Rohini Sindhuri : 8 ರೂ. ಬೆಲೆಯ ಬಟ್ಟೆ ಬ್ಯಾಗ್ 52 ರೂ.ಗೆ ಖರೀದಿ : ರೋಹಿಣಿ ಸಿಂಧೂರಿ ವಿರುದ್ದ ಸಾ.ರಾ.ಮಹೇಶ್‌ 6 ಕೋಟಿ ಕಿಕ್‌ಬ್ಯಾಕ್‌ ಆರೋಪ

ಮೈಸೂರು : ಕೇವಲ 8 ರೂ. ಬೆಲೆ ಬಾಳುವ ಬಟ್ಟೆಯ ಬ್ಯಾಗ್‌ನ್ನು 52 ರೂಪಾಯಿ ಕೊಟ್ಟು ಖರೀದಿಸುವ ಮೂಲಕ ಈ ಹಿಂದಿನ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಅಕ್ರಮವೆಸಗಿದ್ದಾರೆ ಎಂದು ಶಾಸಕ ಸಾ.ರಾ.ಮಹೇಶ್‌ ಗಂಭೀರ ಆರೋಪ ಮಾಡಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಡಳಿತ ವತಿಯಿಂದ 14,71,458 ಬಟ್ಟೆ ಬ್ಯಾಗ್ ಖರೀದಿ ಮಾಡಲಾಗಿದ್ದು, ಈ ಬ್ಯಾಗ್ ಖರೀದಿಯಲ್ಲಿ 6.18 ಕೋಟಿ ರೂ. ವ್ಯಯಿಸಲಾಗಿದೆ. ಆದರೆ ಮಾರುಕಟ್ಟೆಯಲ್ಲಿ8 ರೂಪಾಯಿಗೆ ದೊರೆಯುತ್ತಿದೆ. ಆದರೆ ಬ್ಯಾಗ್ ಮೇಲೆ ಪ್ರಿಂಟ್ ಹಾಕಲು 42 ರೂ. ಬೇಕಾ ? ವಾಸ್ತವವಾಗಿ ಖರೀದಿಗೆ 1.47 ಕೋಟಿ ರೂ. ಆಗುತ್ತಿತ್ತು ಎನ್ನುವ ಮೂಲಕ ಮಹೇಶ್‌ ಗಂಭೀರ ಆರೋಪ ಮಾಡಿದ್ದಾರೆ.

ದಾಖಲೆ ಸಮೇತ ಆರೋಪ ಮಾಡಿರುವ ಸಾ.ರಾ.ಮಹೇಶ್‌ ಹೆಚ್ಚುವರಿಯಾಗಿ ವ್ಯಯಿಸಿರುವ ಹಣವನ್ನು ರೋಹಿಣಿ ಸಿಂಧೂರಿ ಅವರಿಂದಲೇ ವಸೂಲಿ ಮಾಡಬೇಕು. ಒಂದೊಮ್ಮೆ ಸರಕಾರ ಕ್ರಮಕೈಗೊಳ್ಳದೇ ಇದ್ರೆ, ಮುಖ್ಯ ಕಾರ್ಯದರ್ಶಿಗಳ ಮುಂದೆ ಧರಣಿ ಮಾಡುತ್ತೇವೆ. ಅಷ್ಟೇ ಅಲ್ಲದೇ ನಗರಸಭೆ, ಪುರಸಭೆಗೆಲ್ಲಾ ಇವರೇ ಬ್ಯಾಗ್ ಸರಬರಾಜು ಟೆಂಡರ್‌ಗೆ ಅನುಮೋದನೆ ನೀಡಿದ್ದಾರೆ. ಅಲ್ಲದೇ ನಗರಸಭೆ, ಪುರಸಭೆ ಮೇಲೆ ಇವರಿಗೆ ಅಷ್ಟೊಂದು ಆಸಕ್ತಿ ಯಾಕೆ ಎಂದು ಪ್ರಶ್ನಿಸಿದ್ದಾರೆ.

ಯಾವುದೇ ಸಂದರ್ಭದಲ್ಲಿ, ಯಾವುದೇ ಅಧಿಕಾರಿಗಳ ಬಗ್ಗೆ ರಾಜಕಾರಣಿಗಳು ಮಾತನಾಡುವಾಗ ಸಾರ್ವಜನಿಕವಾಗಿ ಬೇರೆ ರೀತಿ ಮಾತನಾಡುತ್ತಾರೆ. ಇನ್ನೂ ಮಹಿಳಾ ಅಧಿಕಾರಿ ಆದರೆ ದೇವರೇ ಗತಿ. ಆ ಅಧಿಕಾರಿಯ ಹನ್ನೆರಡು ವರ್ಷಗಳ ಸೇವೆಯನ್ನು ನೋಡಿದ್ದೇನೆ. ಸರ್ಕಾರಿ ಕೆಲಸ ಮಾಡುವಲ್ಲಿ ದಕ್ಷತೆ ಇಲ್ಲ. ಅಪ್ರಮಾಣಿಕ ಅಧಿಕಾರಿ ನೇಮಕಕ್ಕೆ ವಿರೋಧ ಮಾಡಿದ್ದೆ. ನಾನು ಎಂಟು ಆರೋಪ ಮಾಡಿದ್ದೆ. ಅದರಲ್ಲಿ ಅವರ ಅಧಿಕಾರಿಗಳೇ ವರದಿ ಕೊಟ್ಟಿದ್ದಾರೆ. ಅವರನ್ನು ಅಮಾನತು ಮಾಡಿ, ಲೋಪ ಆಗಿರುವ ಹಣವನ್ನು ಅವರಿಂದಲೇ ವಸೂಲಿ ಆಗಬೇಕು ಎಂದು ಮುಖ್ಯಮಂತ್ರಿ ಹಾಗೂ ಸರ್ಕಾರದ ಕಾರ್ಯದರ್ಶಿಗಳಿಗೆ ಮನವಿ ಮಾಡಿದ್ದೆ ಎಂದು ತಿಳಿಸಿದರು.

( MLA SA.RA. Mahesh 6 crore kickback Allegation against Mysore DC Rohini Sindhuri )

Comments are closed.