ಬೆಂಗಳೂರು: ರಾಜ್ಯದಲ್ಲಿ ಬೈ ಎಲೆಕ್ಷನ್ ಅಖಾಡ ರಂಗೇರಿರುವ ಬೆನ್ನಲ್ಲೇ ಚುನಾವಣೆ ಪ್ರಚಾರದ ಅಖಾಡದಲ್ಲಿ ಕೈ ಪಾಳಯದ ಒಳಜಗಳ ಮತ್ತೆ ಬೀದಿಗೆ ಬಿದ್ದಿದ್ದು, ಕೂಸು ಹುಟ್ಟೋ ಮುಂಚೆ ಕುಲಾವಿ ಅನ್ನೋ ಹಾಗೆ ಕಾಂಗ್ರೆಸ್ ಮುಂದಿನ ಸಿಎಂ ಯಾರೂ ಅನ್ನೋ ಚರ್ಚೆಯಲ್ಲಿ ಬೈ ಎಲೆಕ್ಷನ್ ನ ಎರಡು ಕ್ಷೇತ್ರ ಕಳೆದುಕೊಳ್ಳೋ ಸ್ಥಿತಿ ತಲುಪಿದೆ ಕಾಂಗ್ರೆಸ್.

ಸಧ್ಯ ರಾಜ್ಯದಲ್ಲಿ ಮುನ್ನಲೆಯಲ್ಲಿರೋದು ಎರಡು ಬೈ ಎಲೆಕ್ಷನ್. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಈ ಎರಡು ಕ್ಷೇತ್ರಗಳ ಪ್ರಚಾರದ ನೆಪದಲ್ಲಿ ಬಣ ರಾಜಕೀಯವನ್ನು ಮತ್ತೆ ಮುನ್ನಲೆಗೆ ತರಲಾಗುತ್ತಿದ್ದು, ಕಾಂಗ್ರೆಸ್ ನ ಮೂಲ ಮತ್ತು ವಲಸಿಗರ ನಡುವೆ ಫೈಟ್ ಮತ್ತೆ ತಾರಕ್ಕೇರಿದೆ.

ಇತ್ತೀಚಿಗಷ್ಟೇ ಒಕ್ಕಲಿನ ನಾಯಕರ ಸಭೆಯಲ್ಲಿ ಮಾತನಾಡಿದ್ದ ಕಾಂಗ್ರೆಸ್ ಶಾಸಕಿ ಸೌಮ್ಯ ರೆಡ್ಡಿ, ಮುಂದಿನ ಕಾಂಗ್ರೆಸ್ ಸಿಎಂ ಅಭ್ಯರ್ಥಿ ಡಿ.ಕೆ.ಶಿವಕುಮಾರ್ ಎಂದಿದ್ದರು. ಆರ್.ಆರ್.ನಗರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ತಂದೆ ಹನುಮಂತರಾಯಪ್ಪ ಕೂಡ ಡಿಕೆಶಿಯವರನ್ನು ಸಿಎಂ ಮಾಡಲು ಆರ್.ಆರ್.ನಗರ ಕ್ಷೇತ್ರ ಗೆಲ್ಲಲೇ ಬೇಕು ಎಂದಿದ್ದರು. ಇದು ಮೂಲ ಕಾಂಗ್ರೆಸ್ಸಿಗ ಹಾಗೂ ಕೈಪಾಳಯದ ಆಪ್ತಮಿತ್ರ ಎಂದೇ ಕರೆಯಿಸಿಕೊಳ್ಳೋ ಡಿಕೆಶಿ ಪರ ಒಂದು ಬಣದ ಬ್ಯಾಟಿಂಗ್.

ಇನ್ನು ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಬಂದು ಸದ್ಯ ಸಿದ್ಧರಾಮಯ್ಯನವರ ಬಲಗೈ ಭಂಟ ಎನ್ನಿಸಿ ಕೊಂಡಿರುವ ಜಮೀರ್ ಅಹ್ಮದ್ ಕೂಡ ಕಾಂಗ್ರೆಸ್ ನ ಮುಂದಿನ ಸಿಎಂ ಸಿದ್ಧರಾಮಯ್ಯನವರು.ನಾನು ರಾಜ್ಯದ ಎಲ್ಲೆಡೆ ಸಂಚಾರ ಮಾಡಿದ್ದೇನೆ. ಎಲ್ಲ ತಾಲೂಕು ಕೇಂದ್ರದಲ್ಲೂ ಸಿದ್ಧರಾಮಯ್ಯನವರ ಪರ ಒಲವಿದೆ. ಕಾಂಗ್ರೆಸ್ ನ ಎಲ್ಲ ಎಂಎಲ್ ಎಗಳು ಸಿದ್ಧರಾಮಯ್ಯನವರನ್ನೆ ನಾಯಕ ಎನ್ನುತ್ತಾರೆ ಎಂಬ ಹೇಳಿಕೆ ನೀಡುವ ಮೂಲಕ ವಲಸೆ ಕಾಂಗ್ರೆಸ್ಸಿಗ ಸಿದ್ಧರಾಮಯ್ಯ ಪರ ಬ್ಯಾಟಿಂಗ್ ನಡೆಸಿದ್ದಾರೆ.

ಕಾಂಗ್ರೆಸ್ ನಾಯಕರ ಈ ಆಂತರಿಕ ಕಿತ್ತಾಟ ಹಾಗೂ ಆಗಾಗ ಬದಲಾಗುವ ಹೇಳಿಕೆ ಹಾಗೂ ಸಿಎಂ ಸ್ಥಾನಕ್ಕಾಗಿನ ಮೇಲಾಟದಿಂದ ಆರ್.ಆರ್.ನಗರ ಮತ್ತು ಶಿರಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಅಸಮಧಾನಗೊಂಡಿದ್ದು, ಕ್ಷೇತ್ರದ ಅಭಿವೃದ್ಧಿ ಮಾತಿಗಿಂತ ಕಾಂಗ್ರೆಸ್ ನ ಆಂತರಿಕ ಮೇಲಾಟಗಳೇ ಭಾಷಣದ ವಸ್ತುವಾಗಿರೋದರಿಂದ ಯಾರಿಗೆ ಮತಚಲಾಯಿಸಬೇಕೆಂಬ ಗೊಂದಲಕ್ಕೆ ತುತ್ತಾಗುತ್ತಿ ದ್ದಾರೆ.

ಆರ್.ಆರ್.ನಗರ ಕ್ಷೇತ್ರದಲ್ಲಿ ಈಗಾಗಲೇ ಒಂದು ಬಾರಿ ಕಾಂಗ್ರೆಸ್ ನಿಂದ ಶಾಸಕರನ್ನು ಆಯ್ಕೆ ಮಾಡಿ ಕೈಸುಟ್ಟು ಮತ್ತೊಮ್ಮೆ ಅವಧಿ ಪೂರ್ವ ಬೈ ಎಲೆಕ್ಷನ್ ಎದುರಾಗಿರೋ ಆರ್.ಆರ್. ನಗರ ಜನರಂತೂ ಮತ್ತೊಮ್ಮೆ ಕಾಂಗ್ರೆಸ್ ಆಯ್ಕೆ ಮಾಡಬೇಕೆ ಬೇಡವೇ ಎಂಬ ಗೊಂದಲದಲ್ಲಿರುವಾಗಲೇ ಜಮೀರ್ ಅಹ್ಮದ್ ಮತ್ತೊಮ್ಮೆ ಸಿಎಂ ಸ್ಥಾನದ ಜಗಳವನ್ನು ಬಿಚ್ಚಿಟ್ಟಿದ್ದು, ಸಿದ್ಧರಾಮಯ್ಯನವರೇ ನಮ್ಮ ಸಿಎಂ ಎಂದಿದ್ದಾರೆ.

ಹೀಗಾಗಿ ಚುನಾವಣೆ ಅಖಾಡದಲ್ಲೇ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಸಂಗತಿಯನ್ನು ಕೈ ನಾಯಕರೇ ಬಹಿರಂಗಗೊಳಿಸುತ್ತಿರುವುದು ಚುನಾವಣೆಯ ದೃಷ್ಟಿಯಿಂದ ಎರಡು ಕ್ಷೇತ್ರಕ್ಕೂ ನೆಗೆಟಿವ್ ಪ್ರಭಾವ ಬೀರಲಿದ್ದು, ಇದ್ಯಾವುದರ ಪರಿವೇ ಇಲ್ಲದಂತೆ ಕಾಂಗ್ರೆಸ್ ಶಾಸಕರು ಮನಬಂದಂತೆ ಹೇಳಿಕೆ ನೀಡುತ್ತಲೇ ಇದ್ದಾರೆ.