BY Vijayendra : ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಅಲಂಕರಿಸುತ್ತಾರಾ ಬಿ.ವೈ.ವಿಜಯೇಂದ್ರ : ಹೈಕಮಾಂಡ್‌ ಲೆಕ್ಕಾಚಾರವೇನು ?

ಬೆಂಗಳೂರು : BY Vijayendra: ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಯ ಬಗ್ಗೆ ಚರ್ಚೆ ಜೋರಾಗಿಯೇ ನಡೆಯುತ್ತಿದೆ. ಹಾಲಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲು ಈಗಾಗಲೇ ರಾಜೀನಾಮೆ ಘೋಷಿಸಿ, ನಂತರ ಯೂಟರ್ನ್‌ ಹೊಡೆದಿದ್ದಾರೆ. ರಾಜ್ಯಾಧ್ಯಕ್ಷನಾಗಿ ಮುಂದುವರಿಯುತ್ತೇನೆ ಅಂತಾನೂ ಕಟೀಲು ಘೋಷಿಸಿದ್ದಾರೆ. ವಿಧಾನಸಭಾ ಚುನಾವಣೆಯನ್ನು ಹೀನಾಯವಾಗಿ ಸೋತಿರುವ ಬಿಜೆಪಿಗೆ ಮುಂಬರುವ ಲೋಕಸಭಾ ಚುನಾವಣೆಯನ್ನು ಗೆಲ್ಲಲು ಸಮರ್ಥ ನಾಯಕನ ಅಗತ್ಯವಿದೆ. ಈ ನಡುವಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಬಿ.ವೈ.ವಿಜಯೇಂದ್ರ ಪಾಲಾಗುತ್ತಾ ಅನ್ನೋ ಚರ್ಚೆಯೂ ಶುರುವಾಗಿದೆ.

ಬಿ.ಎಸ್.ಯಡಿಯೂರಪ್ಪ ದಕ್ಷಿಣ ಭಾರತದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ತರಲು ಪ್ರಮುಖ ಕಾರಣರು. ಕರ್ನಾಟಕ ರಾಜ್ಯದಾದ್ಯಂತ ಸಂಚರಿಸಿ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಅಲ್ಲದೇ ನಾಲ್ಕು ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗುವ ಮೂಲಕ ಹೊಸ ದಾಖಲೆಯನ್ನು ಬರೆದಿದ್ದಾರೆ. ಆದರೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗಲೇ ಅವರನ್ನು ಬಿಜೆಪಿ ಹೈಕಮಾಂಡ್‌ ಬಲವಂತವಾಗಿ ಕೆಳಗಿಳಿಸಿತ್ತು. ಈ ಹೊತ್ತಲೇ ಯಡಿಯೂರಪ್ಪ ಕಣ್ಣೀರಿಟ್ಟಿದ್ದರು. ಇದರಿಂದಾಗಿಯೇ ಬಿಜೆಪಿ ಕರ್ನಾಟಕದಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸಂಪೂರ್ಣವಾಗಿ ನೆಲಕಚ್ಚಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಬಿ.ಎಸ್.ಯಡಿಯೂರಪ್ಪ ಅವರನ್ನು ಬಿಜೆಪಿ ನಡೆಸಿಕೊಂಡ ರೀತಿಯಿಂದಲೇ ಬೇಸತ್ತು ಲಿಂಗಾಯಿತ ಸಮುದಾಯ ಚುನಾವಣೆಯಲ್ಲಿ ತಕ್ಕಪಾಠ ಕಲಿಸಿದೆ ಎನ್ನಲಾಗುತ್ತಿದೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ವಿಧಾನಸಭಾ ಚುನಾವಣಾ ಸೋಲಿನ ಬೆನ್ನಲ್ಲೇ ರಾಜ್ಯಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡುವುದಾಗಿಯೂ ಘೋಷಿಸಿದ್ದರು. ಉಳಿದ ಕೆಲವೇ ತಿಂಗಳುಗಳಲ್ಲಿ ಎದುರಾಗಲಿರುವ ಲೋಕಸಭಾ ಚುನಾವಣೆಗಾಗಿ ಪಕ್ಷ ಸಂಘಟನೆ ಮಾಡಲೇ ಬೇಕಾದ ಸಂದಿಗ್ದ ಪರಿಸ್ಥಿತಿಯಲ್ಲಿದೆ ಬಿಜೆಪಿ. ಚುನಾವಣೆಯ ಫಲಿತಾಂಶ ಹೊರಬಿದ್ದು ಒಂದೂವರೆ ತಿಂಗಳು ಕಳೆದಿದ್ರೂ ಕೂಡ ಪ್ರತಿಪಕ್ಷ ನಾಯಕನ ಆಯ್ಕೆ ಮಾಡುವುದಕ್ಕೂ ಬಿಜೆಪಿಯಿಂದ ಸಾಧ್ಯವಾಗಿಲ್ಲ. ಈ ಬಾರಿಯ ವಿಧಾನಸಭಾ ಚುನಾವಣೆಯ ಸೋಲು ಬಿಜೆಪಿ ಹೈಕಮಾಂಡ್‌ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದೆ. ಹೀಗಾಗಿಯೇ ಮತ್ತೆ ಯಡಿಯೂರಪ್ಪ ಅವರ ಮಂತ್ರ ಪಠಿಸೋದಕ್ಕೆ ಬಿಜೆಪಿ ಮುಂದಾದಂತೆ ಕಂಡುಬರುತ್ತಿದೆ.

ಈಗಾಗಲೇ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕಾದ್ರೆ ತನಗೆ ಅಧಿಕಾರ ನೀಡುವಂತೆ ಹೈಕಮಾಂಡ್‌ಗೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ಬಿ.ಎಸ್.ಯಡಿಯೂರಪ್ಪ ಅವರು ಸೂಚಿಸಿದ ವ್ಯಕ್ತಿಗೆ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಹಾಗೂ ಪ್ರತಿಪಕ್ಷ ನಾಯಕನ ಸ್ಥಾನವನ್ನು ನೀಡಿದ್ರೆ ಮತ್ತೆ ರಾಜ್ಯದಲ್ಲಿ ಬಿಜೆಪಿಯನ್ನು ಸಂಘಟಿಸುವುದಾಗಿಯೂ ತಿಳಿಸಿದ್ದಾಂತೆ.ಒಂದೊಮ್ಮೆ ನಳೀನ್‌ ಕುಮಾರ್‌ ಕಟೀಲು ರಾಜೀನಾಮೆಯನ್ನು ನೀಡಿದ್ರೆ ಮುಂದಿನ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಯಾರಿಗೆ ನೀಡಬೇಕು ಅನ್ನೋ ಕುರಿತು ಬಿಜೆಪಿ ವಲಯದಲ್ಲಿ ಸಾಕಷ್ಟು ಲೆಕ್ಕಾಚಾರ ನಡೆಯುತ್ತಿದೆ.

ಬಸನಗೌಡ ಪಾಟೀಲ್‌ ಯತ್ನಾಳ್‌, ಸಿ.ಟಿ.ರವಿ, ಆರ್.‌ ಅಶೋಕ್‌, ಬಸವರಾಜ್‌ ಬೊಮ್ಮಾಯಿ, ಪ್ರಹ್ಲಾದ್‌ ಜೋಷಿ, ಶೋಭಾ ಕರಂದ್ಲಾಜೆ, ಬಿ.ವೈ. ವಿಜಯೇಂದ್ರ ಅವರ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ. ಈಗಾಗಲೇ ಬಿಜೆಪಿ ಉಪಾಧ್ಯಕ್ಷರಾಗಿರುವ ಬಿ.ವೈ.ವಿಜಯೇಂದ್ರ ಅವರನ್ನೇ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿಸಬೇಕೆಂಬ ಕೂಗು ಬಿಜೆಪಿ ವಲಯದಲ್ಲಿಯೇ ಕೇಳಿಬರುತ್ತಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸಿಟಿ ರವಿ, ಪ್ರಹ್ಲಾದ್‌ ಜೋಷಿ, ಶೋಭಾ ಕರಂದ್ಲಾಜೆ ಸ್ಪರ್ಧೆ ಮಾಡಲಿದ್ದಾರೆ. ಅಲ್ಲದೇ ಯತ್ನಾಳ್‌, ಬೊಮ್ಮಾಯಿ ಹಾಗೂ ಆರ್.ಅಶೋಕ್‌ ಅವರ ಪೈಕಿ ಒಬ್ಬರಿಗೆ ಪ್ರತಿಪಕ್ಷ ನಾಯಕನ ಸ್ಥಾನ ಲಭಿಸುವ ಸಾಧ್ಯತೆಯಿದೆ. ಹೀಗಾಗಿ ರಾಜ್ಯಾಧ್ಯಕ್ಷ ಸ್ಥಾನ ಬಿ.ವೈ.ವಿಜಯೇಂದ್ರ ಅವರ ಪಾಲಾಗುವ ಸಾಧ್ಯತೆಯಿದೆ. ಇನ್ನು ಹೊನ್ನಾಳಿ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಕೂಡ ಬಿ.ಎಸ್.ಯಡಿಯೂರಪ್ಪ ಅವರನ್ನು ಸಿಎಂ ಹುದ್ದೆಯಿಂದ ಕೆಳಗೆ ಇಳಿಸಿರುವುದೇ ಬಿಜೆಪಿ ಸೋಲಿನ ಕಾರಣ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ. ರೇಣುಕಾಚಾರ್ಯ ಮಾತ್ರವಲ್ಲ ಹಲವು ನಾಯಕರು ಕೂಡ ಯಡಿಯೂರಪ್ಪ ಅವರ ನೇತೃತ್ವದ ಬಗ್ಗೆ ಧ್ವನಿಗೂಡಿಸಿದ್ದಾರೆ. ಇದನ್ನೂ ಓದಿ : Nalin Kumar Katelu : ಯೂಟರ್ನ್‌ ಹೊಡೆದ ನಳಿನ್‌ ಕುಮಾರ್‌ ಕಟೀಲು : ರಾಜೀನಾಮೆ ನೀಡಿಲ್ಲ ಎಂದ ಬಿಜೆಪಿ ರಾಜ್ಯಾಧ್ಯಕ್ಷ

ವಯಸ್ಸಿನ ದೃಷ್ಟಿಯಿಂದ ಬಿ.ಎಸ್.ಯಡಿಯೂರಪ್ಪ ಅವರು ಸಕ್ರೀಯ ರಾಜಕಾರಣಕ್ಕೆ ಮರಳುವುದು ಕಷ್ಟ. ಆದರೆ ಯಡಿಯೂರಪ್ಪ ನೇತೃತ್ವವನ್ನು ಬಳಸಿಕೊಂಡು ಪಕ್ಷ ಸಂಘಟನೆ ಮಾಡುವುದು ಸಾಧ್ಯ. ಈಗಾಗಲೇ ಬಿಜೆಪಿ ಉಪಾಧ್ಯಕ್ಷ, ಶಿಕಾರಿಪುರ ಶಾಸಕ ಬಿ.ವೈ.ವಿಜಯೇಂದ್ರ ಅವರು ರಾಜ್ಯದಲ್ಲಿ ನಡೆದಿದ್ದ ಹಲವು ಉಪಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಕಾರಣರಾಗಿದ್ದರು. ರಾಜ್ಯದಾದ್ಯಂತ ಉತ್ತಮ ವರ್ಚಸ್ಸು ಹೊಂದಿರುವ ವಿಜಯೇಂದ್ರ ಅವರಿಗೆ ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಿಗುತ್ತಿದ್ದ ಗೌರವ ಧಕ್ಕುತ್ತಿದೆ. ಇನ್ನೊಂದೆಡೆಯಲ್ಲಿ ಲಿಂಗಾಯಿತ ಸಮುದಾಯದ ಪ್ರಭಾವಿ ಯುವ ಮುಖಂಡರಾಗಿಯೂ ಹೊರಹೊಮ್ಮುತ್ತಿದ್ದಾರೆ. ಹೀಗಾಗಿ ವಿಜಯೇಂದ್ರ ಅವರನ್ನೇ ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ರೆ ಲಿಂಗಾಯಿತ ಸಮುದಾಯಕ್ಕೆ ಪಕ್ಷದ ಮೇಲಿನ ಮುನಿಸು ಕಡಿಮೆಯಾಗಬಹುದು. ಅಲ್ಲದೇ ಹಲವು ನಾಯಕರು ಮತ್ತೆ ಬಿಜೆಪಿ ಸೇರುವ ಸಾಧ್ಯತೆಯೂ ಇದೆ ಅನ್ನೋ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ. ಇದನ್ನೂ ಓದಿ : Lokayukta Raid : ಕರ್ನಾಟಕದಲ್ಲಿ ಬೆಳ್ಳಂಬೆಳಗ್ಗೆಯೇ ಲೋಕಾಯುಕ್ತ ದಾಳಿ

ಇನ್ನು ಬಿಜೆಪಿ ಹೈಕಮಾಂಡ್‌ ಕೂಡ ಸಾಕಷ್ಟು ರಾಜಕೀಯ ತಂತ್ರಗಾರಿಕೆಯನ್ನು ಹೆಣೆಯುತ್ತಿದೆ. ಪ್ರಮುಖವಾಗಿ ರಾಜ್ಯದಲ್ಲಿನ ಎಲ್ಲಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲುವು ಸಾಧಿಸುವ ಸಲುವಾಗಿ ಜೆಡಿಎಸ್‌ ಜೊತೆಗೆ ಒಪ್ಪಂದವನ್ನೂ ಮಾಡಿಕೊಂಡಿದೆ ಎನ್ನಲಾಗುತ್ತಿದೆ. ಒಂದೊಮ್ಮೆ ಜೆಡಿಎಸ್‌ ಬಿಜೆಪಿಗೆ ಬೆಂಬಲ ನೀಡಿದ್ರೆ, ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಒಕ್ಕಲಿಗ ಸಮುದಾಯದ ಮತಗಳನ್ನು ಸೆಳೆಯಲು ಸಾಧ್ಯವಾಗುತ್ತದೆ. ಈಗಾಗಲೇ ಆರ್‌.ಅಶೋಕ್‌, ಸಿ.ಟಿ.ರವಿ, ಶೋಭಾ ಕರಂದ್ಲಾಜೆ ಅವರಂತಹ ನಾಯಕರು ಇರುವುದರಿಂದ ಸಹಜವಾಗಿಯೇ ಒಕ್ಕಲಿಗೆ ಸಮುದಾಯ ಬಿಜೆಪಿ ಪರ ನಿಲ್ಲಲಿದೆ. ಆದರೆ ಲಿಂಗಾಯಿತ ಸಮುದಾಯದ ಕೋಪವನ್ನು ಶಮನ ಮಾಡಲು ಲಿಂಗಾಯಿತ ಸಮುದಾಯದ ನಾಯಕನಿಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟಬೇಕಾಗಿದೆ. ಬಸನಗೌಡ ಪಾಟೀಲ ಯತ್ನಾಳ್‌ ಹೆಸರು ಕೇಳಿಬರುತ್ತಿದೆಯಾದರೂ ಕೂಡ, ಯತ್ನಾಳ್‌ ಬಿ.ಎಸ್.ಯಡಿಯೂರಪ್ಪ ವಿರುದ್ದ ಬಹಿರಂಗ ಹೇಳಿಕೆಗಳನ್ನೇ ನೀಡುವ ಮೂಲಕ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ. ಹೀಗಾಗಿ ಯತ್ನಾಳ್‌ಗೆ ರಾಜ್ಯಾಧ್ಯಕ್ಷ ಹುದ್ದೆ ನೀಡಿದ್ರೆ ಯಡಿಯೂರಪ್ಪ ಮುನಿಸಿಕೊಳ್ಳುವ ಸಾಧ್ಯತೆಯೂ ಇದೆ. ಒಂದೊಮ್ಮೆ ವಿಜಯೇಂದ್ರ ಅವರಿಗೆ ಪಟ್ಟಕಟ್ಟಿದ್ರೆ ಯಡಿಯೂರಪ್ಪ ಅವರ ಪುತ್ರ ಅನ್ನೋ ಲಾಭ ಬಿಜೆಪಿಗೆ ಸಿಗೋ ಸಾಧ್ಯತೆಯಿದೆ. ಈ ಕಾರಣದಿಂದಲೇ ಬಿ.ವೈ.ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಹುದ್ದೆ ನೀಡಿದ್ರೆ ಪಕ್ಷಕ್ಕೆ ಆಗುವ ಲಾಭ, ನಷ್ಟದ ಕುರಿತು ಲೆಕ್ಕಾಚಾರ ನಡೆಯುತ್ತಿದೆ.

Comments are closed.