ಮಂಗಳೂರು / ಉಡುಪಿ : ರಾಜ್ಯದಲ್ಲಿ ಸಚಿವ ಸಂಪುಟ ರಚನೆಯ ಕಸರತ್ತು ನಡೆಯುತ್ತಿದೆ. ಕರಾವಳಿ ಭಾಗದಲ್ಲಿಯೂ ಸಚಿವ ಸ್ಥಾನಕ್ಕೆ ಲಾಭಿ ನಡೆಯುತ್ತಿದ್ದು ಕೋಟ ಶ್ರೀನಿವಾಸ ಪೂಜಾರಿ ಮತ್ತು ಎಸ್.ಅಂಗಾರಗೆ ಕೋಕ್ ನೀಡುವುದು ಬಹುತೇಕ ಖಚಿತವಾಗಿದೆ. ಅಲ್ಲದೇ ಕಾರ್ಕಳ ಶಾಸಕ ಸುನಿಲ್ ಕುಮಾರ್ ಹಾಗೂ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಸಂಪುಟ ಸೇರುವ ಸಾಧ್ಯತೆಯಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜೀನಾಮೆಯ ಬೆನ್ನಲ್ಲೇ ಬಸವರಾಜ್ ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ ಎದುರಾಗುವ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯನ್ನು ಮಾಡಲಾಗಿದೆ. ಅಲ್ಲದೇ ಹಿರಿಯ ಸಚಿವರಿಗೆ ಈ ಬಾರಿ ಸಂಪುಟದಲ್ಲಿ ಕೋಕ್ ನೀಡುವ ಸಾಧ್ಯತೆಯಿದೆ. ಅದ್ರಲ್ಲೂ ಕರಾವಳಿ ಭಾಗದಲ್ಲಿ ಸಚಿವರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಮೀನುಗಾರಿಕಾ ಸಚಿವರಾಗಿದ್ದ ಎಸ್. ಅಂಗಾರ ಅವರಿಗೆ ಸಚಿವ ಸ್ಥಾನ ಕೈತಪ್ಪುವ ಸಾಧ್ಯತೆಯಿದೆ.
ಬಿಲ್ಲವ ಕೋಟಾದಡಿಯಲ್ಲಿ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮತ್ತೆ ಸಚಿವ ಸ್ಥಾನ ನೀಡುವ ಕುರಿತು ಜಿಲ್ಲೆಯ ಸಚಿವರಿ ಗೆ ಅಸಮಾಧಾನವಿದೆ. ಅಲ್ಲದೇ ಮುಂದಿನ ನಾಯಕತ್ವದ ಹಿನ್ನೆಲೆಯಲ್ಲಿ ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆಯೂ ಇದೆ. ಈಗಾಗಲೇ ಆರ್‌ಎಸ್‌ಎಸ್ ನಾಯಕರು ಖುದ್ದು ಬಿ.ಎಸ್.ಯಡಿಯೂರಪ್ಪ ಅವರು ಸುನಿಲ್ ಕುಮಾರ್ ಅವರ ಹೆಸರನ್ನು ಸಚಿವ ಸ್ಥಾನಕ್ಕೆ ಸೂಚನೆಯನ್ನು ನೀಡಿದ್ದಾರೆ. ಬಿಲ್ಲವ ಕೋಟಾ ಹಾಗೂ ಉಡುಪಿ ಜಿಲ್ಲೆಯ ಪೈಕಿ ಸುನಿಲ್ ಕುಮಾರ್ ಸಚಿವರಾಗೋದು ಖಚಿತ.
ಇನ್ನು ದಕ್ಷಿಣ ಕನ್ನಡ ಜಿಲ್ಲಾ ಕೋಟಾದಡಿಯಲ್ಲಿ ಈಗಾಗಲೇ ಎಸ್.ಅಂಗಾರ ಸಚಿವರಾಗಿದ್ದಾರೆ. ಆದರೆ ಯುವಕರಿಗೆ ಆಧ್ಯತೆಯನ್ನು ನೀಡುವ ನಿಟ್ಟಿನಲ್ಲಿ ಈ ಬಾರಿಯ ಸಂಪುದಲ್ಲಿ ಭರತ್ ಶೆಟ್ಟಿ ಅವರಿಗೆ ಹೈಕಮಾಂಡ್ ಮಣೆ ಹಾಕುವ ಸಾಧ್ಯತೆಯೂ ಇದೆ. ಬಂಟ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುವ ನಿಟ್ಟಿನಲ್ಲಿಯೂ ಭರತ್ ಶೆಟ್ಟಿ ಆಯ್ಕೆಯ ಸಾಧ್ಯತೆಯಿದೆ. ಒಂದೊಮ್ಮೆ ಅಂಗಾರಗೆ ಸಚಿವ ಸ್ಥಾನ ನೀಡಿದ್ರೆ, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಬಂಟ ಕೋಟಾದಡಿಯಲ್ಲಿ ಸಚಿವ ಸ್ಥಾನ ಲಭಿಸುವ ಸಾಧ್ಯತೆಯಿದೆ.
ಒಟ್ಟಿನಲ್ಲಿ ರಾಜ್ಯದ ಸಚಿವ ಸಂಪುಟ ಕಸರತ್ತು ಈ ಬಾರಿ ಕರಾವಳಿ ಭಾಗದಲ್ಲಿಯೂ ತೀವ್ರ ಕುತೂಹಲವನ್ನು ಮೂಡಿಸಿದೆ. ಈ ಬಾರಿ ಹೊಸ ಮುಖಗಳಿಗೆ ಬಿಜೆಪಿ ಮಣೆ ಹಾಕುವ ಸಾಧ್ಯತೆ ಹಿನ್ನೆಲೆಯಲ್ಲಿ ಸುನಿಲ್ ಕುಮಾರ್, ಭರತ್ ಶೆಟ್ಟಿ ಹಾಗೂ ಹಾಲಾಡಿ ಶ್ರೀನಿವಾಸ ಶೆಟ್ಟಿ ಬೆಂಬಲಿಗರು ನಿರೀಕ್ಷೆಯಲ್ಲಿದ್ದಾರೆ.