ಸೋಮವಾರ, ಏಪ್ರಿಲ್ 28, 2025
Homepoliticsಅಪ್ಪ ಬಿಜೆಪಿಗೆ ಮಗ ಕಾಂಗ್ರೆಸ್ ಗೆ…! ಕೈ ತೆಕ್ಕೆಗೆ ಜಾರಿದ ಶಾಸಕ ಶರತ್ ಬಚ್ಚೇಗೌಡ..!

ಅಪ್ಪ ಬಿಜೆಪಿಗೆ ಮಗ ಕಾಂಗ್ರೆಸ್ ಗೆ…! ಕೈ ತೆಕ್ಕೆಗೆ ಜಾರಿದ ಶಾಸಕ ಶರತ್ ಬಚ್ಚೇಗೌಡ..!

- Advertisement -

ಹೊಸಕೋಟೆ : ಬೈ ಎಲೆಕ್ಷನ್ ಅಖಾಡ ರಂಗೇರುತ್ತಿದ್ದಂತೆ ಮತ್ತೊಮ್ಮೆ ರಾಜ್ಯದಲ್ಲಿ ಪಕ್ಷ ಸೇರ್ಪಡೆ ಸದ್ದು ಮಾಡುತ್ತಿದ್ದು, ಒಕ್ಕಲಿಗ ಯುವ ನಾಯಕ, ಪಕ್ಷೇತರ ಶಾಸಕ ಹಾಗೂ ಹಾಲಿ ಬಿಜೆಪಿ ಸಂಸದರ ಪುತ್ರ ಬಚ್ಚೇಗೌಡ ಮೂರು ರಾಷ್ಟ್ರೀಯ ಪಕ್ಷದ ಬಾಗಿಲು ಬಡಿದ ಬಳಿಕ ಕೊನೆಗೆ ಕೈ ತೆಕ್ಕೆಗೆ ಜಾರಿದ್ದಾರೆ.

ಮೂಲಗಳ ಮಾಹಿತಿ ಪ್ರಕಾರ ಮಾಜಿ ಸಚಿವ ಕೃಷ್ಣಭೈರೇಗೌಡರ ಮನವೊಲಿಕೆ ಮಾತುಕತೆ ಬಳಿಕ ಶರತ್ ಬಚ್ಚೇಗೌಡ ಬೇಷರತ್ತಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರಲು ಒಪ್ಪಿಕೊಂಡಿದ್ದು, ಮುಂಬರುವ ವಿಜಯದಶಮಿ ಶುಭದಿನದಂದು ಶರತ್ ಬಚ್ಚೇಗೌಡ ಸರಳ ಸಮಾರಂಭದಲ್ಲಿ ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರೆ.

ಕಾಂಗ್ರೆಸ್ ಬಲಗೊಳಿಸುವ ಏಕಮೇವ ಉದ್ದೇಶದಿಂದ ಕೆಪಿಸಿಸಿ ಚುಕ್ಕಾಣಿ ಹಿಡಿದಿರುವುದಾಗಿ ಹೇಳಿಕೊಂಡಿರುವ ಕನಕಪುರ ಬಂಡೆ ಡಿಕೆಶಿಯವರ ಸೂಚನೆ ಮೇರೆಗೆ ಶರತ್ ಬಚ್ಚೇಗೌಡ ಅವರನ್ನು ಕಾಂಗ್ರೆಸ್ ಗೆ ಕರೆತರುವ ಪ್ರಯತ್ನ ನಡೆದಿತ್ತು. ಈಗ ಪ್ರಯತ್ನ ಯಶಸ್ವಿಯಾಗಿದ್ದು ಪಕ್ಷ ಸೇರ್ಪಡೆ ಮುಹೂರ್ತ ಫಿಕ್ಸ್ ಆಗಿದೆ.

ಹೊಸಕೋಟೆ ಉಪಚುನಾವಣೆ ವೇಳೆ ಬಿಜೆಪಿ ಟಿಕೇಟ್ ಪಡೆಯುವ ವಿಶ್ವಾಸದಲ್ಲಿದ್ದ ಶರತ್ ಬಚ್ಚೇಗೌಡ ಅವರಿಗೆ ಆಪರೇಷನ್ ಕಮಲ ಅಡ್ಡಗಾಲಾಗಿತ್ತು. ಬಿಜೆಪಿ ಸರ್ಕಾರ ರಚನೆಗೆ ಕಾರಣವಾದ ಎಂಟಿಬಿ ನಾಗರಾಜ್ ಗೆ ಟಿಕೇಟ್ ನೀಡೋದು ಅನಿವಾರ್ಯ ವಾಗಿದ್ದರಿಂದ ರೊಚ್ಚಿಗೆದ್ದ ಶರತ್ ಬಚ್ಚೇಗೌಡ ಪಕ್ಷೇತರವಾಗಿ ಸ್ಪರ್ಧಿಸಿ ಎಂಟಿಬಿ ಸೋಲಿಗೆ ಕಾರಣವಾಗಿದ್ದರು.

ಈ ಹಿನ್ನೆಲೆಯಲ್ಲಿ ಬಿಜೆಪಿ ಅವನ ಅನಿವಾರ್ಯವಾಗಿ ಶರತ್ ಬಚ್ಚೇಗೌಡರನ್ನು ಪಕ್ಷದಿಂದ ಹೊರಹಾಕಿತ್ತು. ಶಾಸಕರಾದ ಬಳಿಕ ಶರತ್ ಬಿಜೆಪಿ ಸೇರ್ಪಡೆ ಪ್ರಯತ್ನ ನಡೆಸಿದರೂ ಶರತ್ ಬೆಳವಣಿಗೆ ಹಾಗೂ ಜನಪ್ರಿಯತೆ ಗಮನಿಸಿದ ಬಿಜೆಪಿಯ ಕೆಲ ಒಕ್ಕಲಿಗ ನಾಯಕರು ಪಕ್ಷದೊಳಕ್ಕೆ ಬಿಟ್ಟುಕೊಳ್ಳುವ ಸಾಹಸಕ್ಕೆ ಮುಂದಾಗಲಿಲ್ಲ ಎನ್ನಲಾಗಿದೆ. ಹೀಗಾಗಿ ಜೆಡಿಎಸ್ ಬಾಗಿಲು ಬಡಿದಿದ್ದ ಶರತ್ , ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಆದರೆ ಕೊನೆಗೆ ಜೆಡಿಎಸ್ ಸೇರುವ ನಿರ್ಧಾರ ಕೈಬಿಟ್ಟ ಶರತ್ ಈಗ ಕಾಂಗ್ರೆಸ್ ಪಾಳಯಕ್ಕೆ ಸೇರಿದ್ದಾರೆ. ಅಧಿಕೃತ ಸೇರ್ಪಡೆಯೊಂದೇ ಬಾಕಿ.

ಮೂಲಗಳ ಪ್ರಕಾರ ಹೊಸಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎಂಟಿಬಿ ಕಟ್ಟಿಬೆಳೆಸಿದ ಕಾಂಗ್ರೆಸ್ ಈಗ ಶಕ್ತಿಹೀನವಾಗಿದೆ. ಆದರೆ ಶಾಸಕ ಶರತ್ ಬಚ್ಚೇಗೌಡರ ಜನಪ್ರಿಯತೆ ಪ್ರಭಲವಾಗಿದೆ. ಇದನ್ನು ಪಕ್ಷದ ಬೆಳವಣಿಗೆಗೆ ಬಳಸಿಕೊಳ್ಳುವ ಉದ್ದೇಶದಿಂದ ಕಾಂಗ್ರೆಸ್ ಯುವಶಾಸಕನನ್ನು ಸೆಳೆದಿದೆ ಎನ್ನಲಾಗುತ್ತಿದೆ. ಆದರೆ ಬಿಜೆಪಿಯಿಂದ ಸಂಸದರಾಗಿರುವ ಬಚ್ಚೇಗೌಡರಿಗೆ ಮಗನ ಕಾಂಗ್ರೆಸ್ ಸೇರ್ಪಡೆ ತುಸು ಮುಜುಗರ ತರುವಂತಿದ್ದು, ಬಿಜೆಪಿ ಕೂಡ ಈ ಸಂಗತಿಯಿಂದ ಅಸಮಧಾನಕ್ಕೊಳಗಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರೋ ಸಂಸದ ಬಚ್ಚೇಗೌಡರು, ಶರತ್ ತನ್ನ ರಾಜಕೀಯ ನಿರ್ಧಾರಗಳನ್ನು ಕೈಗೊಳ್ಳಲು ಸ್ವತಂತ್ರ ಎಂದಿದ್ದಾನೆ. ಆದರೆ ಈ ಬೆಳವಣಿಗೆಯಿಂದ ರಾಜಕೀಯದಲ್ಲಿ ಅಪ್ಪ ಒಂದು ಪಕ್ಷ ಮಗ ಮತ್ತೊಂದು ಪಕ್ಷ ಎಂಬಂತಾಗಿರೋದು ಸುಳ್ಳಲ್ಲ.

RELATED ARTICLES

Most Popular