಬೆಹಣ್ಣು ಮಾರುತ್ತಿದ್ದ ವ್ಯಾಪಾರಿಯ ಮಗನಾಗಿ, ರೈಸ್ ಮಿಲ್ ರೈಟರ್ ಆಗಿದ್ದ ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯ ಗದ್ದುಗೆ ಏರಿದ್ದೇ ಒಂದು ರೋಚಕ ಜರ್ನಿ.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆಯಲ್ಲಿ ಜನಿಸಿದ ಬಿ.ಎಸ್.ಯಡಿಯೂರಪ್ಪ ಬಾಲ್ಯದಲ್ಲಿ ಬಡತನದ ಬೇಗೆಯಲ್ಲಿಯೇ ಬೆಂದವರು. 1943ರ ಫೆಬ್ರವರಿ 27 ರಂದು ಸಿದ್ದಲಿಂಗಪ್ಪ ಹಾಗೂ ಪುಟ್ಟತಾಯಮ್ಮನ ಮಗನಾಗಿ ಜನಿಸಿದವರು ಯಡಿಯೂರಪ್ಪ. ತಂದೆ ಸಿದ್ದಲಿಂಗಪ್ಪ ನಿಂಬೆಹಣ್ಣು ವ್ಯಾಪಾರ ಮಾಡಿ ಕಟುಂಬವನ್ನು ಸಲಹುತ್ತಿದ್ರು. ಯಡಿಯೂರಪ್ಪ ಅವರಿಗೆ ನಾಲ್ಕು ವರ್ಷ ವಯಸ್ಸಿರೋವಾಗ್ಲೆ ಪುಟ್ಟತಾಯಮ್ಮ ಸಾವನ್ನಪ್ಪುತ್ತಾರೆ. ನಂತರ ತಂದೆಯ ಆಶ್ರಯದಲ್ಲಿಯೇ ಬೆಳೆದ ಯಡಿಯೂರಪ್ಪ ಮಂಡ್ಯದ ಪಿಇಎಸ್ ಕಾಲೇಜಿನಲ್ಲಿಯೇ ವಿದ್ಯಾಭ್ಯಾಸವನ್ನು ಪೂರೈಸಿ ಸಮಾಜ ಕಲ್ಯಾಣ ಇಲಾಖೆಯ ಮಂಡ್ಯ ಕಚೇರಿಯಲ್ಲಿ ಪ್ರಥಮ ದರ್ಜೆ ಗುಮಾಸ್ತರಾಗಿ ತನ್ನ ವೃತ್ತಿ ಜೀವನವನ್ನು ಆರಂಭಿಸಿದರು. ಬಾಲ್ಯದಿಂದಲೂ ದೇಶ ಸೇವೆಗೆ ಮಿಡಿಯುತ್ತಿದ್ದ ಯಡಿಯೂರಪ್ಪ, ಆರ್ ಎಸ್ ಎಸ್ ನತ್ತ ಪ್ರಭಾವಿತರಾಗಿದ್ದು, ಕಾಲೇಜು ದಿನಗಳಲ್ಲಿಯೇ ಆರ್ ಎಸ್ ಎಸ್ ನಲ್ಲಿ ತನ್ನನ್ನು ಸಂಪೂರ್ಣ ವಾಗಿ ತೊಡಗಿಸಿಕೊಂಡಿದ್ದರು.

ಬದುಕನ್ನೇ ಬದಲಾಯಿಸಿದ ಶಿಕಾರಿಪುರ
ನಿಜಕ್ಕೂ ಯಡಿಯೂರಪ್ಪ ಮಂಡ್ಯದ ಸಮಾಜ ಕಲ್ಯಾಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಲೇ ತಂದೆಯನ್ನು ನೋಡಿಕೊಳ್ಳುತ್ತಿದ್ದ ಯಡಿಯೂರಪ್ಪ ಶಿಕಾರಿಪುರಕ್ಕೆ ಬಂದಿದ್ದೆ ಒಂದು ಆಕಸ್ಮಿಕ. ಆರ್ ಎಸ್ ಎಸ್ ಪ್ರಭಾವಕ್ಕೊಳಗಾದ ಯಡಿಯೂರಪ್ಪ ಸಮಾಜ ಕಲ್ಯಾಣ ಇಲಾಖೆಯ ಗುಮಾಸ್ತ ಹುದ್ದೆಗೆ ರಾಜೀನಾಮೆಯನ್ನು ಕೊಟ್ಟು ಆರ್ ಎಸ್ ಎಸ್ ಸಂಘವನ್ನು ಸ್ಥಾಪಿಸೋ ಸಲುವಾಗಿ ಶಿಕಾರಿಪುರಕ್ಕೆ ಬಂದಿದ್ರು. ಶಿಕಾರಿಪುರದಲ್ಲಿರೋ ಶಂಕರ ರೈಸ್ ಮಿಲ್ ನಲ್ಲಿ ರೈಟರ್ ಆಗಿ ವೃತ್ತಿ ಜೀವನ ಆರಂಭಿಸಿದ ಯಡಿಯೂರಪ್ಪ ಸಂಘದ ಜೊತೆಗೆ ನಿತ್ಯ ಕಾಯಕವನ್ನೂ ಮಾಡಿಕೊಂಡಿದ್ದರು. ಬಾಲ್ಯದಿಂದಲೂ ಸಂಘಟನಾತ್ಮಕ ವ್ಯಕ್ತಿತ್ವವನ್ನು ಹೊಂದಿದ್ದ ಯಡಿಯೂರಪ್ಪ ಕೇವಲ ಐದೇ ಐದು ವರ್ಷದ ಅವಧಿಯಲ್ಲಿ ಗಟ್ಟಿಯಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘಟವನ್ನು ಕಟ್ಟಿ ಬೆಳೆಸಿದ್ದರು.

ಇದರ ಫಲವಾಗಿಯೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯವಾಹಕ ಹುದ್ದೆಯ ಜೊತೆಗೆ ಜನಸಂಘದ ತಾಲೂಕು ಘಟಕದ ಅಧ್ಯಕ್ಷ ಹುದ್ದೆಯೂ ಒದಗಿಬಂದಿತ್ತು. ಅಲ್ಲಿಂದಲೇ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪನವರ ಸಾಮಾಜಿಕ ಬದುಕು ತೆರೆದುಕೊಂಡಿತ್ತು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿಯೂ ಜೈಲು ಸೇರಿದ್ದ ಯಡಿಯೂರಪ್ಪ ನಂತರದ ಎರಡೇ ವರ್ಷದ ಅವಧಿಯಲ್ಲಿ ಶಿಕಾರಿಪುರದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜನಸಂಘದ ಮೂಲಕ ಪುರಸಭಾ ಸದಸ್ಯರಾಗಿ ಆಯ್ಕೆಯಾದರು. ನಂತರ ಪುರಸಭಾ ಅಧ್ಯಕ್ಷರಾಗಿದ್ದ ಯಡಿಯೂರಪ್ಪ ಪಕ್ಷದಲ್ಲಿಯೂ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ರು. ಬಿಜೆಪಿಯ ಶಿಕಾರಿಪುರ ತಾಲೂಕು ಘಟಕದ ಅಧ್ಯಕ್ಷರಾಗಿ, ಶಿವಮೊಗ್ಗ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಯಡಿಯೂರಪ್ಪ 1983ರಲ್ಲಿ ಶಿಕಾರಿಪುರದಿಂದ ಶಾಸಕರಾಗಿ ಆಯ್ಕೆಯಾಗುತ್ತಿದ್ದಂತೆಯೇ ಇಡೀ ರಾಜ್ಯವೇ ಯಡಿಯೂರಪ್ಪರತ್ತ ನೋಡುವಂತೆ ಮಾಡಿದ್ರು. ಯಾಕೆಂದ್ರೆ ಬಿಜೆಪಿಯಿಂದ ಗೆದ್ದ ರಾಜ್ಯದ ಮೊದಲ ಶಾಸಕರಾಗಿದ್ದವರು ಬಿ.ಎಸ್.ಯಡಿಯೂರಪ್ಪ.

ಆನೆ ನಡೆದಿದ್ದೇ ಹಾದಿ …!
ಅದ್ಯಾವಾಗ ಬೂಕನಕೆರೆಯಿಂದ ಬಂದ ಯಡಿಯೂರಪ್ಪ ಶಿಕಾರಿಪುರದಲ್ಲಿ ತನ್ನ ಖದರ್ ತೋರಿಸಿದ್ರೋ ಆವಾಗ್ಲೆ ನೋಡಿ ಯಡಿಯೂರಪ್ಪ ಸೋಲಿಲ್ಲದ ಸರದಾರನಾಗಿ ಮೆರೆಯೋಕೆ ಶುರುಮಾಡಿದ್ರು. 1983ರಲ್ಲಿ ಶಾಸಕರಾಗಿ ವಿಧಾನಸೌಧ ಪ್ರವೇಶಿಸಿದ್ದ ಯಡಿಯೂರಪ್ಪ 1988ರಲ್ಲಿ ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡರು. ಮೂರು ಬಾರಿ ಶಾಸಕರಾಗಿದ್ದ ಯಡಿಯೂರಪ್ಪನವರಿಗೆ ಶಿಕಾರಿಪುರದ ಜನತೆ 1999 ರಲ್ಲಿ ಸೋಲಿನ ರುಚಿ ತೋರಿಸಿದ್ರು. ತದನಂತರದಲ್ಲಿ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾದ್ರು. ಆದರೆ 2004ರಲ್ಲಿ ನಡೆದ ಚುನಾವಣೆಯಲ್ಲಿ ಮತದಾರ ಮತ್ತೆ ಯಡಿಯೂರಪ್ಪನವರನ್ನು ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸಿಕೊಟ್ಟಿದ್ರು. 2004ರಿಂದ ಇದುವರೆಗೂ ಯಡಿಯೂರಪ್ಪ ಸೋಲನ್ನೇ ಕಂಡಿಲ್ಲ. ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದಲೂ ಸಂಸದರಾಗಿಯೂ ಲೋಕಸಭೆಯನ್ನೂ ಪ್ರವೇಶಿಸಿದ ಹೆಗ್ಗಳಿಕೆಯೂ ಅವರಿಗಿದೆ.

2004ರಲ್ಲಿ ಒದಗಿಬಂತು ಅವಕಾಶ
ಅಲ್ಲಿಯವರೆಗೂ ರಾಜ್ಯದಲ್ಲಿ ಬಿಜೆಪಿ ಅಸ್ತಿತ್ವಕ್ಕಾಗಿ ಹವಣಿಸುತ್ತಿತ್ತು. ಆದರೆ 2004ರಲ್ಲಿ ಬಿ.ಎಸ್.ಯಡಿಯೂರಪ್ಪ ಶಿಕಾರಿಪುರದಿಂದ ಆಯ್ಕೆಯಾಗುತ್ತಲೇ ಬಿಜೆಪಿ ರಾಜ್ಯದಲ್ಲಿ ಮೊದಲ ಬಾರಿಗೆ ಬಿಜೆಪಿ 79 ಸ್ಥಾನಗಳನ್ನು ಗೆದ್ದು ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ವಿಶ್ವಾಸಮತ ಸಾಬೀತು ಮಾಡೋದಕ್ಕೆ ಸಂಖ್ಯಾಬಲ ಕೊರತೆಯಾಗಿತ್ತು. ಇದೇ ಹೊತ್ತಲ್ಲೇ ಕಾಂಗ್ರೆಸ್ ಹಾಗೂ ಜೆಡಿಎಸ್ ಧರಂ ಸಿಂಗ್ ನೇತೃತ್ವದಲ್ಲಿ ಸಮ್ಮಿಶ್ರ ಸರಕಾರವನ್ನು ರಚನೆಯಾಗಿತ್ತು. ಆದರೆ ಎರಡೇ ಎರಡು ವರ್ಷ ಕಳೆಯುವಾಗಲೇ ಜೆಡಿಎಸ್ ಒಡೆದ ಮನೆಯಾಗಿದ್ದು, ಕುಮಾರಸ್ವಾಮಿ 40 ಶಾಸಕರೊಂದಿಗೆ ರೆಸಾರ್ಟ್ ಸೇರಿದ್ದರು. ಹೀಗಾಗಿಯೇ ರಾತ್ರೋ ರಾತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ದೊಡ್ಡ ಅವಕಾಶವೊಂದು ಲಭಿಸಿತ್ತು. ಜೆಡಿಎಸ್ ಪಕ್ಷದಿಂದ ಮೊದಲ ಬಾರಿಗೆ ಶಾಸಕರಾಗಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪುತ್ರ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದ್ರೆ, ಬಿ.ಎಸ್.ಯಡಿಯೂರಪ್ಪ ಉಪ ಮುಖ್ಯಮಂತ್ರಿ ಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಈ ಮೂಲಕ ಬಿಜೆಪಿ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅಧಿಕಾರದ ಚುಕ್ಕಾಣಿಯನ್ನು ಹಿಡಿಯುವಂತಾಯಿತು. ಒಪ್ಪಂದದಂತೆ 20-20 ತಿಂಗಳ ಅವಧಿಗೆ ಜೆಡಿಎಸ್ ಹಾಗೂ ಕಾಂಗ್ರೆಸ್ ಅಧಿಕಾರ ನಡೆಸಬೇಕಿತ್ತು. ಆದರೆ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನವನ್ನು ಯಡಿಯೂರಪ್ಪ ಅವರಿಗೆ ಬಿಟ್ಟುಕೊಡಲೇ ಇಲ್ಲ. ಪಟ್ಟು ಬಿಡಿದ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರಾದ್ರೂ 7 ದಿನಗಳಿಗಿಂತ ಹೆಚ್ಚು ಕಾಲ ಸರಕಾರವನ್ನು ಉಳಿಸಿಕೊಳ್ಳೋದಕ್ಕೆ ಸಾಧ್ಯವಾಗದೇ ಹುದ್ದೆಗೆ ರಾಜೀನಾಮೆ ನೀಡಿದ್ರು.

ಇದನ್ನೂ ಓದಿ : ರಾಜ್ಯದ ಸಿಎಂ ಆಗ್ತಾರಾ ಸಿ.ಟಿ.ರವಿ ..? ಶ್ರೀರಾಮುಲು, ಬೊಮ್ಮಾಯಿ ಡಿಸಿಎಂ

ಸ್ವಪಕ್ಷೀಯರೇ ಕಿತ್ತರು ಸಿಎಂ ಪಟ್ಟ
ಬಿ.ಎಸ್.ಯಡಿಯೂರಪ್ಪ 2007ರಲ್ಲಿ 7 ದಿನಗಳ ಕಾಲ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿ ಕಣ್ಣೀರು ಸುರಿಸುತ್ತಲೇ ಹುದ್ದೆಯಿಂದ ಕೆಳಗಿಳಿದ್ರು. ಯಡಿಯೂರಪ್ಪ 2008ರಲ್ಲಿ ನಡೆದ ಚುನಾವಣೆಯಲ್ಲಿ ಶಿಕಾರಿಪುರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ ಮಾಜಿಮುಖ್ಯಮಂತ್ರಿ ಬಂಗಾರಪ್ಪ ಎದುರು ಗೆದ್ದು ಮತ್ತೆ ಶಾಸಕರಾದ್ರು. ಜೊತೆಗೆ ಯಡಿಯೂರಪ್ಪ ಕಣ್ಣೀರಿಗೆ ಕರಗಿದ ಕರ್ನಾಟಕದ ಮಂದಿ 2008ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ 110 ಸ್ಥಾನಗಳನ್ನು ನೀಡಿದ್ರು. ಆದರೆ ಸರಕಾರ ರಚನೆಗೆ ಇನ್ನು ಮೂರು ಮತಗಳ ಕೊರತೆಯಾದಾಗ ಯಡಿಯೂರಪ್ಪ ಮೊದಲ ಬಾರಿ ಆಪರೇಷನ್ ಕಮಲದ ಮೂಲಕ ತಾನು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ರು. ಈ ಮೂಲಕ ದಕ್ಷಿಣ ಭಾರತದಲ್ಲಿ ಬಿಜೆಪಿ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಏರಿಸಿದ ಕೀರ್ತಿಗೂ ಪಾತ್ರರಾದ್ರು. ಆದರೆ ಸುಮಾರು ಎರಡೂವರೆ ವರ್ಷ ಸಿಎಂ ಆಗಿ ಕಾರ್ಯನಿರ್ವಹಿ ಸುವ ಹೊತ್ತಲೇ ಸಮಸ್ಯೆಯನ್ನು ಎದುರಿಸಿದ್ರು. ಆದ್ರೆ ಅಕ್ರಮ ಗಣಿಗಾರಿಕೆ, ಪ್ರೇರಣಾ ಎಜುಕೇಶನ್ ಟ್ರಸ್ಟ್ ದೇಣಿಗೆ ಆರೋಪವೂ ಕೇಳಿಬಂದಿತ್ತು. ಬಳ್ಳಾರಿಯ ಅಕ್ರಮಗಣಿಗಾರಿಕೆ ಬಿಎಸ್ ವೈ ಕೊರಳಿಗೆ ಉರುಳಾಯ್ತು. ಗಣಿಗಾರಿಕೆ ವಿಚಾರದದಲ್ಲಿ ಬಿಎಸ್ವೈ ಹೆಸರು ಉಲ್ಲೇಖವಾಗಿರೋ ಹಿನ್ನೆಲೆಯಲ್ಲಿ ಹೈಕಮಾಂಡ್ ಸೂಚನೆಯಂತೆ 3 ವರ್ಷ 66 ದಿನಗಳಲ್ಲಿಯೇ ಮುಖ್ಯಮಂತ್ರಿ ಹುದ್ದೆಯಿಂದಲೇ ಕೆಳಗಿಳಿಯುವಂತಾಗಿತ್ತು. ಮಾತ್ರವಲ್ಲ ಅಕ್ರಮಗಣಿಗಾರಿಕೆ ವಿಚಾರದಲ್ಲಿ ಜೈಲುವಾಸವನ್ನೂ ಅನುಭವಿಸಿದ್ರು.

ಕೆಜೆಪಿ ಕಟ್ಟಿದ್ದ ಯಡಿಯೂರಪ್ಪ
ದಕ್ಷಿಣ ಭಾರತದಲ್ಲಿ ಕಮಲವನ್ನು ಅರಳಿಸಿದ್ದ ಯಡಿಯೂರಪ್ಪರ ಮೇಲೆ ಆರೋಪಗಳು ಕೇಳಿಬಂದಾಗ ಬಿಜೆಪಿ ಬೆಂಬಲಕ್ಕೆ ನಿಲ್ಲಲಿಲ್ಲ ಅನ್ನೋ ನೋವು ಯಡಿಯೂರಪ್ಪನವರನ್ನು ಕಾಡುತ್ತಲೇ ಇತ್ತು. ಜೊತೆಗೆ ರಾಜ್ಯಾಧ್ಯಕ್ಷ ಹುದ್ದೆಯನ್ನೂ ನೀಡಲಿಲ್ಲ. ಜೈಲಿನಿಂದ ಹೊರಬರುತ್ತಲೇ ಯಡಿಯೂರಪ್ಪ ತಾನು ಕಟ್ಟಿ ಬೆಳೆಸಿದ್ದ ಬಿಜೆಪಿಯಿಂದಲೇ ಹೊರ ಬಂದ್ರು. 2011ರಲ್ಲಿ ಕರ್ನಾಟಕ ಜನತಾ ಪಕ್ಷವನ್ನು ಹುಟ್ಟು ಹಾಕಿದ್ದ ಯಡಿಯೂರಪ್ಪ 2013ರಲ್ಲಿ ನಡೆದ ಚುನಾವಣೆಯಲ್ಲಿ ಅದೇ ಶಿಕಾರಿಪುರ ಕ್ಷೇತ್ರದಿಂದ ಕೆಜೆಪಿ ಪಕ್ಷದಿಂದ ಸ್ಪರ್ಧಿಸಿದ್ರು. ಆದರೆ ಮತದಾರ ಆವಾಗಲೂ ಕೂಡ ಯಡಿಯೂರಪ್ಪನವರ ಪರವೇ ಇದ್ದ. ಹೀಗಾಗಿಯೇ ಆ ಬಾರಿಯೂ ಯಡಿಯೂರಪ್ಪ ಕೆಜೆಪಿ ಪಕ್ಷದ ಶಾಸಕರಾಗಿ ವಿಧಾನಸೌಧ ಪ್ರವೇಶಿಸಿದ್ದರು. ಆದರೆ ಯಡಿಯೂರಪ್ಪ ನಿರೀಕ್ಷೆಯಂತೆ ಕೆಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿಲ್ಲ. ಇನ್ನೊಂದೆಡೆ ಯಡಿಯೂರಪ್ಪ ಇಲ್ಲದೇ ಬಿಜೆಪಿ ರಾಜ್ಯದಲ್ಲಿ ಅವಮಾನಕ್ಕೆ ಒಳಗಾಗಿತ್ತು. ಹೀಗಾಗಿಯೇ ಯಡಿಯೂರಪ್ಪ ಮತ್ತೆ ಬಿಜೆಪಿ ಸೇರಿದ್ರು. ತಮ್ಮದೇ ಪಕ್ಷವನ್ನು ಕಟ್ಟಿದ ಶ್ರೀರಾಮುಲು ಅವರನ್ನೂ ಮರಳಿ ಪಕ್ಷಕ್ಕೆ ಸೇರಿಸಿಕೊಂಡ್ರು.

ಕರುನಾಡಲ್ಲಿ ಮತ್ತೆ ಅರಳಿತು ಕಮಲ
ಯಡಿಯೂರಪ್ಪ ಮರಳಿ ಬಿಜೆಪಿ ಸೇರುತ್ತಲೇ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ ಒದಗಿಬಂದಿತ್ತು. ಮತ್ತೆ ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಗಟ್ಟಿಯಾಗಿ ಕಟ್ಟಿದ್ರು. 2018ರ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದಾಗ ರಾಜ್ಯದಲ್ಲಿ ಡೋಲಾಯಮಾನ ಸ್ಥಿತಿ ನಿರ್ಮಾಣವಾಗಿತ್ತು. 105 ಸ್ಥಾನಗಳನ್ನು ಗೆಲ್ಲವ ಮೂಲಕ ರಾಜ್ಯದಲ್ಲಿಯೇ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಹೀಗಾಗಿಯೇ ರಾಜ್ಯಪಾಲರು ಬಿಜೆಪಿ ಸರಕಾರ ರಚನೆಗೆ ಆಹ್ವಾನ ನೀಡಿದ್ರು. ಅಂತೆಯೇ 2018ರ ಮೇ 17 ರಂದು ಯಡಿಯೂರಪ್ಪ ಮೂರನೇ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ರು. ಆದರೆ ವಿಶ್ವಾಸಮತ ಸಾಬೀತು ಮಾಡೋದಕ್ಕೆ ಯಡಿಯೂರಪ್ಪನವರಿಗೆ ಸಾಧ್ಯವಾಗಲೇ ಇಲ್ಲ. ಹೀಗಾಗಿ ಮೇ 23 ರಂದು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ರು. ನಂತರದಲ್ಲಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ – ಕಾಂಗ್ರೆಸ್ ಅಧಿಕಾರ ನಡೆಸಿದ್ರೂ ಕೂಡ 14 ತಿಂಗಳು ಕಳೆಯುವಷ್ಟರಲ್ಲೇ ಸರಕಾರ ವಿಶ್ವಾಸಮತ ಕಳೆದುಕೊಂಡು ಪತನವಾಗಿದೆ.

ಕಾಲುನಡಿಗೆಯಲ್ಲೇ ಪಕ್ಷ ಕಟ್ಟಿದ್ದ ಬಿಎಸ್ ವೈ
ರಾಜ್ಯದಲ್ಲಿ ಕಾಂಗ್ರೆಸ್ ಜನತಾದಳ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಬಿಜೆಪಿ ಹೇಳ ಹೆಸರೇ ಇರಲಿಲ್ಲ. ಶಿಕಾರಿಪುರದಿಂದಲೇ ತನ್ನ ರಾಜಕೀಯ ಜೀವನ ಆರಂಭಿಸಿದ್ದ ಯಡಿಯೂರಪ್ಪ ಕಾಲ್ನಡಿಗೆಯಲ್ಲೇ ಪಕ್ಷ ಸಂಘಟನೆಯನ್ನು ಮಾಡಿದ್ರು. ರಾಜ್ಯಾಧ್ಯಕ್ಷರಾಗಿದ್ದ ಅವಧಿಯಲ್ಲಿ ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಪಕ್ಷವನ್ನು ಸಂಘಟಿಸೋ ಕಾರ್ಯವನ್ನು ಮಾಡಿದ್ರು. ಯುವಕರನ್ನು ಹೆಚ್ಚು ಹೆಚ್ಚಾಗಿ ಪಕ್ಷಕ್ಕೆ ಸೇರಿಕೊಳ್ಳೋ ಕಾರ್ಯವನ್ನು ಮಾಡಿದ್ರು. ಮಾತ್ರವಲ್ಲ ಹಲವು ಹೋರಾಟಗಳನ್ನು ನಡೆಸೋ ಮೂಲಕ ಜನರ ಮನಸ್ಸನ್ನು ಗೆದ್ದಿದ್ರು. 2004ರ ವರೆಗೂ ವಿರೋಧ ಪಕ್ಷದ ಸ್ಥಾನದಲ್ಲಿಯೇ ಕುಳಿತುಕೊಳ್ಳುತ್ತಿದ್ದ ಯಡಿಯೂರಪ್ಪ ಸದನದೊಳಗೆ ಪ್ರತಿಪಕ್ಷಗಳಿಗೆ ಮಾತಿನ ಮೂಲಕವೇ ಚಳಿ ಬಿಡಿಸುತ್ತಿದ್ರು. ಮೂರು ಬಾರಿ ಮುಖ್ಯಮಂತ್ರಿಯಾಗಿದ್ರೂ ಕೂಡ ಯಡಿಯೂರಪ್ಪನವರನ್ನು ರಾಜ್ಯದ ಜನತೆ ವಿರೋಧ ಪಕ್ಷದ ನಾಯಕನಾಗಿ ಇಷ್ಟಪಟ್ಟಿದ್ದೇ ಜಾಸ್ತಿ.

4ನೇ ಬಾರಿಗೆ ಮುಖ್ಯಮಂತ್ರಿ
ಕರ್ನಾಟಕ ರಾಜ್ಯದಲ್ಲಿ ರಾಮಕೃಷ್ಣ ಹೆಗಡೆ 3 ಬಾರಿ ಮುಖ್ಯಮಂತ್ರಿಯಾದ್ರೆ, ಎಸ್.ನಿಜಲಿಂಗಪ್ಪ, ಡಿ.ದೇವರಾಜ ಅರಸು ಹಾಗೂ ಎಚ್.ಡಿ.ಕುಮಾರಸ್ವಾಮಿ 2 ಬಾರಿ ರಾಜ್ಯ ಮುಖ್ಯ ಮಂತ್ರಿ ಹುದ್ದೆಯನ್ನು ಅಲಂಕರಿಸಿದ್ದರು. ಆದ್ರೀಗ 4 ನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೊದಲಿಗರು ಅನ್ನೋ ಖ್ಯಾತಿಗೆ ಸಿಎಂ ಬಿ.ಎಸ್. ಯಡಿಯೂರಪ್ಪ ಪಾತ್ರರಾಗಲಿದ್ದಾರೆ. ರೈತರಾಗಿದ್ದ ಬಿ.ಎಸ್.ಯಡಿಯೂರಪ್ಪ ಸುದೀರ್ಘ ಅವಧಿಯವರೆಗೆ ವಿರೋಧ ಪಕ್ಷದ ನಾಯಕರಾಗಿ ರೈತಪರ ಹೋರಾಟಗಳನ್ನು ನಡೆಸಿದ್ದಾರೆ. ಆದ್ರೀಗ ಯಡಿಯೂರಪ್ಪ ಸರಕಾರ ಎರಡು ವರ್ಷ ಪೂರೈಸಿದ್ದಾರೆ.

Comments are closed.