ಬೂಕನಕೆರೆಯಿಂದ ವಿಧಾನಸೌಧದವರೆಗೆ….! ಬಿಎಸ್ವೈ ಪೊಲಿಟಿಕಲ್ ಜರ್ನಿಯ “ಅಚ್ಚ ಬಿಳುಪಿಗೆ ಕಪ್ಪು” ಎರಚಿದನೇ ಪುತ್ರ…?!

ಬೆಂಗಳೂರು: ಶತಾಯ ಗತಾಯ  ಮುಖ್ಯಮಂತ್ರಿಯಾಗುವ ಕನಸೊಂದೇ ಹಗಲು-ರಾತ್ರಿ ತಮ್ಮದಾಗಿಸಿಕೊಂಡು ದುಡಿದ ಬಿಎಸ್ವೈ ಸಿನಿಮೀಯ ರಾಜಕೀಯ ಬದಲಾವಣೆಗಳಲ್ಲಿ 2019 ರ ಜುಲೈನಲ್ಲಿ ಮತ್ತೆ ಸಿಎಂ ಪಟ್ಟಕ್ಕೇರಿದರು. ಆದರೆ ಮತ್ತೊಮ್ಮೆ ದುರಾದೃಷ್ಟದ ನೆರಳು ಪುತ್ರನ ನೆಪದಲ್ಲಿ ಬಿಎಸ್ವೈ ಅಧಿಕಾರ ಅವಧಿಯ ಮೇಲೆ ಬಿದ್ದು,ಕಾಡೀತಾ ಹೌದು ಎನ್ನುತ್ತಿದೆ ಆಪ್ತವಲಯ.

ಎಲ್ಲರಂತೆ ಕುಟುಂಬದ ರಾಜಕಾರಣದ ಆಸೆಗೆ ಬಿದ್ದು ಪುತ್ರರಿಬ್ಬರನ್ನು ರಾಜಕೀಯಕ್ಕೆ ತಂದಿದ್ದೇ 76 ವರ್ಷದ ಸಿಎಂ ಬಿಎಸ್ವೈ ನೋವಿನ ವಿದಾಯಕ್ಕೆ ಕಾರಣವಾಯಿತು. ಹಿರಿಯ ಪುತ್ರ ಬಿ.ವೈ.ರಾಘವೇಂದ್ರ ಸಂಸದನಾಗಿ ತನ್ನ ಸಾಧನೆಯ ಹಾದಿಯಲ್ಲಿ ತಾನು ಸಾಗಿ ಹೋಗಿದ್ದರೇ, ಕಿರಿಯ ಪುತ್ರ ಬಿ.ವೈ.ವಿಜಯೇಂದ್ರ್ ಮಾತ್ರ ಅಧಿಕಾರದ ಆಸೆ, ಹಣದ ದುರಾಸೆಗೆ ಬಿದ್ದು ಬಿಎಸ್ವೈಯವರ ಬೂಕನಕೆರೆಯಿಂದ ವಿಧಾನಸೌಧದವರೆಗಿನ ಅಚ್ಚಬಿಳುಪಿನ ಸಾಧನೆ ಹಾದಿಗೆ ಕಪ್ಪು ಚುಕ್ಕೆಯಾಗಿದ್ದಾರೆ.

ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಬಿ.ವೈ.ವಿಜಯೇಂದ್ರ್ ವಿಧಾನಸೌಧ ಬಿಟ್ಟು ಅಲ್ಲಾಡಲೇ ಇಲ್ಲ. ದಿಢೀರ್ ಬಿಜೆಪಿ ಪಾಳಯದಲ್ಲಿ ಪ್ರತ್ಯಕ್ಷವಾದ ಬಿ.ವೈ.ವಿಜಯೇಂದ್ರ್ ಗೆ ಪಕ್ಷ ಹುದ್ದೆ ನೀಡಿತ್ತು. ಆದರೂ ವಿಜಯೇಂದ್ರ್ ನ ಹಸ್ತಕ್ಷೇಪ, ರಾಜಕೀಯ ಮಹತ್ವಾಕಾಂಕ್ಷೆ ಇಲಾಖೆಗಳ ನಡುವೆ ಹಸ್ತಕ್ಷೇಪದವರೆಗೂ  ವ್ಯಾಪ್ತಿ ವಿಸ್ತರಿಸಿಕೊಂಡಿತು.

ಇದರ ಫಲವಾಗಿ ಗ್ರಾಮೀಣಾಭಿವೃದ್ಧಿಯಿಂದ ಆರಂಭಿಸಿ, ಕೃಷಿಇಲಾಖೆಯವರೆಗೆ  ಕೊನೆಗೆ ಬೆಂಗಳೂರಿನ ಬಿಡಿಎ ಆಯುಕ್ತರ ನೇಮಕದವರೆಗೂ ವಿಜಯೇಂದ್ರ್ ತಮ್ಮ ಕೈಚಾಚುತ್ತಲೇ ಸಾಗಿದರು.

ಬಿಎಸ್ವೈ ಸಚಿವ ಸಂಪುಟದ ಸೇರಿದ, ಸರ್ಕಾರದ ಅಸ್ತಿತ್ವಕ್ಕೆ ಕಾರಣವಾದ ಕೈವಲಸಿಗ ಸಚಿವರ ವರೆಗೂ  ಎಲ್ಲರೂ ಬಿಎಸ್ವೈ ಮೇಲೆ ಅಸಮಧಾನಗೊಂಡರು. ನಿಧಾನಕ್ಕೆ ಈ ಅಸಮಧಾನ, ಪುತ್ರನ ಮೇಲೆ ಹಿಡಿತ ಸಾಧಿಸಲಾಗದೇ ಹೋದ ಬಿಎಸ್ವೈ ವಿರುದ್ಧ ದ್ವೇಷವಾಗಿ ಪರಿವರ್ತನೆಗೊಂಡಿತು.

ಇದರ ಫಲವಾಗಿಯೇ ಸಿಎಂ ಬಿಎಸ್ವೈ ಅಧಿಕಾರದಿಂದ ಇಳಿಯದಿದ್ದರೇ, ಸರ್ಕಾರಕ್ಕೆ ಉಳಿಗಾಲವಿಲ್ಲ. ನಮ್ಮ ನಮ್ಮ ಕ್ಷೇತ್ರಗಳಲ್ಲಿ ನಮಗೆ ಬೆಲೆಯೂ ಇಲ್ಲ ಎಂಬ ಚಿಂತನೆಗೆ ಬಿದ್ದ ಶಾಸಕರು ಒಳಗೊಳಗೆ ಸಿಎಂ ಸ್ಥಾನದಿಂದ ಬಿಎಸ್ವೈ ಇಳಿಸಲು ಹೈಕಮಾಂಡ್ ಗೆ ಒತ್ತಡ ಹಾಕಿದ್ದು ಸುಳ್ಳಲ್ಲ.

ತಂದೆಯ ಶ್ರಮದ ಹಾದಿ, ಅದರ ಹಿಂದಿನ ಹೋರಾಟ,ತಂದೆಯ ಗೌರವ, ಅವರಿಗೆ ಸಿಗಬೇಕಾದ ಗೌರವಯುತ ವಿದಾಯ ಎಲ್ಲವನ್ನೂ ತನ್ನ ರಾಜಕೀಯ ಮಹತ್ವಾಕಾಂಕ್ಷೆಗೆ ಅಡಿಗಲ್ಲಿನಂತೆ ಬಳಸಿಕೊಂಡ ವಿಜಯೇಂದ್ರ್ ಕೊನೆಗೂ ತಂದೆಯ ಗೌರವಕ್ಕೆ, ಇಳಿವಯಸ್ಸಿನಲ್ಲಿ ಎದುರಿಸಬೇಕಾದ ಅವಮಾನಕ್ಕೆ ಕಾರಣವಾಗಿದ್ದು ಮಾತ್ರ ದುರಂತವೇ ಸರಿ.’

ಬಿಎಸ್ವೈ ಪುತ್ರನ ಅಟಾಟೋಪವೇ ರಾಜೀನಾಮೆಗೆ ಕಾರಣವಾಯ್ತು ಎಂಬುದನ್ನು ಬಿಜೆಪಿ ಪಾಳಯ ಸದ್ದಿಲ್ಲದೇ ಒಪ್ಪಿಕೊಂಡಿದೆ. ಇನ್ನು ಹಿರಿಯ ರಾಜಕಾರಣಿ ಎಚ್.ವಿಶ್ವನಾಥ್ ಅಂತಹವರು ಈ ಸಂಗತಿಯನ್ನು ಬಹಿರಂಗವಾಗಿಯೇ ಹೊರಹಾಕಿದ್ದಾರೆ.

ಒಟ್ಟಿನಲ್ಲಿ ತನ್ನ ಉತ್ತರಾಧಿಕಾರಿಯಾಗಿ ಮಕ್ಕಳನ್ನು ಬೆಳೆಸುವ ಬಿಎಸ್ವೈ ಆಸೆಯೇ ಅವರ ರಾಜಕೀಯ ಸಾಧನೆಯ ಹಾದಿಗೆ ಮುಳ್ಳಾಗಿದ್ದು, ಮಕ್ಕಳಿಂದಲೇ ಬಿಎಸ್ವೈ ಪಕ್ಷದಲ್ಲಿ ತಮ್ಮ ಗೌರವ ಸ್ಥಾನಮಾನಕ್ಕೆ ಧಕ್ಕೆ ತಂದುಕೊಂಡ್ರು ಎಂಬುದು ಕಹಿಸತ್ಯವೇ ಸರಿ.

Comments are closed.