ಬೆಂಗಳೂರು; ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಆ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಸಿಎಂ ಸಿದ್ದರಾಮಯ್ಯ ಅವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಸಿಎಂಗೆ ಬಿಗ್ ಶಾಕ್ ಕೊಟ್ಟಿತ್ತು.
ಇದರ ಬೆನ್ನಲ್ಲೇ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಮೈಸೂರು ಲೋಕಾಯುಕ್ತ ಎಸ್ಪಿಗೆ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಎಫ್ ಐಆರ್ ದಾಖಲಿಸಿ, ತನಿಖೆ ನಡೆಸಿ ಕೋರ್ಟ್ ಗೆ ವರದಿ ನೀಡಲು ಆದೇಶ ನೀಡಿತ್ತು. ಈ ಹಿನ್ನೆಲೆ ನಿನ್ನೆ ಸಿಎಂ ಸಿದ್ದರಾಮಯ್ಯ ಅವರು ಎಫ್ ಐಆರ್ ದಾಖಲಾದ್ರೆ ಯಾವ ರೀತಿ ಕಾನೂನೂ ಹೋರಾಟ ನಡೆಸಬೇಕು ಎಂಬ ಬಗ್ಗೆ ಚರ್ಚೆ ನಡೆಸೋದಕ್ಕೆ ಕಾನೂನೂ ತಜ್ಞರು ಹಾಗೂ ಹಿರಿಯ ಸಚಿವರೊಂದಿಗೆ ಮಹತ್ವದ ಸಭೆಯನ್ನು ನಡೆಸಿದ್ದರು. ಇನ್ನು ಅರ್ಜಿ ವಜಾಗೊಂಡಲ್ಲಿಂದ ಸಿಎಂ ಸಿದ್ದರಾಮಯ್ಯ ಅವರು ನಾನು ತಪ್ಪು ಮಾಡಿಲ್ಲ. ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಹೇಳುತ್ತಲೇ ಬಂದಿದ್ದರು. ಇದೀಗ ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ದೂರು ದಾಖಲಿಸಿ ಮತ್ತೊಂದು ಶಾಕ್ ಕೊಟ್ಟಿದೆ.
ಇನ್ನು ಈ ಎಫ್ ಐಆರ್ ನಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಎ1 ಆರೋಪಿ, ಅವರ ಪತ್ನಿ ಪಾರ್ವತಿ ಅವರನ್ನು ಎ2 ಮಾಡಲಾಗಿದೆ. ಇನ್ನು ಸಿಎಂ ಪತ್ನಿ ಪಾರ್ವತಿ ಅವರ ಸಹೋದರ ಮಲ್ಲಿಕಾರ್ಜುನ ಅವರನ್ನು ಎ3 ಮಾಡಲಾಗಿದೆ. ಇವರಿಗೆ ಜಮೀನು ಮಾರಾಟ ಮಾಡಿದ ದೇವರಾಜು ಅವರನ್ನು ಎ4 ಮಾಡಲಾಗಿದೆ. ಇತರೆ ಆರೋಪಿಗಳನ್ನು ಎ5 ಎಂದು ಎಫ್ ಐಆರ್ ನಲ್ಲಿ ಉಲ್ಲೇಖಿಸಲಾಗಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಮೈಸೂರಿನ ಲೋಕಾಯುಕ್ತ ಎಸ್ಪಿ ಕಚೇರಿಯಲ್ಲಿ ಎಫ್ ಐಆರ್ ದಾಖಲಾಗಿದೆ.
ಎಫ್ ಐಆರ್ ದಾಖಲಾದ ಬೆನ್ನಲ್ಲೇ ಇದೀಗ ಸಿಎಂ ಕುರ್ಚಿಗೆ ಕಂಟಕ ಎದುರಾಗಿದ್ದು ಪ್ರತಿಪಕ್ಷಗಳು ಸಿಎಂ ರಾಜೀನಾಮೆ ನೀಡಬೇಕು ಅನ್ನೋ ಹೋರಾಟವನ್ನು ಮತ್ತಷ್ಟು ಬಲಪಡಿಸಿವೆ. ಹಾಗಾಗಿ ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡ್ಕಾರಾ ಅವರ ಮುಂದಿನ ಕಾನೂನು ಹೋರಾಟ ಯಾವ ರೀತಿ ಇರುತ್ತೆ ಅನ್ನೋದು ಕುತೂಹಲಕ್ಕೆ ಎಡೆ ಮಾಡಿ ಕೊಟ್ಟಿದೆ.