ಬೆಂಗಳೂರು: High Court Notice: ಕೆಜಿಎಫ್- 2 ಹಾಡಿನ ದುರ್ಬಳಕೆ ಸಂಬಂಧ ಕೋರ್ಟ್ ಆದೇಶ ಪಾಲಿಸದ ಹಿನ್ನೆಲೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಗೆ ಕರ್ನಾಟಕ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಜೊತೆಗೆ ಕಾಂಗ್ರೆಸ್ ಹಿರಿಯ ನಾಯಕರಾದ ಜೈರಾಮ್ ರಮೇಶ್ ಹಾಗು ಸುಪ್ರೀಯಾ ಅವರಿಗೂ ನೋಟಿಸ್ ಜಾರಿ ಆಗಿದೆ.
ಕಾಂಗ್ರೆಸ್ ಪಕ್ಷವು ಕೆಜಿಎಫ್- 2 ಚಿತ್ರದ ಹಾಡನ್ನು ದುರ್ಬಳಕೆ ಮಾಡಿದೆ. ಕೋರ್ಟ್ ಆದೇಶವನ್ನು ಪಾಲಿಸಿಲ್ಲ. ತನ್ನ ಎಲ್ಲಾ ಸಾಮಾಜಿಕ ಜಾಲತಾಣಗಳ ಖಾತೆಯಿಂದ ಕೆಜಿಎಫ್- 2 ಸಿನಿಮಾದ ಹಾಡನ್ನು ತೆಗೆದು ಹಾಕಿಲ್ಲ. ಬದಲಿಗೆ ಹೆಚ್ಚುವರಿ ಸಂಗೀತ ಬಳಸಿದೆ. ಅಷ್ಟೆ ಅಲ್ಲದೇ ಹೈಕೋರ್ಟ್ ಗೆ ನೀಡಿದ್ದ ಮುಚ್ಚಳಿಕೆ ಉಲ್ಲಂಘಿಸಿದೆ ಎಂದು ಆರೋಪಿಸಿ ಎಂಆರ್ ಟಿ ಮ್ಯೂಸಿಕ್ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು. ಈ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ್ದ ಕಾಂಗ್ರೆಸ್ ಪಕ್ಷವು, ತಮ್ಮ ಎಲ್ಲಾ ಸಾಮಾಜಿಕ ಜಾಲತಾಣಗಳಿಂದ ಕೆಜಿಎಫ್- 2 ಹಾಡನ್ನು ತೆಗೆದುಹಾಕುವುದಾಗಿ ಮುಚ್ಚಳಿಕೆ ನೀಡಿತ್ತು. ಅರ್ಜಿದಾರ ಎಂಆರ್ ಟಿ ಮ್ಯೂಸಿಕ್ ಸಂಸ್ಥೆಗೆ ಈ ಸಂಬಂಧ ಅಗತ್ಯ ದಾಖಲೆ ಒದಗಿಸುವುದಾಗಿ ಕಾಂಗ್ರೆಸ್ ಪರ ವಾದಿಸಿದ್ದ ವಕೀಲ ಅಭಿಷೇಕ್ ಮನು ಸಿಂಘ್ವಿ ಭರವಸೆ ನೀಡಿದ್ದರು.
ಏನಿದು ಪ್ರಕರಣ..?
ಕೆಜಿಎಫ್- 2 ಸಿನಿಮಾದ ಹಾಡನ್ನು ಅನುಮತಿ ಇಲ್ಲದೇ ಬಳಸಿಕೊಂಡು ಎಂಆರ್ ಟಿ ಮ್ಯೂಸಿಕ್ ಕಂಪೆನಿಯ ಹಕ್ಕು ಸ್ವಾಮ್ಯವನ್ನು ಉಲ್ಲಂಘಿಸಿದ ಆರೋಪದ ಮೇಲೆ ಕಾಂಗ್ರೆಸ್ ಪಕ್ಷದ ಹಾಗೂ ಭಾರತ್ ಜೋಡೋ ಯಾತ್ರೆಯ ಟ್ವಿಟರ್ ಖಾತೆಗಳನ್ನು ತಾತ್ಕಾಲಿಕವಾಗಿ ನಿಬಂಧಿಸುವಂತೆ ಬೆಂಗಳೂರಿನ ವಾಣಿಜ್ಯ ನ್ಯಾಯಾಲಯವು ಟ್ವಿಟರ್ ಗೆ ನಿರ್ದೇಶನ ನೀಡಿತ್ತು. ಇದನ್ನು ಕಾಂಗ್ರೆಸ್ ಹೈಕೋರ್ಟ್ ನಲ್ಲಿ ಪ್ರಶ್ನೆ ಮಾಡಿತ್ತು.
ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಕಾಲ್ನಡಿಗೆಯಲ್ಲಿ ಸಾಗುವ ವಿಡಿಯೋಗೆ ಕೆಜಿಎಫ್ -2 ಸಿನಿಮಾದ ಸುಲ್ತಾನ್ ಹಾಡನ್ನು ಬಳಕೆ ಮಾಡಲಾಗಿತ್ತು. ಈ ಹಿನ್ನೆಲೆ ರಾಹುಲ್ ಗಾಂಧಿ ವಿರುದ್ಧ ಸುಲ್ತಾನ್ ಹಾಡಿನ ಹಿಂದಿ ಹಕ್ಕನ್ನು ಹೊಂದಿರುವ ಎಂಆರ್ ಟಿ ಮ್ಯೂಸಿಕ್ ತಂಡ ಯಶವಂತಪುರ ಠಾಣೆಯಲ್ಲಿ ಫೋರ್ಜರಿ ಪ್ರಕರಣ ದಾಖಲಿಸಿದ್ದರು. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಕಾಂಗ್ರೆಸ್ ಮಾಧ್ಯಮ ವಿಭಾಗದ ಮುಖ್ಯಸ್ಥ ಜೈರಾಮ್ ರಮೇಶ್, ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ಸುಪ್ರೀಯಾ ಹೆಸರನ್ನು ಪ್ರಕರಣದಲ್ಲಿ ಉಲ್ಲೇಖಿಸಲಾಗಿತ್ತು.
ಎಂಆರ್ ಟಿ ಮ್ಯೂಸಿಕ್ ಪರ ವಕೀಲ ಎಂ.ಪ್ರಣವ್ ಕುಮಾರ್ ಅವರ ವಾದವನ್ನು ಆಲಿಸಿದ ಕೋರ್ಟ್ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದ್ದು, ಜನವರಿ 12ಕ್ಕೆ ವಿಚಾರಣೆ ಮುಂದೂಡಿದೆ.
ಇದನ್ನೂ ಓದಿ: Ricky Ponting: ಮಾಜಿ ಕ್ರಿಕೆಟಿಗ ರಿಕಿ ಪಾಂಟಿಂಗ್ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು
High Court Notice: Karnataka High Court issues Contempt Notice to Rahul Gandhi and other congress Leaders