ಕರಾವಳಿಯಿಂದಲೇ ಚುನಾವಣೆಗೆ ಸ್ಪರ್ಧೆ ಮಾಡ್ತಾರೆ ಡಿಕೆಶಿ ..!!! ಅಷ್ಟಕ್ಕೂ ಯಾವ ಕ್ಷೇತ್ರದಿಂದ ಗೊತ್ತಾ..?

  • ಅರುಣ್ ಗುಂಡ್ಮಿ

ಮಂಗಳೂರು : ರಾಜ್ಯ ರಾಜಕೀಯದಲ್ಲಿ ಕ್ಷಣಕ್ಕೊಂದು ಬದಲಾವಣೆಗಳು ನಡೆಯುತ್ತಿದೆ. ವಿಧಾನಸಭಾ ಚುನಾವಣೆಗೆ ಮೂರು ವರ್ಷಗಳಿರುವಾಗಲೇ ಕಾಂಗ್ರೆಸ್ ಮುಖಂಡರು ಕ್ಷೇತ್ರ ಬದಲಾವಣೆಗೆ ಮನಸ್ಸು ಮಾಡಿದಂತಿದೆ. ಟ್ರಬಲ್ ಶೂಟರ್, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರು ಕರಾವಳಿಯಿಂದ ಸ್ಪರ್ಧೆ ಮಾಡುವುದಕ್ಕೆ ಮನಸ್ಸು ಮಾಡಿದ್ದಾರೆಂಬ ಮಾತುಗಳು ಕೇಳಿಬರುತ್ತಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ಬಾರಿಯ ಚುನಾವಣೆಯಲ್ಲಿ ಕ್ಷೇತ್ರ ಬದಲಾವಣೆಯನ್ನು ಮಾಡಿದ್ದರು. ಈ ಬಾರಿಯೂ ಬೇರೆಯ ಕ್ಷೇತ್ರದಲ್ಲಿ ಸ್ಪರ್ಧೆ ಮಾಡ್ತಾರೆ ಅನ್ನೋ ಸುದ್ದಿಯೂ ಕೇಳಿಬರುತ್ತಿದೆ. ಈ ನಡುವಲ್ಲೇ ಡಿಕೆಶಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಉತ್ತರ ( ಸುರತ್ಕಲ್ ) ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸೋದಕ್ಕೆ ಚಿಂತನೆ ನಡೆಸುತ್ತಿದ್ದಾರೆನ್ನುವ ಮಾತುಗಳು ಕೇಳಿ ಬರುತ್ತಿದೆ.

ಒಂದು ಕಾಲದಲ್ಲಿ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿನ ಬಹುತೇಕ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರೇ ಗೆಲುವು ಕಂಡಿದ್ದರು. ಆದ್ರೀಗ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಹೊರತು ಪಡಿಸಿದ್ರೆ ಉಳಿದ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಕಂಡಿದ್ದರೆ. ಉಡುಪಿ ಜಿಲ್ಲೆಯ ಯಾವುದೇ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಶಾಸಕರಿಲ್ಲ. ಅಷ್ಟೇ ಅಲ್ಲಾ ಮುಂದಿನ ಚುನಾವಣೆಯಲ್ಲಿಯೂ ಕಾಂಗ್ರೆಸ್ ನಿಶ್ಚಳವಾಗಿ ಗೆಲುವು ಸಾಧಿಸುತ್ತೆ ಅನ್ನೋ ವಿಶ್ವಾಸವೂ ಇಲ್ಲ.

ಹೀಗಾಗಿಯೇ ಕಾಂಗ್ರೆಸ್ ಕರಾವಳಿ ಭಾಗದಲ್ಲಿ ಮುಂದಿನ ಚುನಾವಣೆಯಲ್ಲಿ ಪ್ರಾಬಲ್ಯ ಮೆರೆಯೋದಕ್ಕೆ ಈಗಿಂದಲೇ ಸಿದ್ದತೆಯನ್ನು ಮಾಡಿಕೊಳ್ಳುತ್ತಿದೆ. ಅದ್ರಲ್ಲೂ ಖುದ್ದು ಡಿ.ಕೆ.ಶಿವಕುಮಾರ್ ಕರಾವಳಿ ಭಾಗದಿಂದ ಸ್ಪರ್ಧೆ ಮಾಡಿದ್ರೆ ಕಾಂಗ್ರೆಸ್ ಪಕ್ಷಕ್ಕೆ ಮರುಚೈತನ್ಯ ನೀಡಬಹುದು ಅನ್ನೋದು ಸದ್ಯದ ಲೆಕ್ಕಾಚಾರ. ಕಾಂಗ್ರೆಸ್ ಪಕ್ಷದಲ್ಲಿ ಈ ಕುರಿತು ಗುಸುಗುಸು ಕೇಳಿಬರುತ್ತಿದ್ದು, ಕರಾವಳಿ ಭಾಗದ ಕೆಲ ನಾಯಕರು ಕೂಡ ಡಿ.ಕೆ.ಶಿವಕುಮಾರ್ ಅವರಲ್ಲಿ ಕರಾವಳಿಯಿಂದಲೇ ಸ್ಪರ್ಧೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಮಂಗಳೂರು ಉತ್ತರ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಅಷ್ಟಕ್ಕೂ ಮಂಗಳೂರು ಉತ್ತರ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಂಡಿರುವುದರ ಹಿಂದೆ ರಾಜಕೀಯ ಲೆಕ್ಕಾಚಾರವೂ ಇದೆ. ಮಂಗಳೂರು ಉತ್ತರ ಕ್ಷೇತ್ರದಲ್ಲಿ ಇದುವರೆಗೂ ಕಾಂಗ್ರೆಸ್ ಅತೀ ಹೆಚ್ಚು ಬಾರಿ ಗೆಲುವನ್ನು ಕಂಡಿದೆ. ಡಿ.ಕೆ.ಶಿವಕುಮಾರ್ ಅವರು ಕ್ಷೇತ್ರವನ್ನು ಪ್ರತಿನಿಧಿಸಿದ್ರೆ ಸುಲಭವಾಗಿ ಗೆಲ್ಲಬಹುದೆಂಬ ಮಾತುಗಳು ಕೇಳಿಬರುತ್ತಿದೆ.

ಅಷ್ಟಕ್ಕೂ ಮಂಗಳೂರು ಉತ್ತರ ಕ್ಷೇತ್ರದ ಇತಿಹಾಸವನ್ನು ನೋಡಿದ್ರೆ. 1957ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಖಾತೆಯನ್ನು ತೆರೆದಿತ್ತು. ಬಿ.ಆರ್. ಕರ್ಕೇರಾ ಅವರು ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದರೆ ಅವರ ನಿಧನ ನಂತರದಲ್ಲಿ ನಡೆದ ಉಪಚುನಾವಣೆಯಲ್ಲಿ ಕೆ.ಬೊಮ್ಮಪ್ಪ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದರೆ 1962ರ ಚುನಾವಣೆಯಲ್ಲಿ ಪ್ರಜಾ ಸೋಶಿಯಲಿಸ್ಟ್ ಪಾರ್ಟಿಯಿಂದ ಸ್ಪರ್ಧಿಸಿದ್ದ ಡಾ.ಸಂಜೀವನಾಥ ಐಕಳ ಹಾಗು 1967ರಲ್ಲಿ ಪಿ.ವಿ.ಐತಾಳ್ ಶಾಸಕರಾಗಿ ಆಯ್ಕೆಯಾಗಿದ್ದರು.

ಆದರೆ 1972ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕ್ಷೇತ್ರವನ್ನು ಮರಳಿ ತನ್ನ ಸುಪರ್ದಿಗೆ ಪಡೆದುಕೊಂಡಿತ್ತು. ಕಾಂಗ್ರೆಸ್ ಪಕ್ಷದ ಬಿ. ಸುಬ್ಬಯ್ಯ ಶೆಟ್ಟಿ ಶಾಸಕರಾಗಿ ಆಯ್ಕೆಯಾಗಿದ್ದರು. ಅಲ್ಲದೇ 1979ರ ಚುನಾವಣೆಯಲ್ಲಿಯೂ ಶಾಸಕ ಬಿ. ಸುಬ್ಬಯ್ಯ ಶೆಟ್ಟಿ ಪುನರಾಯ್ಕೆಯಾದರು. ಆದರೆ ಜನತಾ ಪಾರ್ಟಿ 1983ರ ಚುನಾವಣೆಯಲ್ಲಿ ಮೊದಲ ಬಾರಿಗೆ ಗೆಲುವವನ್ನು ಕಂಡಿತ್ತು. ಜನತಾ ಪಾರ್ಟಿಯಿಂದ ಸ್ಪರ್ಧಿಸಿದ್ದ ಲೋಕಯ್ಯ ಶೆಟ್ಟಿ ಶಾಸಕರಾಗಿ ಮೊದಲ ಬಾರಿಗೆ ಆಯ್ಕೆಯಾದರು.

ಆದರೆ 1985ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಕ್ಷೇತ್ರದಲ್ಲಿ ಮತ್ತೆ ಪ್ರಾಬಲ್ಯವನ್ನು ಮೆರೆದಿತ್ತು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಎನ್.ಎಂ.ಅಡ್ಯಂತಾಯ ಅವರು ಭಾರಿ ಅಂತರದಿಂದ ಗೆಲುವನ್ನು ಕಂಡಿದ್ದರು. ಅಷ್ಟೇ ಅಲ್ಲಾ 1989ರ ಚುನಾವಣೆಯಲ್ಲಿಯೂ ಕಾಂಗ್ರೆಸ್ ಪಕ್ಷ ಗೆಲುವು ಕಂಡಿದ್ದು, ವಿಜಯ್ ಕುಮಾರ್ ಶೆಟ್ಟಿ ಶಾಸಕರಾಗಿ ಆಯ್ಕೆಯಾಗಿದ್ದರು. ತದನಂತರದಲ್ಲಿ 1994ರಲ್ಲಿ ನಡೆದ ಚುನಾವಣೆಯಲ್ಲಿ ಶಾಸಕರಾಗಿದ್ದ ವಿಜಯ ಕುಮಾರ್ ಶೆಟ್ಟಿ ಅವರು ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದ ಖ್ಯಾತ ಯಕ್ಷಗಾನ ಕಲಾವಿದ ಕುಂಬ್ಳೆ ಸುಂದರ್ ರಾವ್ ಎದುರಲ್ಲಿ ಸೋಲು ಕಂಡಿದ್ದರು. ಕುಂಬ್ಳೆ ಸುಂದರ್ ರಾವ್ ಅವರು ಶಾಸಕರಾಗಿ ಆಯ್ಕೆಯಾಗುವ ಮೂಲಕ ಬಿಜೆಪಿ ಕ್ಷೇತ್ರದಲ್ಲಿ ಮೊದಲ ಬಾರಿಗೆ ಗೆಲುವನ್ನು ದಾಖಲಿಸಿತ್ತು. ಆದರೆ 1999ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ನ ವಿಜಯ ಕುಮಾರ್ ಶೆಟ್ಟಿ ಅವರು ಮತ್ತೆ ಶಾಸಕರಾಗಿ ಆಯ್ಕೆಯಾಗಿದ್ದರು.

2004 ರ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಕೃಷ್ಣ ಜೆ.ಪಾಲೇಮಾರ್ ಶಾಸಕರಾಗಿ ಆಯ್ಕೆಯಾದರು. ಮಾತ್ರವಲ್ಲ 2008ರ ಚುನಾವಣೆಯಲ್ಲಿಯೂ ಗೆಲುವನ್ನು ಕಂಡು ಸಚಿವರಾಗಿಯೂ ಸೇವೆಯನ್ನು ಸಲ್ಲಿಸಿದ್ದಾರೆ. ಆದರೆ 2013ರ ಚುನಾವಣೆಯಲ್ಲಿ ಕೃಷ್ಣ ಜೆ.ಪಾಲೇಮಾರ್ ಕಾಂಗ್ರೆಸ್ ಅಭ್ಯರ್ಥಿ ಮೊಯಿದ್ದೀನ್ ಬಾವಾ ಎದುರಲ್ಲಿ ಪರಾಭವಗೊಂಡಿದ್ದರು. 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸುವ ಮೂಲಕ ಬಿಜೆಪಿಯ ಅಭ್ಯರ್ಥಿ ಡಾ.ವೈ.ಭರತ್ ಶೆಟ್ಟಿ ಅವರು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಮಂಗಳೂರು ಉತ್ತರ ( ಸುರತ್ಕಲ್ ) ವಿಧಾನಸಭಾ ಕ್ಷೇತ್ರದಲ್ಲಿ ಇದುವರೆಗೆ 8 ಬಾರಿ ಕಾಂಗ್ರೆಸ್, 4 ಬಾರಿ ಬಿಜೆಪಿ, 2 ಬಾರಿ ಪ್ರಜಾ ಸೋಶಿಯಲಿಸ್ಟ್ ಹಾಗೂ ಒಂದು ಬಾರಿ ಜನತಾ ಪಕ್ಷ ಗೆಲುವನ್ನು ಕಂಡಿವೆ. ಅದ್ರಲ್ಲೂ ಬಿಜೆಪಿಯ ಕೃಷ್ಣ ಜೆ.ಪಾಲೇಮಾರ್, ಕಾಂಗ್ರೆಸ್ ಪಕ್ಷದ ವಿಜಯಕುಮಾರ್ ಶೆಟ್ಟಿ ಹಾಗೂ ಬಿ.ಸುಬ್ಬಯ್ಯ ಶೆಟ್ಟಿ ಅವರು ತಲಾ 2 ಬಾರಿ ಶಾಸಕರಾದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಂಗಳೂರು ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್ ಹೆಚ್ಚು ಪ್ರಾಬಲ್ಯವನ್ನು ಹೊಂದಿದೆ. ಹೀಗಾಗಿ ಡಿ.ಕೆ.ಶಿವಕುಮಾರ್ ಇದೇ ಕ್ಷೇತ್ರದಿಂದ ಸ್ಪರ್ಧೆಯನ್ನು ಮಾಡಿದ್ರೆ ಸುಲಭವಾಗಿ ಗೆಲುವು ಸಾಧಿಸಬಹುದು ಅನ್ನೋದು ಸದ್ಯದ ಲೆಕ್ಕಾಚಾರ. ಅಷ್ಟೇ ಅಲ್ಲಾ ಕ್ಷೇತ್ರದಲ್ಲಿರುವ ಅಲ್ಪಸಂಖ್ಯಾತ ಮತಗಳನ್ನು ಸುಲಭವಾಗಿ ಸೆಳೆಯಬಹುದು ಅನ್ನೊ ಪ್ಲ್ಯಾನ್ ನಲ್ಲಿದೆ ಕಾಂಗ್ರೆಸ್.

ಆದರೆ ಮಂಗಳೂರು ಉತ್ತರ ಕ್ಷೇತ್ರದಲ್ಲಿ ಹಾಲಿ ಬಿಜೆಪಿ ಶಾಸಕರಿದ್ದು, ಮಹಾನಗರ ಪಾಲಿಕೆಯ ಚುನಾವಣೆಯಲ್ಲಿಯೂ ಬಿಜೆಪಿ ಪ್ರಾಬಲ್ಯವನ್ನು ಮೆರೆದಿದೆ. ಅಷ್ಟೇ ಅಲ್ಲಾ ಬಿಜೆಪಿ ಕ್ಷೇತ್ರದಲ್ಲಿ ಸಂಘಟನೆಯ ದೃಷ್ಟಿಯಿಂದಲೂ ಸದೃಢವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಕೂಡ ಕ್ಷೇತ್ರದಲ್ಲಿ ಹೆಚ್ಚು ಪ್ರಾಬಲ್ಯವನ್ನು ಹೊಂದಿದ್ದಾರೆ. ಹೀಗಾಗಿ ಕಾಂಗ್ರೆಸ್ ಸಾಧಕ ಬಾಧಕಗಳ ಕುರಿತು ಚರ್ಚೆಯನ್ನು ನಡೆಸುತ್ತಿದೆ. ಒಂದೊಮ್ಮೆ ಡಿ.ಕೆ.ಶಿವಕುಮಾರ್ ಅವರು ಚುನಾವಣೆಯಲ್ಲಿ ಸ್ಪರ್ಧಿಸದೇ ಇದ್ರೆ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿರುವ ಸಲೀಂ ಅಹಮದ್ ಅವರು ಸ್ಪರ್ಧಿಸೋ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

Comments are closed.