ಕುಂದಾಪುರ : ಕುಂದಾಪುರದ ವಾಜಪೇಯಿ ಎಂದೇ ಖ್ಯಾತಿ ಪಡೆದಿರುವ ಬಿಜೆಪಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ (Haladi Srinivas Shetty) ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ತಮ್ಮ ಸ್ನೇಹಿತ ಕಿರಣ್ ಕೊಡ್ಗಿ ಅವರಿಗೆ ಈ ಬಾರಿ ಟಿಕೆಟ್ ನೀಡುವಂತೆ ಖುದ್ದು ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರೇ ಬಿಜೆಪಿ ಹೈಕಮಾಂಡ್ಗೆ ಸೂಚಿಸಿದ್ದು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಿರಣ್ ಕೊಡ್ಗಿ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಈ ಕುರಿತು ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ನಾಳೆ ಅಧಿಕೃತ ಘೋಷಣೆ ಮಾಡುವ ಸಾಧ್ಯತೆಯಿದೆ. ಇನ್ನೊಂದೆಡೆಯಲ್ಲಿ ಹಾಲಾಡಿ ಅವರಿಗೆ ಬಿಜೆಪಿ ಟಿಕೆಟ್ ಕೈತಪ್ಪಿದ ಬೆನ್ನಲ್ಲೇ ಹಾಲಾಡಿ ಅಭಿಮಾನಿಗಳು ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಕಾಂಗ್ರೆಸ್ ಭದ್ರಕೋಟೆಯಾಗಿರುವ ಕುಂದಾಪುರ ವಿಧಾನಸಭಾ ಕ್ಷೇತ್ರವನ್ನು ಹಾಲಾಡಿ ಶ್ರೀನಿವಾಸ ಶೆಟ್ಟಿ ಶಾಸಕರಾಗುವ ಮೂಲಕ ಕ್ಷೇತ್ರವನ್ನು ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. 1999 ರಲ್ಲಿ ಕಾಂಗ್ರೆಸ್ ಪ್ರಭಾವಿ ಮುಖಂಡ ಪ್ರತಾಪ್ ಚಂದ್ರ ಶೆಟ್ಟಿ ಅವರನ್ನು ಸೋಲಿಸುವ ಮೂಲಕ ಶಾಸಕರಾಗಿ ಆಯ್ಕೆಯಾಗಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿ (Haladi Srinivas Shetty) ಅವರು ಅಂದಿನಿಂದ ಇಂದಿನವರೆಗೂ ಸೋಲನ್ನೇ ಕಂಡಿಲ್ಲ. ಸತತ ಐದನೇ ಬಾರಿಗೆ ಕುಂದಾಪುರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದ ಕೀರ್ತಿಗೆ ಪಾತ್ರರಾಗಿದ್ದಾರೆ. ಸಚಿವ ಸ್ಥಾನ ನೀಡದೇ ವಂಚಿಸಿದ ಹಿನ್ನೆಲೆಯಲ್ಲಿ ಬಿಜೆಪಿಯ ಜೊತೆ ಮುನಿಸಿಕೊಂಡು 2012 ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಭರ್ಜರಿ ಗೆಲುವು ದಾಖಲಿಸಿದ್ದರು. ಈ ಬಾರಿಯೂ ಹಾಲಾಡಿ ಅವರಿಗೆ ಟಿಕೆಟ್ ಸಿಗುತ್ತೆ ಅನ್ನೋ ನಿರೀಕ್ಷೆಯಲ್ಲಿದ್ದ ಬಿಜೆಪಿ ಕಾರ್ಯಕರ್ತರಿಗೆ ಹಾಗೂ ಮತದಾರರಿಗೆ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಶಾಕ್ ಕೊಟ್ಟಿದ್ದಾರೆ.
ಕರಾವಳಿಯಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿದ್ದ ಕಾಲದಲ್ಲಿಯೇ ಪ್ರತಾಪ್ ಚಂದ್ರಶೆಟ್ಟಿ ಅವರಿಗೆ ಸೋಲಿನ ರುಚಿ ನೀಡುವ ಮೂಲಕ ಬಿಜೆಪಿ ಪಕ್ಷಕ್ಕೆ ನೆಲೆ ಕಲ್ಪಿಸಿಕೊಟ್ಟಿದ್ದಾರೆ. ನಂತರದಲ್ಲಿ ಅಶೋಕ್ ಕುಮಾರ್ ಶೆಟ್ಟಿ, ಜಯಪ್ರಕಾಶ್ ಹೆಗ್ಡೆ ಅವರನ್ನೂ ಸೋಲಿಸುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದರು. ನಂತರ ಪಕ್ಷೇತರರಾಗಿ ಸ್ಪರ್ಧಿಸಿ ಕ್ಷೇತ್ರದಲ್ಲಿ ಪ್ರಚಾರವನ್ನೇ ಮಾಡದೇ ಗೆಲುವು ಕಂಡಿದ್ದ ಖ್ಯಾತಿಗೆ ಪಾತ್ರರಾಗಿದ್ದಾರೆ.
ರಾಜಕೀಯ ದಾಳಕ್ಕೆ ಬಲಿಯಾದ್ರಾ ಹಾಲಾಡಿ ?
ಸದ್ಯ ರಾಜ್ಯ ರಾಜಕೀಯದಲ್ಲಿ ಬಿಜೆಪಿ ಹಲವು ಪ್ರಯೋಗಗಳನ್ನು ನಡೆಸುತ್ತಿದೆ. ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದರೂ ಕೂಡ ಬಿಜೆಪಿ ಇನ್ನೂ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿಲ್ಲ. ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯ ಹಿಂದೆ ಹಲವು ಲೆಕ್ಕಾಚಾರಗಳು ಕೇಳಿ ಬರುತ್ತಿದೆ. ಅದ್ರಲ್ಲೂ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಜಾತೀವಾರು ರಾಜಕೀಯ ಲೆಕ್ಕಾಚಾರವನ್ನು ನಡೆಸುತ್ತಿದೆ. ಇದೀಗ ವಯಸ್ಸು ಹಾಗೂ ಜಾತಿಯ ಲೆಕ್ಕಾಚಾರದಡಿಯಲ್ಲಿ ಹಾಲಾಡಿ ನಿವೃತ್ತಿ ಘೋಷಿಸಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ಉಡುಪಿ ಕ್ಷೇತ್ರದಿಂದ ರಘುಪತಿ ಭಟ್ ಅವರಿಗೆ ಟಿಕೆಟ್ ಕೈತಪ್ಪುವ ಸಾಧ್ಯತೆಯಿದ್ದು, ಕುಂದಾಪುರ ಕ್ಷೇತ್ರದಲ್ಲಿ ಕಿರಣ್ ಕೊಡ್ಗಿ ಅವರಿಗೆ ಟಿಕೆಟ್ ನೀಡುವ ಮೂಲಕ ಬ್ರಾಹ್ಮಣ ಕೋಟಾವನ್ನು ಕುಂದಾಪುರಕ್ಕೆ ವರ್ಗಾಯಿಸುವ ತಂತ್ರಗಾರಿಕೆಯನ್ನು ಬಿಜೆಪಿ ಮಾಡಿದೆ.
ಹಾಲಾಡಿಗೆ ಕೊನೆಗೂ ಸಿಗಲಿಲ್ಲ ಸಚಿವ ಸ್ಥಾನ
ಸದ್ಯ 71 ವರ್ಷ ವಯಸ್ಸಿನ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ರಾಜಕೀಯದಲ್ಲಿ ಸಕ್ರೀಯರಾಗಿದ್ದರು. ಕುಂದಾಪುರ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸುವ ಕನಸು ಕಂಡಿದ್ದರು. ಕ್ಷೇತ್ರದಲ್ಲಿನ ಯಾವುದೇ ಕಾಮಗಾರಿಯ ಗುದ್ದಲಿಪೂಜೆ, ಉದ್ಘಾಟನೆಯನ್ನೂ ಮಾಡದೇ ಅಭಿವೃದ್ದಿ ಕಾರ್ಯವನ್ನು ಮಾಡುವ ಮೂಲಕ ಮಾದರಿ ಶಾಸಕ ಎನಿಸಿಕೊಂಡಿದ್ದಾರೆ. ಸತತ ಐದು ಬಾರಿ ಶಾಸಕರಾಗಿದ್ದರೂ ಕೂಡ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಬಿಜೆಪಿ ಸಚಿವ ಸ್ಥಾನ ನೀಡದೇ ವಂಚಿಸಿದೆ ಅನ್ನೋ ನೋವು ಕ್ಷೇತ್ರದ ಮತದಾರರು ಹಾಗೂ ಅಭಿಮಾನಿಗಳದ್ದು. ಸಚಿವ ಸ್ಥಾನ ನೀಡುವುದಾಗಿ ಹೇಳಿ ವಿಧಾನಸೌಧಕ್ಕೆ ಕರೆಯಿಸಿ ಬರಿಗೈಯಲ್ಲಿ ಅವರನ್ನು ಕಳುಹಿಸಿದ ಕಹಿ ನೆನಪು ಇಂದಿಗೂ ಮಾಸಿಲ್ಲ.
ಹಾಲಾಡಿ ಅಭಿಮಾನಿಗಳಲ್ಲಿ ಬುಗಿಲೆದ್ದ ಅಸಮಾಧಾನ
ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಟಿಕೆಟ್ ಕೈತಪ್ಪಿದ ಬೆನ್ನಲ್ಲೇ ಹಾಲಾಡಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಒಂದೊಮ್ಮೆ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಟಿಕೆಟ್ ನೀಡದೇ ಇದ್ರೆ ಈ ಬಾರಿ ಕುಂದಾಪುರ ಕ್ಷೇತ್ರದಲ್ಲಿ ಬಿಜೆಪಿ ಧ್ವಜ ಹಾರಲ್ಲ ಎಂಬ ಮಾತುಗಳು ಕೇಳಿಬಂದಿದೆ.