ಸಾಕಷ್ಟು ರಾಜಕೀಯ ಪ್ರಹಸನಗಳ ಬಳಿಕ ಬಿಎಸ್ಪಿಯ ಉಚ್ಛಾಟಿತ ಶಾಸಕ ಎನ್.ಮಹೇಶ್ ಕಮಲ ಪಾಳಯ ಸೇರಲು ಮನಸ್ಸು ಮಾಡಿದ್ದಾರೆ. ಅಗಸ್ಟ್ 5 ರಂದು ಬಿಎಸ್ಪಿಯ ಮಾಜಿ ನಾಯಕ ಹಾಗೂ ಹಾಲಿ ಪಕ್ಷೇತರ ಶಾಸಕ ಎನ್.ಮಹೇಶ್ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ.

ತಮ್ಮ ಬೆಂಬಲಿಗರೊಂದಿಗೆ ಅಗಸ್ಟ್ 5 ರಂದು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆಯಲಿರುವ ಸರಳ ಸಮಾರಂಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರಲಿದ್ದಾರೆ.

ಈಗಾಗಲೇ ಮಾಜಿ ಸಿಎಂ ಬಿಎಸ್ವೈರನ್ನು ಭೇಟಿ ಮಾಡಿರುವ ಮಹೇಶ್, ಸೇರ್ಪಡೆ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಮಾತ್ರವಲ್ಲ ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲದ ಶಾಸಕ ಎನ್.ಮಹೇಶ್ ತಮ್ಮ ಬಿಜೆಪಿ ಸೇರ್ಪಡೆಗೆ ವಿರೋಧಿಸಿರುವ ಸ್ಥಳೀಯ ಬಿಜೆಪಿ ನಾಯಕರ ಮನವೊಲಿಕೆ ಪ್ರಯತ್ನದಲ್ಲೂ ನಿರತರಾಗಿದ್ದಾರೆ.

ಕಳೆದ ಚುನಾವಣೆಯಲ್ಲಿ ಬಿಎಸ್ಪಿಯಿಂದ ಕೊಳ್ಳೆಗಾಲ ಕ್ಷೇತ್ರದಲ್ಲಿ ಸ್ಪರ್ಧಿಸಿದ ಎನ್.ಮಹೇಶ್ ವಿರುದ್ಧ ಬಿಜೆಪಿಯ ಮಾಜಿ ಶಾಸಕ ಜಿ.ಎನ್.ನಂಜುಡಸ್ವಾಮಿ ಸ್ಪರ್ಧಿಸಿ ಸೋತಿದ್ದರು. ಹೀಗಾಗಿ ಎನ್.ಮಹೇಶ್ ಬಿಜೆಪಿ ಸೇರ್ಪಡೆಗೆ ಜಿ.ಎನ್.ನಂಜುಡಸ್ವಾಮಿ ತೀವ್ರ ವಿರೋಧವಿದೆ. ಈ ಹಿನ್ನೆಲೆಯಲ್ಲಿ ನಂಜುಂಡಸ್ವಾಮಿ ನಿವಾಸಕ್ಕೂ ಭೇಟಿ ನೀಡಿರುವ ಎನ್.ಮಹೇಶ್ ಅವರ ಮನವೊಲಿಸುವ ಸರ್ಕಸ್ ಕೂಡ ನಡೆಸಿದ್ದಾರಂತೆ.