ಹೊಸದುರ್ಗ : ಹಣ್ಣಿನ ಬುಟ್ಟಿಯ ಜೊತೆ ಜಯದ ವಿಶ್ವಾಸದಲ್ಲಿ ಗೂಳಿಹಟ್ಟಿ

ಹೊಸದುರ್ಗ : Hosadurga Constituency : ದಕ್ಷಿಣ ಭಾರತದಲ್ಲಿಯೇ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ಮೂಲ ಕಾರಣ ಹೊಸದುರ್ಗದ ಹಾಲಿ ಶಾಸಕ ಗೂಳಿಹಟ್ಟಿ ಶೇಖರ್‌ (Gulihatti D Shekar) . ಸದ್ಯ ಬಿಜೆಪಿಯಿಂದ ಟಿಕೆಟ್‌ ಸಿಗದ ಹಿನ್ನೆಲೆಯಲ್ಲಿ ಅವರು ಈ ಬಾರಿಯ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಕ್ಷೇತ್ರದಲ್ಲೀಗ ಪಕ್ಷೇತರ ಅಭ್ಯರ್ಥಿ ಗೂಳಿಹಟ್ಟಿ ಡಿ.ಶೇಖರ್‌ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಬಿ.ಜಿ.ಗೋವಿಂದಪ್ಪ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಆದರೆ ಹೊಸದುರ್ಗ ಕ್ಷೇತ್ರದ ಜನತೆ ಅತೀ ಹೆಚ್ಚು ಬಾರಿ ಪಕ್ಷೇತರ ಅಭ್ಯರ್ಥಿಗಳನ್ನೇ ಗೆಲ್ಲಿಸಿದ್ದಾರೆ. ಹೀಗಾಗಿ ಶಾಸಕ ಗೂಳಿಹಟ್ಟಿ ಶೇಖರ್‌ ಅವರು ಈ ಬಾರಿ ಪಕ್ಷೇತರರಾಗಿ ಸ್ಪರ್ಧೆ ಮಾಡುತ್ತಿರುವುದು ಕುತೂಹಲ ಮೂಡಿಸಿದೆ.

ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರಿಗೆ ಸೋಲಿನ ರುಚಿಯನ್ನು ತೋರಿಸಿರುವುದು ಇದೇ ಹೊಸದುರ್ಗ ವಿಧಾನಸಭಾ ಕ್ಷೇತ್ರ. ಬುದ್ದಿವಂತ ಮತದಾರರನ್ನು ಹೊಂದಿರುವ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ವಿಧಾನಸಭಾ ಕ್ಷೇತ್ರ ಪ್ರತೀ ಚುನಾವಣೆಯಲ್ಲಿಯೂ ರಾಜ್ಯದ ಗಮನ ಸೆಳೆಯುತ್ತಿದೆ. ಈ ಬಾರಿಯೂ ಪಕ್ಷೇತರ ಅಭ್ಯರ್ಥಿ ಗೂಳಿಹಟ್ಟಿ ಶೇಖರ್‌ ಅವರಿಂದಾಗಿ ಕ್ಷೇತ್ರ ಮತ್ತೆ ಕುತೂಹಲವನ್ನು ಮೂಡಿಸಿದೆ. ಗೂಳಿಹಟ್ಟಿ ಡಿ.ಶೇಖರ್‌ (Gulihatti D Shekar) ಅವರು ಹಣ್ಣಿನಬುಟ್ಟಿ ಚಿಹ್ನೆಯೊಂದಿಗೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಇನ್ನು ಕಾಂಗ್ರೆಸ್‌ ಪಕ್ಷದಿಂದ ಬಿ.ಜಿ.ಗೋವಿಂದಪ್ಪ, ಬಿಜೆಪಿಯಿಂದ ಲಿಂಗಮೂರ್ತಿ ಹಾಗೂ ಜೆಡಿಎಸ್‌ ಪಕ್ಷದಿಂದ ಎಂ.ತಿಪ್ಪೇಸ್ವಾಮಿ ಅವರು ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಸೇರುವ ಮೂಲಕ ಗೂಳಿಹಟ್ಟಿ ಡಿ.ಶೇಖರ್‌ ಅವರು ಹೊಸದುರ್ಗ ಕ್ಷೇತ್ರದಲ್ಲಿ ಬಿಜೆಪಿ ಖಾತೆ ತೆರೆಯುವಂತೆ ಮಾಡಿದ್ದರು. ಕರ್ನಾಟಕದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ಕಾರಣರಾಗಿದ್ದ ಗೂಳಿಹಟ್ಟಿ ಶೇಖರ್‌ ಅವರಿಗೆ ಬಿಜೆಪಿ ಟಿಕೆಟ್‌ ನೀಡದಿರುವ ಕುರಿತು ಅಭಿಮಾನಿಗಳು ನೋವನ್ನು ತೋಡಿಕೊಳ್ಳುತ್ತಿದ್ದಾರೆ.

ಕ್ಷೇತ್ರದಲ್ಲಿ ಐದು ಬಾರಿ ಗೆಲುವು ಕಂಡ ಪಕ್ಷೇತರರು

ಹೊಸದುರ್ಗ ವಿಧಾನಸಭಾ ಕ್ಷೇತ್ರ (Hosadurga Constituency) ರಾಜ್ಯದಲ್ಲಿಯೇ ವಿಶಿಷ್ಟ ಕ್ಷೇತ್ರಗಳಲ್ಲೊಂದು. ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌, ಬಿಜೆಪಿಗಿಂತಲೂ ಪಕ್ಷೇತರ ಅಭ್ಯರ್ಥಿಗಳೇ ಅತೀ ಹೆಚ್ಚು ಸಂಖ್ಯೆಯಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 1957ರಲ್ಲಿ ಹೊಸದುರ್ಗ ವಿಧಾನಸಭೆಗೆ ನಡೆದ ಮೊದಲ ಚುನಾವಣೆಯಲ್ಲಿಯೇ ಪಕ್ಷೇತರ ಅಭ್ಯರ್ಥಿ ಬಿ.ಎಸ್.ಶಂಕರಪ್ಪ ಅವರು ಗೆಲುವು ದಾಖಲಿಸಿದ್ದರು. ನಂತರದಲ್ಲಿ ಕ್ಷೇತ್ರವನ್ನು ಪಿಎಸ್‌ಪಿ ಗೆಲುವು ಕಂಡಿದ್ದು, ಎರಡು ಚುನಾವಣೆಯ ಬಳಿಕ ಕಾಂಗ್ರೆಸ್‌ ಹೊಸದುರ್ಗದಲ್ಲಿ ಗೆಲುವು ದಾಖಲಿಸಿತ್ತು. ಕ್ಷೇತ್ರದಲ್ಲಿ ಒಟ್ಟು ಕಾಂಗ್ರೆಸ್‌ ಅಭ್ಯರ್ಥಿಗಳು ಐದು ಬಾರಿ ಗೆಲುವು ದಾಖಲಿಸಿದ್ದರೆ, ಪಕ್ಷೇತರ ಅಭ್ಯರ್ಥಿಗಳು ಕೂಡ ಐದು ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಹೊಸ ದಾಖಲೆಯನ್ನೇ ಬರೆದಿದ್ದಾರೆ. 1989 ರಲ್ಲಿ ಪಕ್ಷೇತರ ಅಭ್ಯರ್ಥಿ ಇ.ವಿಜಯಕುಮಾರ್‌ ಗೆಲುವು ಕಂಡಿದ್ದು, 1994ರ ಚುನಾವಣೆಯಲ್ಲಿ ಕಾಂಗ್ರೆಸ್‌ ಸೇರ್ಪಡೆಯಾಗಿದ್ದ ಇ.ವಿಜಯ್‌ ಕುಮಾರ್‌ ಪಕ್ಷೇತರ ಅಭ್ಯರ್ಥಿ ಟಿ.ಎಚ್.ಬಸವರಾಜ್‌ ಅವರ ಎದುರು ಸೋಲನ್ನು ಕಂಡಿದ್ದರು. 1999 ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಬಿ.ಜಿ.ಗೋವಿಂದಪ್ಪ ಅವರು ಗೆಲುವು ದಾಖಲಿಸಿದ್ದರು. 2004 ರ ಚುನಾವಣೆಯಲ್ಲಿ ಗೋವಿಂದಪ್ಪ ಕಾಂಗ್ರೆಸ್‌ ಸೇರ್ಪಡೆಯಾಗಿದ್ದರು. ಜೆಡಿಎಸ್‌ ಪಕ್ಷದ ವಿರುದ್ದ ಅವರು ಗೆಲುವು ದಾಖಲಿಸಿದ್ದರು. ಇನ್ನು 2008 ರ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಗೂಳಿಹಟ್ಟಿ ಶೇಖರ್‌ ಅವರು ಶಾಸಕ ಬಿ.ಜಿ.ಗೋವಿಂದಪ್ಪ ಅವರಿಗೆ ಸೋಲಿನ ರುಚಿ ತೋರಿಸಿದ್ದರು. ಮಾತ್ರವಲ್ಲ ಬಿ.ಎಸ್.ಯಡಿಯೂರಪ್ಪ ಅವರ ಸರಕಾರದಲ್ಲಿ ಸಚಿವರಾಗಿಯೂ ಆಯ್ಕೆಯಾಗಿದ್ದರು.

ಹಣ್ಣಿನ ಬುಟ್ಟಿಗೆ ಜನ ಬೆಂಬಲ

ಹೊಸದುರ್ಗ ಕ್ಷೇತ್ರದ ಶಾಸಕರಾಗಿದ್ದ ಗೂಳಿಹಟ್ಟಿ ಶೇಖರ್‌ ಬಿಜೆಪಿ ಸರಕಾರದಲ್ಲಿ ನಡೆಯುತ್ತಿದ್ದ ಅವ್ಯವಹಾರವನ್ನು ಬಯಲು ಮಾಡಿದ್ದರು. ಇದೇ ಗೂಳಿಹಟ್ಟಿ ಶೇಖರ್‌ ಅವರಿಗೆ ಬಿಜೆಪಿ ಟಿಕೆಟ್‌ ಸಿಗದೇ ಇರೋದಕ್ಕೆ ಕಾರಣವಾಗಿತ್ತು. ಎರಡು ಅವಧಿಯ ನಂತರದಲ್ಲಿ ಮತ್ತೆ ಗೂಳಿಹಟ್ಟಿ ಪಕ್ಷೇತರರಾಗಿ ಸ್ಪರ್ಧೆ ಮಾಡುತ್ತಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಗೂಳಿಹಟ್ಟಿ ಡಿ.ಶೇಖರ್‌ ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡಿದ ಕಾರಣಕ್ಕೆ ಹೊಸದುರ್ಗದಲ್ಲಿ ಕೇಸರಿ ಬಾವುಟ ಹಾರಾಡಿತ್ತು. ಎರಡು ಬಾರಿ ಹೊಸದುರ್ಗ ಶಾಸಕರಾಗಿರುವ ಗೂಳಿಹಟ್ಟಿ ಶೇಖರ್‌ ಕ್ಷೇತ್ರದ ಪ್ರತೀ ಹಳ್ಳಿಯನ್ನೂ ಸುತ್ತಿ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಟಿಕೆಟ್‌ ಹಾಕದೇ ಇರುವ ಪ್ರದೇಶಗಳಲ್ಲಿಯೂ ಪಕ್ಷಾತೀತವಾಗಿ ಕೆಲಸ ಕಾರ್ಯಗಳನ್ನು ಮಾಡಿಕೊಟ್ಟಿದ್ದಾರೆ. ಇನ್ನು ಕ್ರೀಡಾ ಸಚಿವರಾಗಿದ್ದ ವೇಳೆಯಲ್ಲಿ ಕ್ರೀಡಾ ಇಲಾಖೆಗೆ ಹೊಸ ಚೈತನ್ಯವನ್ನು ಮೂಡಿಸಿದ್ದಾರೆ. ರಾಜ್ಯದ ಕ್ರೀಡಾಪಟುಗಳಿಗೆ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಪ್ರಶಸ್ತಿ ಪಡೆದಾಗಿ ಕರ್ನಾಟಕದಲ್ಲಿ ನಗದು ಪುರಸ್ಕಾರ ನೀಡಲಾಗುತ್ತಿರಲಿಲ್ಲ. ಇದೇ ಕಾರಣಕ್ಕೆ ಕ್ರೀಡಾಪಟುಗಳು ಇತರರ ರಾಜ್ಯಗಳನ್ನು ಪ್ರತಿನಿಧಿಸುತ್ತಿದ್ದರು. ಆದರೆ ಗೂಳಿಹಟ್ಟಿ ಶೇಖರ್‌ ಕ್ರೀಡಾ ಸಚಿವರಾದ ನಂತರದಲ್ಲಿ ನಗದು ಪುರಸ್ಕಾರ ನೀಡುವ ಘೋಷಣೆಯನ್ನು ಮಾಡಿದ್ರು. ನಂತರದಲ್ಲಿ ಕರ್ನಾಟಕದ ಕ್ರೀಡಾಪಟುಗಳು ನಮ್ಮ ರಾಜ್ಯವನ್ನು ಪ್ರತಿನಿಧಿಸುವ ಕಾರ್ಯ ಮಾಡಿದ್ದರು. ಈ ಸಂಪ್ರದಾಯ ಇಂದಿಗೂ ನಡೆದುಕೊಂಡು ಬಂದಿದೆ. ರಾಜ್ಯದ ಕ್ರೀಡಾಪಟುಗಳು ಗೂಳಿಹಟ್ಟಿ ಶೇಖರ್‌ ಅವರನ್ನು ಸದಾ ನೆನೆಯುತ್ತಿದ್ದಾರೆ. ಇನ್ನು ಕ್ಷೇತ್ರದಲ್ಲಿ ಪಕ್ಷೇತರರು ಅತೀ ಹೆಚ್ಚು ಬಾರಿ ಗೆಲುವು ದಾಖಲಿಸಿರುವ ಹಿನ್ನೆಲೆಯಲ್ಲಿ ಮತ್ತೆ ಗೆಲುವ ಕಾಣುವ ಲೆಕ್ಕಾಚಾರದಲ್ಲಿದ್ದಾರೆ ಗೂಳಿಹಟ್ಟಿ ಶೇಖರ್.

ಯಾರ ಪರ ಮತದಾರರ ಒಲವು ? ಏನ್‌ ಹೇಳುತ್ತೆ ಚುನಾವಣಾ ಸಮೀಕ್ಷೆ

ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ( Hosadurga Constituency) ಮೇಲ್ನೋಟಕ್ಕೆ ಬಿಜೆಪಿ, ಕಾಂಗ್ರೆಸ್‌ ಹಾಗೂ ಪಕ್ಷೇತರ ಅಭ್ಯರ್ಥಿ ಗೂಳಿಹಟ್ಟಿ ಡಿ.ಶೇಖರ್‌ ಅವರ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಂತೆ ಕಾಣುತ್ತಿದೆ. ಆದರೆ ಕ್ಷೇತ್ರದಲ್ಲಿ ನಡೆಸಿರುವ ಹಲವು ಸಮೀಕ್ಷೆಗಳನ್ನು ನೋಡಿದ್ರೆ ಕ್ಷೇತ್ರದಲ್ಲಿ ಗೂಳಿಹಟ್ಟಿ ಡಿ.ಶೇಖರ್‌ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಬಿ.ಜಿ.ಗೋವಿಂದಪ್ಪ ಅವರ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ‌ ಹಲವು ಸಮೀಕ್ಷೆಗಳಲ್ಲಿಯೂ ಈ ಬಾರಿ ಗೂಳಿಹಟ್ಟಿ ಡಿ.ಶೇಖರ್‌ ಅವರ ಪರ ಒಲವು ವ್ಯಕ್ತವಾಗಿದೆ. ಇನ್ನು ನ್ಯೂಸ್‌ ನೆಕ್ಸ್ಟ್‌ ನಡೆಸಿದ ಸಮೀಕ್ಷೆಯಲ್ಲಿಯೂ ಗೂಳಿಹಟ್ಟಿ ಡಿ.ಶೇಖರ್‌ ಅವರೇ ಮತ್ತೆ ಶಾಸಕರಾಗ್ತಾರೆ ಅನ್ನೋ ಅಭಿಪ್ರಾಯ ವ್ಯಕ್ತವಾಗಿದೆ. ಹೊಸದುರ್ಗ ನಗರ ಪ್ರದೇಶಗಳಲ್ಲಿನ ಜನರು ಕಾಂಗ್ರೆಸ್‌ ಪರ ಒಲವು ವ್ಯಕ್ತಪಡಿಸಿದ್ರೆ ಹಳ್ಳಿಗಳಲ್ಲಿ ಗೂಳಿಹಟ್ಟಿ ಡಿ.ಶೇಖರ್‌ ಅವರ ಪರ ಒಲವು ವ್ಯಕ್ತವಾಗಿದೆ. . ಹೊಸದುರ್ಗ ಕ್ಷೇತ್ರದ ಹಿಂದಿನ ಚುನಾವಣೆಯನ್ನು ಅವಲೋಕಿಸಿದ್ರೆ ಪಕ್ಷೇತರ ಅಭ್ಯರ್ಥಿ ಗೂಳಿಹಟ್ಟಿ ಡಿ.ಶೇಖರ್‌ ಅವರಿಗೆ ಜನ ಬೆಂಬಲ ವ್ಯಕ್ತವಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಕಳೆದ ಚುನಾವಣಾ ಲೆಕ್ಕಾಚಾರ :

2008 ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು ಶಾಸಕರಾಗಿ ಆಯ್ಕೆಯಾಗಿದ್ದ ಗೂಳಿಹಟ್ಟಿ ಶೇಖರ್‌ ಸಚಿವರಾಗಿ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ಕಾರಣರಾಗಿದ್ದರು. ಆದರೆ ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿ ಗೆಲುವು ಕಂಡಿದ್ದರು. ಗೂಳಿಹಟ್ಟಿ ಡಿ.ಶೇಖರ್‌ ಅವರು 90,562 ಮತಗಳನ್ನು ಪಡೆದುಕೊಂಡಿದ್ರೆ, ಬಿ.ಜಿ.ಗೋವಿಂದಪ್ಪ 64,570 ಮತಗಳನ್ನು ಪಡೆದುಕೊಂಡಿದ್ದಾರೆ. ಇನ್ನು ಜೆಡಿಎಸ್‌ ಅಭ್ಯರ್ಥಿ ಶಶಿಕುಮಾರ್‌ ಕೇವಲ 1,575 ರಷ್ಟು ಮತಗಳನ್ನು ಪಡೆಯುವ ಮೂಲಕ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಹೊಸದುರ್ಗದ ಮತದಾರರು ಗೂಳಿಹಟ್ಟಿ ಶೇಖರ್‌ ಅವರ ಬಗ್ಗೆ ಹೇಳಿದ್ದೇನು ಗೊತ್ತಾ ? ಕೆಳಗಿನ ವಿಡಿಯೋ ನೋಡಿ

ಇದನ್ನೂ ಓದಿ : Rainfall in Karnataka : ರಾಜ್ಯದಲ್ಲಿ ಮುಂದಿನ 3 ದಿನ ಭಾರೀ ಮಳೆಯಾಗುವ ಸಾಧ್ಯತೆ

ಇದನ್ನೂ ಓದಿ : Aishwarya : ತಂದೆಗಾಗಿ ಮತಕೇಳದೇ ರಾಜ್ಯಕ್ಕಾಗಿ ಮತದಾನ ಮಾಡಿ ಎಂದ ಡಿ.ಕೆ.ಶಿವಕುಮಾರ್ ಪುತ್ರಿ‌ ಐಶ್ವರ್ಯಾ ವಿಡಿಯೋ ವೈರಲ್

Comments are closed.