ಬೆಂಗಳೂರು : ರಾಜ್ಯ ಸಚಿವ ಸಂಪುಟ ರಚನೆಯ ಕಸರತ್ತು ಮುಂದುವರಿದಿದೆ. ಇದೀಗ ಸಂಪುಟ ರಚನೆಗೆ 60 :20:20 ಫಾರ್ಮುಲಾ ಸಿದ್ದಗೊಂಡಿದ್ದು, ಯಾರೆಲ್ಲಾ ಸಂಪುಟ ಸೇರ್ತಾರೆ ಅನ್ನೋ ಕುತೂಹಲ ಹುಟ್ಟುಹಾಕಿದೆ.
ಸಂಪುಟ ರಚನೆಯಲ್ಲಿ ಹೈಕಮಾಂಡ್ ಶೇಕಡಾ 60ರಷ್ಟು ಸ್ಥಾನಗಳನ್ನು ಉಳಿಸಿಕೊಂಡ್ರೆ ಶೇಕಡಾ 20ರಷ್ಟು ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಶೇಕಡಾ 20ರಷ್ಟು ಸ್ಥಾನಗಳು ಮಾಜಿ ಸಿಎಂ ಯಡಿಯೂರಪ್ಪ ಬೆಂಬಲಿಗರಿಗೆ ಸ್ಥಾನ ಲಭಿಸುವ ಸಾಧ್ಯತೆಯಿದೆ. ಬಹುತೇಕ ಈ ಬಾರಿ ಯಡಿಯೂರಪ್ಪ ಹಾಗೂ ಬಸವರಾಜ್ ಬೊಮ್ಮಾಯಿ ಕೋಟಾದಡಿಯಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯ, ಎಂ.ಪಿ. ಕುಮಾರಸ್ವಾಮಿ, ಬಸವರಾಜ ದಡೇಸಗೂರು, ಆರಗ ಜ್ಞಾನೇಂದ್ರ, ತಿಪ್ಪಾರೆಡ್ಡಿ, ಸುಭಾಷ್ ಗುತ್ತೇದಾರ್, ಮಾಡಾಳ್ ವಿರೂಪಾಕ್ಷಪ್ಪಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಯಿದೆ.
ಇನ್ನು ಹೈಕಮಾಂಡ್ ಹಾಗೂ ಆರ್‌ಎಸ್‌ಎಸ್ ಕೋಟಾದಡಿಯಲ್ಲಿ ಕಾರ್ಕಳ ಶಾಸಕ ಸುನಿಲ್ ಕುಮಾರ್, ದತ್ತಾತ್ರೇಯ ಪಾಟೀಲ್ ರೇವೂರ, ಆರ್.ರಾಮದಾಸ್, ಶಾಸಕ ಬಿ.ಸಿ.ನಾಗೇಶ, ಅಭಯ್ ಪಾಟೀಲ್, ಸಿದ್ದು ಸವದಿ, ವೀರಣ್ಣ ಚರಂತಿ ಮಠ, ಹಾಲಪ್ಪ ಆಚಾರ್ ಹೆಸರು ಕೇಳಿಬರುತ್ತಿದೆ. ಅಲ್ಲದೇ ಹಳೆಯ ಸಂಪುಟದಲ್ಲಿದ್ದ ಹಲವರು ಸ್ಥಾನ ಕಳೆದುಕೊಳ್ಳುವುದು ಬಹುತೇಕ ಖಚಿತ.
ಆರ್‌ಎಸ್‌ಎಸ್ ಈಗಾಗಲೇ ಹಾಲಿ ಸಚಿವರಲ್ಲಿ ಹಲವರಿಗೆ ಕೋಕ್ ನೀಡುವ ಕುರಿತು ಸೂಚನೆ ನೀಡಿದೆ. ಇನ್ನು ಕಾರ್ಕಳ ಸುನಿಲ್ ಕುಮಾರ್, ದತ್ತಾತ್ರೇಯ ಪಾಟೀಲ್ ರೇವೂರ, ಅಶ್ಚಥ್ ನಾರಾಯಣ, ಆರ್.ಅಶೋಕ್ ಅವರ ಹೆಸರನ್ನು ಸಚಿವ ಸ್ಥಾನಕ್ಕೆ ಪರಿಗಣಿಸುವಂತೆ ಆರ್‌ಎಸ್‌ಎಸ್ ಸೂಚನೆಯನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಈ ಹೆಸರನ್ನು ಪರಿಗಣಿಸುವುದು ಬಹುತೇಕ ಖಚಿತ.