ಕಾಪುಗೆ ಗುರ್ಮೆ, ಉಡುಪಿಗೆ ಪ್ರಮೋದ್‌, ಬೈಂದೂರಿಗೆ ಕೊಡ್ಗಿ ಏನಿದು ಬಿಜೆಪಿ ಲೆಕ್ಕಾಚಾರ ?

ಉಡುಪಿ : Udupi BJP candidates :ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ದಪಡಿಸುತ್ತಿವೆ. ಅದ್ರಲ್ಲೂ ಕರಾವಳಿ ಜಿಲ್ಲೆಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ಗೆಲುವಿಗಾಗಿ ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಈ ನಡುವಲ್ಲೇ ಬಿಜೆಪಿ ಪಕ್ಷ ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಿಗೆ ಪಕ್ಷದ ಅಭ್ಯರ್ಥಿ ಗಳನ್ನು ಬಹುತೇಕ ಖಚಿತ ಪಡಿಸಿದಂತಿದೆ. ಇಬ್ಬರು ಹಾಲಿ ಶಾಸಕರಿಗೆ ಮಾತ್ರವೇ ಟಿಕೆಟ್‌ ಕೊಟ್ಟು, ಉಳಿದ ಕ್ಷೇತ್ರಗಳಲ್ಲಿ ಹೊಸಬರಿಗೆ ಟಿಕೆಟ್‌ ನೀಡಲು ಫ್ಲ್ಯಾನ್‌ ರೂಪಿಸಿದೆ.

ಉಡುಪಿ ಜಿಲ್ಲೆಯಲ್ಲಿ ಬಂಟ, ಬಿಲ್ಲವ, ಮೊಗವೀರ, ಬ್ರಾಹ್ಮಣ ಸಮುದಾಯದವರಿಗೆ ಟಿಕೆಟ್‌ ನೀಡಲು ಬಿಜೆಪಿ ಈ ಬಾರಿಯೂ ಸಿದ್ದತೆ ನಡೆಸುತ್ತಿದೆ. ಉಡುಪಿ, ಕಾಪು, ಬೈಂದೂರು ಕ್ಷೇತ್ರಗಳಲ್ಲಿ ಹಾಲಿ ಶಾಸಕರಿಗೆ ಟಿಕೆಟ್‌ ಕೈತಪ್ಪುವ ಸಾಧ್ಯತೆಯೂ ಇದೆ. ಉಡುಪಿ ಶಾಸಕ ಕೆ.ರಘುಪತಿ ಭಟ್‌, ಬೈಂದೂರು ಶಾಸಕ ಸುಕುಮಾರ ಶೆಟ್ಟಿ, ಕಾಪು ಶಾಸಕ ಲಾಲಾಜಿ ಆರ್.‌ ಮೆಂಡನ್‌ ಅವರ ಬದಲು ಹೊಸ ಅಭ್ಯರ್ಥಿಗಳನ್ನು ಬಿಜೆಪಿ ಕಣಕ್ಕಿಳಿಸುವ ಸಾಧ್ಯತೆಯಿದೆ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ.

ಒಂದೆಡೆ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರೇ ಈ ಬಾರಿ ತಮ್ಮ ಬದಲು ಕಿರಣ್‌ ಕೊಡ್ಗಿ ಅವರನ್ನು ಕಣಕ್ಕೆ ಇಳಿಸಲಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಜೊತೆಗೆ ಕಿರಣ್‌ ಕೊಡ್ಗಿ ಅವರು ಕೂಡ ಕುಂದಾಪುರ ಕ್ಷೇತ್ರದಿಂದ ಸ್ಪರ್ಧಿಸಲು ಮನಸ್ಸು ಮಾಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಬಿಜೆಪಿಯ ಉನ್ನತ ಮೂಲಗಳ ಪ್ರಕಾರ ಕುಂದಾಪುರ ವಿಧಾನಸಭಾ ಕ್ಷೇತ್ರದಿಂದ ಈ ಬಾರಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರೇ ಕಣಕ್ಕಿಳಿಯುವುದು ಬಹುತೇಕ ಖಚಿತ. ಇದುವರೆಗೂ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಐದು ಬಾರಿ ಕುಂದಾಪುರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅದ್ರಲ್ಲೂ ನಾಲ್ಕು ಬಾರಿ ಬಿಜೆಪಿ ಹಾಗೂ ಒಂದು ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿಯೂ ಗೆಲುವು ಕಂಡಿದ್ದಾರೆ. ಇದೀಗ ಆರನೇ ಬಾರಿಗೆ ಶಾಸಕರಾಗಲು ಹಾಲಾಡಿ ಮನಸ್ಸು ಮಾಡಿದಂತಿದೆ. ಆದರೆ ಐದು ಬಾರಿ ಶಾಸಕರಾದ್ರೂ ಕೂಡ ಸಚಿವ ಸ್ಥಾನ ನೀಡಿಲ್ಲ ಅನ್ನೋ ನೋವು ಖುದ್ದು ಹಾಲಾಡಿ ಅವರಿಗೂ ಇದೆ, ಜೊತೆಗೆ ಕ್ಷೇತ್ರದ ಮತದಾರರಲ್ಲಿಯೂ ಇದೆ.

ಉಡುಪಿ ಜಿಲ್ಲೆಯ ಗಡಿಭಾಗದಲ್ಲಿರುವ ಬೈಂದೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳ ಭದ್ರಕೋಟೆ. ಈ ಕ್ಷೇತ್ರದಿಂದ ಸತತವಾಗಿ ಗೆದ್ದವರು ತೀರಾ ವಿರಳ. ಒಂದು ಬಾರಿ ಕಾಂಗ್ರೆಸ್‌ ಗೆದ್ದರೆ, ಮತ್ತೊಂದು ಬಾರಿ ಬಿಜೆಪಿ ಇಲ್ಲಿ ಗೆಲುವು ಕಂಡಿದೆ. ಸದ್ಯ ಬಿಜೆಪಿ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಅವರು ಕ್ಷೇತ್ರದಲ್ಲಿ ಶಾಸಕರಾಗಿದ್ದಾರೆ. ಹಲವು ಕಾರಣಗಳಿಂದಾಗಿ ಈ ಬಾರಿ ಶಾಸಕ ಸುಕುಮಾರ ಶೆಟ್ಟಿ ಅವರಿಗೆ ಟಿಕೆಟ್‌ ಕೈತಪ್ಪುವ ಸಾಧ್ಯತೆಯಿದೆ ಅನ್ನೋ ಮಾತುಗಳು ಕೇಳಿಬರುತ್ತಿವೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮುನಿಸು ಈ ಬಾರಿ ಸುಕುಮಾರ ಶೆಟ್ಟಿ ಅವರು ಟಿಕೆಟ್‌ ಪಡೆಯಲು ಮುಳುವಾಗುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ. ಸುಕುಮಾರ್‌ ಶೆಟ್ಟಿ ಅವರಿಗೆ ಈ ಬಾರಿ ಟಿಕೆಟ್‌ ಕೈತಪ್ಪಿದ್ರೆ, ಕ್ಷೇತ್ರದ ಮಾಜಿ ಶಾಸಕ, ಬಿಜೆಪಿಯ ಹಿರಿಯ ಮುಖಂಡರಾಗಿದ್ದ ದಿವಂಗತ ಎ.ಜಿ. ಕೊಡ್ಗಿ ಅವರ ಮಗ ಕಿರಣ್‌ ಕೊಡ್ಗಿ ಬೈಂದೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವ ಸಾಧ್ಯತೆಯಿದೆ. 1972ರಲ್ಲಿ ಎ.ಜಿ.ಕೊಡ್ಗಿ ಅವರು ಬೈಂದೂರು ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಇದೀಗ ಮೂರು ದಶಕಗಳ ತರುವಾಯ ಅವರ ಮಗ ಇದೇ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ. ಕ್ಷೇತ್ರದಲ್ಲಿ ಸದ್ಯ ಬಿಜೆಪಿ ಪಕ್ಷದಿಂದ ಹಲವು ಹೆಸರುಗಳು ಕೇಳಿಬರುತ್ತಿದೆಯಾದ್ರೂ ಕಿರಣ್‌ ಕೊಡ್ಗಿ ಅವರ ಹೆಸರೇ ಅಂತಿಮವಾಗುವ ಸಾಧ್ಯತೆಯಿದೆ.

ಇನ್ನು ಉಡುಪಿ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಕೆ.ರಘುಪತಿ ಭಟ್‌ ಅವರಿಗೆ ಈ ಬಾರಿ ಟಿಕೆಟ್‌ ಕೈತಪ್ಪಲಿದೆ ಅನ್ನೋ ಮಾತುಗಳು ಬಲವಾಗಿ ಕೇಳಿಬರುತ್ತಿದೆ. ಇದೇ ಕಾರಣಕ್ಕೆ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ಹಲವರ ಹೆಸರುಗಳು ಮುಂಚೂಣಿಗೆ ಬಂದಿದ್ದು, ಕೆಲವು ಬಿಜೆಪಿ ನಾಯಕರು ಟಿಕೆಟ್‌ ಗಾಗಿ ಹೈಕಮಾಂಡ್‌ ಮಟ್ಟದಲ್ಲಿ ಲಾಭಿ ನಡೆಸುತ್ತಿದ್ದಾರೆ. ಆದರೆ ಬೈಂದೂರು ಕ್ಷೇತ್ರದಲ್ಲಿನ ಟಿಕೆಟ್‌ ಹಂಚಿಕೆಯ ಎಫೆಕ್ಟ್ ಈ ಬಾರಿ ಉಡುಪಿ ಕ್ಷೇತ್ರಕ್ಕೆ ತಟ್ಟುವ ಸಾಧ್ಯತೆಯಿದೆ. ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಬ್ರಾಹ್ಮಣ ಸಮುದಾಯದ ಕಿರಣ್‌ ಕೊಡ್ಗಿ ಅವರಿಗೆ ಟಿಕೆಟ್‌ ನೀಡಿದ್ರೆ ಅದೇ ಸಮುದಾಯದ ರಘುಪತಿ ಭಟ್‌ ಅವರು ಟಿಕೆಟ್‌ ಕಳೆದುಕೊಳ್ಳುವ ಸಾಧ್ಯತೆಯಿದೆ. ಹೀಗಾದ್ರೆ ಉಡುಪಿ ವಿಧಾನಸಭಾ ಕ್ಷೇತ್ರದಿಂದ ಮಾಜಿ ಶಾಸಕ ಪ್ರಮೋದ್‌ ಮಧ್ವರಾಜ್‌ ಅವರು ಕಣಕ್ಕೆ ಇಳಿಯುವುದು ಬಹುತೇಕ ಖಚಿತ. ಪ್ರಮೋದ್‌ ಮಧ್ವರಾಜ್‌ ಅವರು ಈ ಹಿಂದೆ ಕಾಂಗ್ರೆಸ್‌ ಪಕ್ಷದಿಂದ ಇದೇ ಉಡುಪಿ ಕ್ಷೇತ್ರದಿಂದಲೇ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರದಲ್ಲಿ ರಘುಪತಿ ಭಟ್‌ ಎದುರಲ್ಲಿ ಸೋಲು ಕಂಡಿದ್ದಾರೆ. ಕ್ಷೇತ್ರದಲ್ಲಿ ಈಗಾಗಲೇ ಹಿಡಿತ ಹೊಂದಿರುವ ಪ್ರಮೋದ್‌ ಮಧ್ವರಾಜ್ ಅವರನ್ನೇ ಈ ಬಾರಿ ಬಿಜೆಪಿ ಕಣಕ್ಕೆ ಇಳಿಸುವ ಸಾಧ್ಯತೆ ಬಹುತೇಕ ಖಚಿತವಾಗಿದೆ.

ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿನ ಟಿಕೆಟ್‌ ಹಂಚಿಕೆಯ ಎಫೆಕ್ಟ್ ಕಾಫು ಕ್ಷೇತ್ರದ ಮೇಲೆ ಬೀಳುವ ಸಾಧ್ಯತೆಯಿದೆ. ಸದ್ಯ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಮೊಗವೀರ ಸಮುದಾಯ ಲಾಲಾಜಿ ಆರ್.‌ ಮೆಂಡನ್‌ ಶಾಸಕರಾಗಿದ್ದಾರೆ. ಖುದ್ದು ಬಿಜೆಪಿ ಕೆಲ ಮುಖಂಡರೇ ಈ ಬಾರಿ ಲಾಲಾಜಿ ಆರ್.‌ ಮೆಂಡನ್‌ ಅವರಿಗೆ ಟಿಕೆಟ್‌ ನೀಡಲು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇನ್ನೊಂದೆಡೆಯಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದಿಂದ ಮೊಗವೀರ ಸಮುದಾಯದ ಪ್ರಮೋದ್‌ ಮಧ್ವರಾಜ್‌ ಅವರು ಕಣಕ್ಕೆ ಇಳಿದ್ರೆ, ಕಾಪು ಕ್ಷೇತ್ರವನ್ನು ಲಾಲಾಜಿ ಆರ್.‌ ಮೆಂಡನ್‌ ಅವರು ಬಿಟ್ಟುಕೊಡಬೇಕಾಗುತ್ತದೆ. ಕಾಫು ಕ್ಷೇತ್ರದಲ್ಲಿಯೂ ಹಲವು ಆಕಾಂಕ್ಷಿಗಳ ಹೆಸರು ಕೇಳಿಬರುತ್ತಿದೆಯಾದ್ರೂ ಕೂಡ ಕ್ಷೇತ್ರ ಅಂತಿಮವಾಗಿ ಬಂಟ ಸಮುದಾಯದ ಪಾಲಾಗುವ ಸಾಧ್ಯತೆಗಳು ದಟ್ಟವಾಗಿದೆ. ಬೈಂದೂರು ಕ್ಷೇತ್ರದಲ್ಲಿ ಬ್ರಾಹ್ಮಣ ಸಮುದಾಯದವರನ್ನು ಕಣಕ್ಕೆ ಇಳಿಸಿದ್ರೆ ಕಾಪು ಕ್ಷೇತ್ರದಿಂದ ಬಂಟ ಸಮುದಾಯದ ಗುರ್ಮೆ ಸುರೇಶ್‌ ಶೆಟ್ಟಿ ಬಿಜೆಪಿ ಪಕ್ಷದಿಂದ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವುದು ಖಚಿತ.

ಕುಂದಾಪುರ ವಿಧಾನಸಭಾ ಕ್ಷೇತ್ರದಂತೆಯೇ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ, ಸಚಿವ ಸುನಿಲ್‌ ಕುಮಾರ್‌ ಮುಂದಿನ ಚುನಾವಣೆಯಲ್ಲಿಯೂ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಸಚಿವ ಸುನಿಲ್‌ ಕುಮಾರ್‌ ವಿರುದ್ದ ಭ್ರಷ್ಟಾಚಾರದ ಆರೋಪಗಳಿದ್ದರೂ ಕೂಡ ಬಿಜೆಪಿ ಪಕ್ಷದಲ್ಲಿ ಬದಲಿ ಸಮರ್ಥ ಅಭ್ಯರ್ಥಿಗಳು ಇಲ್ಲ. ಇದೇ ಕಾರಣಕ್ಕೆ ಈ ಬಾರಿಯೂ ಸುನಿಲ್‌ ಕುಮಾರ್‌ ಅವರನ್ನೇ ಬಿಜೆಪಿ ಕಣಕ್ಕೆ ಇಳಿಸಲಿದೆ. ಒಟ್ಟಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಗೆಲ್ಲುವ ಕುದುರೆಗಳ ಜೊತೆಗೆ ಜಾತಿ ಲೆಕ್ಕಾಚಾರದ ಆಧಾರದಲ್ಲಿಯೇ ಟಿಕೆಟ್‌ ನೀಡಲು ಮುಂದಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳನ್ನು ಬಂಟ ಸಮುದಾಯಕ್ಕೆ ನೀಡಿದ್ರೆ, ಮೊಗವೀರ, ಬ್ರಾಹ್ಮಣ ಹಾಗೂ ಬಿಲ್ಲವ ಸಮಯದಾಯದ ಅಭ್ಯರ್ಥಿಗಳಿಗೆ ತಲಾ ಒಂದೊಂದು ಕ್ಷೇತ್ರವನ್ನು ನೀಡಿತ್ತು. ಆದರೆ ಈ ಬಾರಿಯೂ ಅಭ್ಯರ್ಥಿಗಳು ಬದಲಾದ್ರೂ ಕೂಡ ಅದೇ ಮಾನದಂಡದ ಅಡಿಯಲ್ಲಿಯೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಬಿಜೆಪಿ ಮಾಸ್ಟರ್‌ ಫ್ಲ್ಯಾನ್‌ ರೂಪಿಸಿದೆ.

ಇದನ್ನೂ ಓದಿ : ಪಕ್ಷೇತರ ಸ್ಪರ್ಧಿಯಾಗಿ ಕಾರ್ಕಳ ಕ್ಷೇತ್ರದಿಂದ ಪ್ರಮೋದ್‌ ಮುತಾಲಿಕ್‌ ಸ್ಪರ್ಧೆ

ಇದನ್ನೂ ಓದಿ : MLA Election 2023 Kodagu : ವಿರಾಜಪೇಟೆಗೆ ಪೊನ್ನಣ್ಣ ಮಡಿಕೇರಿಗೆ ಡಾ. ಮಂತರ್ ಗೌಡ ಫಿಕ್ಸ್ : ಕೊಡಗಿನಲ್ಲಿ ಕಾಂಗ್ರೆಸ್ ನಿಂದ ಹೊಸಮುಖ

Karnataka MLA Election 2023 Udupi district BJP candidates

Comments are closed.