ಕುಂದಾಪುರ : ಕರಾವಳಿ ಕಂಡ ಅಪರೂಪದ ರಾಜಕಾರಣಿ, ಬಿಜೆಪಿಯ ಹಿರಿಯ ನಾಯಕ ಎಜಿ ಕೊಡ್ಗಿ ( AG Kodgi Dies ) ಅವರು ವಯೋ ಸಹಜ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು. ಅವರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಅಮಾಸೆಬೈಲಿನ ಮಚ್ಚಟ್ಟು ಗ್ರಾಮದಲ್ಲಿರುವ ಸ್ವಗೃಹದಲ್ಲಿದ್ದ ಅವರು, ಕಳೆದ ಹಲವು ಸಮಯಗಳಿಂದಲೂ ವಯೋ ಸಹಜ ಅನಾರೋಗ್ಯದಿಂದ ಅವರು ಬಳಲುತ್ತಿದ್ದರು. ರಾಜಕೀಯ ರಂಗದ ಭೀಷ್ಮನ ನಿಧನಕ್ಕೆ ರಾಜಕೀಯ ಮುಖಂಡರು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
ಕುಂದಾಪುರ ತಾಲೂಕಿನ ಅಮಾಸೆಬೈಲು ಕೃಷಿಕ ಕುಟುಂಬದಲ್ಲಿ ಜನಿಸಿದ್ದ ಸ್ವಾತಂತ್ರ್ಯ ಹೋರಾಟಗಾರ ಕೃಷ್ಣರಾಯ ಕೊಡ್ಗಿ ಅವರ ಮಗನಾಗಿ 1929ರ ಅಕ್ಟೋಬರ್ 1 ರಂದು ಜನಿಸಿದ ಅಮಾಸೆಬೈಲು (Amasebail) ಗೋಪಾಲಕೃಷ್ಣ ಕೊಡ್ಗಿ (A GopalaKrishna Kodgi) ಅವರು ಕಾನೂನು ಪದವೀಧರರು. ಹೈಕೋರ್ಟ್ ನ್ಯಾಯಾಧೀಶರಾಗಿದ್ದ ನಿಟ್ಟೂರು ಶ್ರೀನಿವಾಸ ರಾವ್ ಅವರ ಜೊತೆಯಲ್ಲಿ ವಕೀಲ ವೃತ್ತಿಯನ್ನೂ ಮಾಡಿದ್ದರು. ನಂತರದಲ್ಲಿ ತಮ್ಮನ್ನ ಕೃಷಿ ಕಾಯಕದಲ್ಲಿಯೇ ತೊಡಗಿಸಿಕೊಂಡ ಎಜಿ ಕೊಡ್ಗಿ ಅವರು ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್ ಮೂಲಕ ತನ್ನೂರನ್ನು ಅಭಿವೃದ್ದಿ ಪತದತ್ತ ಕೊಂಡೊಯ್ದವರು.
1972ರಿಂದ 1984 ರ ವರೆಗೆ ಬೈಂದೂರು ಶಾಸಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ತಾಲೂಕು ಬೋರ್ಡ್ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ, ಮಂಗಳೂರು ಜಿಲ್ಲಾ ಪರಿಷತ್ ಸದಸ್ಯರಾಗಿ, ಆರ್ಥಿಕ ಸಮಿತಿಯ ಸದಸ್ಯರಾಗಿ, ರಾಜ್ಯ ಮೂರನೇ ಹಣಕಾಸು ಆಯೋಗದ ಅಧ್ಯಕ್ಷರಾಗಿ, ನಂತರ ಕಾರ್ಯಪಡೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಕರಾವಳಿಯಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸುವಲ್ಲಿ ಕೊಡ್ಗಿ ಅವರ ಪಾತ್ರ ಮಹತ್ತರವಾದುದು. ಬಿಜೆಪಿ ಕುಂದಾಪುರ ತಾಲೂಕು ಅಧ್ಯಕ್ಷರಾಗಿ, ಜಿಲ್ಲಾಧ್ಯಕ್ಷರಾಗಿ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ಹಾಗೂ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯರಾಗಿ ಸೇವೆ ಸಲ್ಲಿಸಿದ ಕೀರ್ತಿ ಕೊಡ್ಗಿ ಅವರಿಗೆ ಸಲ್ಲುತ್ತದೆ.
ಪ್ರಗತಿಪರ ಕೃಷಿಕರಾಗಿ, ಸೌರ ವಿದ್ಯುತ್, ಗ್ರಾಮೀಣಾಭಿವೃದ್ದಿ, ನದಿ ಜೋಡಣೆಯ ಕುರಿತು ಸಾಕಷ್ಟು ಶ್ರಮಿಸಿದ್ದಾರೆ. ಅಮಾಸೆಬೈಲ್‌ನ್ನು ಸೋಲಾರ್ ಗ್ರಾಮವನ್ನಾಗಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ದೇವರಾಜ ಅರಸು ಕಾಲದಲ್ಲಿ ಭೂ ಮಸೂದೆ ಕಾನೂನು ಅನುಷ್ಟಾನದಲ್ಲಿ ಮುಂಚೂಣಿಯಲ್ಲಿದ್ದರು. 2013 ರಲ್ಲಿ ರಾಜಕೀಯ ನಿವೃತ್ತಿ ಹೊಂದಿ ಸಂಪೂರ್ಣ ಗ್ರಾಮ ಸೇವೆಯಲ್ಲಿ ತನ್ನನ್ನ ತೊಡಗಿಸಿಕೊಂಡಿದ್ದರು.
ಸಹಕಾರಿ ರಂಗದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದ ಕೊಡ್ಗಿ ಅವರು, ಕರ್ನಾಟಕ ಬ್ಯಾಂಕ್ ನಿರ್ದೇಶಕರಾಗಿ, ಮಂಗಳೂರು ಜಿಲ್ಲಾ ಸಹಕಾರಿ ಬ್ಯಾಂಕಿನ ಸದಸ್ಯರಾಗಿ, ಶಂಕರನಾರಾಯಣ ಸಿಎ ಬ್ಯಾಂಕ್ ಅಧ್ಯಕ್ಷರಾಗಿ, ಮಂಗಳೂರು ಎಪಿಎಂಸಿಯ ಅಧ್ಯಕ್ಷರಾಗಿ, ರಾಜ್ಯ ಮಾರ್ಕೆಟಿಂಗ್ ಬೋರ್ಡ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಇದನ್ನೂ ಓದಿ : Parampalli Wooden Bridge : ಭಾರೀ ಮಳೆಗೆ ಕೊಚ್ಚಿ ಹೋಗುವ ಭೀತಿಯಲ್ಲಿದೆ ಪಾರಂಪಳ್ಳಿ ವುಡನ್ ಬ್ರಿಡ್ಜ್
ಇದನ್ನೂ ಓದಿ : Siddaramaiah : ಸೋತು ಗೆದ್ದ ಸಿದ್ದರಾಮಯ್ಯ ; ಒಂದೇ ಕಲ್ಲಿಗೆ 3 ಹಕ್ಕಿ ಹೊಡೆದ ಟಗರು
Karnataka Senior Bjp Leader AG Kodgi Dies At 94