Donkey Milk Soap : ಕತ್ತೆಯ ಹಾಲಿನ ಸೋಪ್‌ ಹೇಗೆ ತಯಾರಿಸುತ್ತಾರೆ ಗೊತ್ತಾ; ಇಷ್ಟೊಂದು ಚರ್ಚೆಯಾಗುತ್ತಿರುವುದಾದರೂ ಏಕೆ…

ಕೇಂದ್ರದ ಮಾಜಿ ಸಚಿವೆ, ಸಂಸದೆ ಮೇನಕಾ ಗಾಂಧಿ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಬಹಳ ಚರ್ಚೆಗೆ ಗ್ರಾಸವಾಗಿದೆ. ಆ ವಿಡಿಯೋದಲ್ಲಿ ವಿಡಿಯೋದಲ್ಲಿ ಕತ್ತೆ ಹಾಲಿನಿಂದ ತಯಾರಿಸಿದ ಸೋಪು (Donkey Milk Soap) ಮಹಿಳೆಯರ ದೇಹವನ್ನು ಸದಾ ಸುಂದರವಾಗಿ ಇಡುತ್ತದೆ ಎಂದು ಹೇಳುತ್ತಿರುವುದು ಕಂಡು ಬಂದಿದೆ. ಪ್ರಸಿದ್ಧ ಈಜಿಫ್ತಿನ ರಾಣಿ ಕ್ಲಿಯೋಪಾತ್ರ ಸುಂದರವಾಗಿರಲು ಕತ್ತೆಯ ಹಾಲಿನಲ್ಲಿ ಸ್ನಾನ ಮಾಡುತ್ತಿದ್ದಳು ಎಂದು ಅವರು ಹೇಳಿದ್ದಾರೆ. ಈಗ ಕತ್ತೆ ಹಾಲಿನಿಂದ ತಯಾರಿಸಿದ ಸಾಬೂನು ನಿಜವಾಗಿಯೂ ತುಂಬಾ ಪ್ರಯೋಜನಕಾರಿಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಹಾಗಾದರೆ ಕತ್ತೆಯ ಹಾಲಿನಿಂದ ತಯಾರಿಸುವ ಸೋಪಿನಿಂದ ದೊರೆಯುವ ಪ್ರಯೋಜನಗಳೇನು? ಅದನ್ನು ಹೇಗೆ ತಯಾರಿಸುತ್ತಾರೆ ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಕತ್ತೆಯ ಹಾಲಿನಿಂದ ಸೋಪ್‌ ಹೇಗೆ ತಯಾರಿಸುತ್ತಾರೆ?
ಕತ್ತೆಯ ಹಾಲಿನ ಸೋಪು ಒಂದು ನೈಸರ್ಗಿಕ ಸೋಪ್‌ ಎಂದು ಹೇಳಬಹುದು. ಗಾಂವ್ ಕನೆಕ್ಷನ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ದೆಹಲಿಯಲ್ಲಿ ನೆಲೆಸಿರುವ ಪೂಜಾ ಕೌಲ್ ಅವರು ಇತ್ತೀಚೆಗೆ ‘ಆರ್ಗಾನಿಕೋ’ ಎಂಬ ಸ್ಟಾರ್ಟಪ್ ಅನ್ನು ಪ್ರಾರಂಭಿಸಿದ್ದಾರೆ. ಈ ಸ್ಟಾರ್ಟ್ಅಪ್ ಕತ್ತೆ ಹಾಲಿನಿಂದ ಸೋಪ್‌ ತಯಾರಿಸುತ್ತದೆ. ಚಂಡೀಗಢದಲ್ಲಿ ನಡೆದ 6ನೇ ಭಾರತೀಯ ಸಾವಯವ ಉತ್ಸವದಲ್ಲಿ ಪೂಜಾ ಕೌಲ್ ಅವರು ಈ ವಿಶಿಷ್ಟ ಸಾಬೂನನ್ನು ಪ್ರಸ್ತುತಪಡಿಸಿದ್ದಾರೆ. ಇದನ್ನು ತಯಾರಿಸಲು 5 ವಿಧದ ನೈಸರ್ಗಿಕ ತೈಲಗಳನ್ನು ಕತ್ತೆ ಹಾಲಿನೊಂದಿಗೆ ಬೆರೆಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಇದರೊಂದಿಗೆ ಜೇನುತುಪ್ಪ ಮತ್ತು ಇದ್ದಿಲು ಕೂಡ ಇದರಲ್ಲಿ ಮಿಶ್ರಣವಾಗಿದ್ದು ಮೊಡವೆ, ಎಣ್ಣೆಯುಕ್ತ ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ. ತ್ವಚೆಯು ಸೂಕ್ಷ್ಮವಾಗಿರುವವರಿಗೆ ಕತ್ತೆ ಹಾಲಿನಲ್ಲಿ ಅಲೋವೆರಾ, ಶ್ರೀಗಂಧ, ಬೇವು, ಪಪ್ಪಾಯಿ, ಅರಿಶಿನ ಮತ್ತು ಇತರ ಹಲವು ಬಗೆಯ ಎಣ್ಣೆಗಳನ್ನು ಬಳಸಿ ಸಾಬೂನು ತಯಾರಿಸಲಾಗುತ್ತದೆ.

ಇದನ್ನೂ ಓದಿ: ಬೇಸಿಗೆಯಲ್ಲಿ ನಿಮ್ಮ ಚರ್ಮ ಸಂರಕ್ಷಣೆಗಾಗಿ ಈ ಸಲಹೆಗಳನ್ನು ಅನುಸರಿಸಿ

ಕತ್ತೆ ಹಾಲಿನಲ್ಲಿ ಯಾವ ಗುಣಗಳು ಕಂಡುಬರುತ್ತವೆ?
ಕತ್ತೆ ಹಾಲಿನಲ್ಲಿ ಕೊಬ್ಬಿನಾಮ್ಲಗಳಿವೆ, ಇದು ಆಂಟಿ ಏಜಿಂಗ್‌ ಮತ್ತು ಹೀಲಿಂಗ್‌ ಗುಣಲಕ್ಷಣ ಹೊಂದಿದೆ. ಈ ಕೊಬ್ಬಿನಾಮ್ಲಗಳು ಚರ್ಮದ ಮೇಲಿನ ಸುಕ್ಕುಗಳನ್ನು ಹೋಗಲಾಡಿಸುತ್ತದೆ ಮತ್ತು ಹಾನಿಗೊಳಗಾದ ಚರ್ಮವನ್ನು ಮರುನಿರ್ಮಾಣ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ, ಕತ್ತೆಯ ಹಾಲು ಸಹ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಚರ್ಮದ ಕಿರಿಕಿರಿ ಮತ್ತು ಚರ್ಮದ ಮೇಲೆ ಕೆಂಪಾಗುವುದನ್ನು ಗುಣಪಡಿಸುವಲ್ಲಿ ಪರಿಣಾಮಕಾರಿಯಾಗಿದೆ. ಯೌವನದ ನೈಸರ್ಗಿಕ ಅಮೃತ ಎಂದು ಕರೆಯಲ್ಪಡುವ ಕತ್ತೆ ಹಾಲು ಆಂಟಿ ಒಕ್ಸಿಡೆಂಟ್‌ ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ವಿಟಮಿನ್ ಇ, ಅಮೈನೋ ಆಮ್ಲಗಳು, ವಿಟಮಿನ್ ಎ, ಬಿ1, ಬಿ6, ಸಿ, ಇ, ಒಮೆಗಾ 3 ಮತ್ತು 6 ಅನ್ನು ಹೊಂದಿರುತ್ತದೆ.

ಇದನ್ನೂ ಓದಿ: ಕರುಳಿನ ಆರೋಗ್ಯಕ್ಕಾಗಿ ಸೂರ್ಯಾಸ್ತದ ನಂತರ ಈ ಆಹಾರಗಳನ್ನು ತಪ್ಪಿಸಿ

(Donkey Milk Soap. What are its benefits and how is it made? Maneka Gandhi’s viral video)

Comments are closed.