ಬೆಂಗಳೂರು: ರಾಜ್ಯದಲ್ಲಿ ಉಪಚುನಾವಣೆ ಕಣ ರಂಗೇರುತ್ತಿದ್ದಂತೆ ಇತ್ತೀಚಿಗಷ್ಟೇ ಒಂದೇ ದೋಣಿಯಲ್ಲಿ ಸವಾರಿ ಮಾಡಿ ಅಧಿಕಾರದ ಗದ್ದುಗೆ ಹಿಡಿದ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ವಾಕ್ಸಮರ ತಾರಕಕ್ಕೇರಿದ್ದು, ಕಾಂಗ್ರೆಸ್ ರಾಜಕೀಯವೇ ಪಕ್ಷವೇ? ಎಂದು ಪ್ರಶ್ನಿಸುವ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿ ಕೈನಾಯಕರ ವಿರುದ್ಧ ಹರಿಹಾಯ್ದಿದ್ದಾರೆ. ಅಷ್ಟೇ ಅಲ್ಲ ಪರೋಕ್ಷವಾಗಿ ಮಾಜಿಸಿಎಂ ಸಿದ್ಧರಾಮಯ್ಯ ಜೆಡಿಎಸ್‍ನಿಂದಲೇ ಬೆಳೆದು ಬಂದವರು ಎಂಬುದನ್ನು ನೆನಪಿಸಿ ಕುಟುಕಿದ್ದಾರೆ.

ಜೆಡಿಎಸ್‍ನವರು ಇನ್ನೊಬ್ಬರ ಹೆಗಲ ಮೇಲೆ ಕುಳಿತು ಅಧಿಕಾರಕ್ಕೆ ಬರುವವರು. ಅವರು ಸ್ವಂತ ಬಲದಿಂದ ಅಧಿಕಾರಕ್ಕೆ ಬರುವ ಜಾಯಮಾನದವರಲ್ಲ. ನನ್ನ ಪ್ರಕಾರ ಜೆಡಿಎಸ್ ಒಂದು ರಾಜಕೀಯ ಪಕ್ಷವೇ ಅಲ್ಲ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಜೆಡಿಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಅಲ್ಲದೇ ತಿಪ್ಪರಲಾಗ ಹಾಕಿದರೂ ಜೆಡಿಎಸ್ ಅಧಿಕಾರಕ್ಕೆ ಬರೋದು ಸಾಧ್ಯವಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು. ಸಿದ್ಧು ಈ ಗುದ್ದಿಗೆ ಮಾಜಿಸಿಎಂ ಎಚ್‍ಡಿಕೆ ಕೆಂಡಾಮಂಡಲವಾಗಿದ್ದು, ಸರಣಿ ಟ್ವೀಟ್ ಮೂಲಕ ಸಿದ್ಧರಾಮಯ್ಯನವರಿಗೆ ತಿರುಗೇಟು ನೀಡಿದ್ದಾರೆ.

ಉಪಚುನಾವಣೆಗೆ ಅಭ್ಯರ್ಥಿಗೂ ಗತಿ ಇಲ್ಲದೇ ಜೆಡಿಎಸ್‍ನಾಯಕರನ್ನು ಸೆಳೆದ ನಿಮ್ಮದು ರಾಜಕೀಯ ಪಕ್ಷವೇ ಎಂದು ಪ್ರಶ್ನಿಸುವ ಮೂಲಕ ಕಾಂಗ್ರೆಸ್ ಅಸ್ತಿತ್ವವನ್ನೇ ಟೀಕಿಸಿದ್ದಾರೆ. ಅಷ್ಟೇ ಅಲ್ಲ ದೇಶದಲ್ಲಿ ಕಾಂಗ್ರೆಸ್ ಹೀನಾಯ ಸ್ಥಿತಿ ತಲುಪಿದೆ ಎಂಬುದನ್ನು ಉಲ್ಲೇಖಿಸಿರುವ ಎಚ್‍ಡಿಕೆ, ಭಾರತದ ಅತ್ಯಂತ ಹಳೆಯ ರಾಜಕೀಯ ಪಕ್ಷವಾಗಿರುವ ಕಾಂಗ್ರೆಸ್ ಇಂದು ಯಾವ ಸ್ಥಿತಿಯಲ್ಲಿದೆ ಎಂದು ಪ್ರಶ್ನೆ ಮಾಡಿರುವ ಕುಮಾರಸ್ವಾಮಿ, ಯಾವ ಯಾವ ರಾಜ್ಯದಲ್ಲಿ ಸ್ವಂತ ಬಲದಲ್ಲಿ ಅಧಿಕಾರ ಸ್ಥಾಪಿಸಿದೆ. ಎಲ್ಲೆಲ್ಲಿ ಯಾರ ಹೆಗಲ ಮೇಲೆ ಕುಳಿತು ರಾಜಕೀಯ ಮಾಡುತ್ತಿದೆ? ನನ್ನ ಈ ಪ್ರಶ್ನೆಗೆ ಕಾಂಗ್ರೆಸ್ ನಾಯಕರು ಉತ್ತರಿಸಬೇಕೆಂದು ಟಾಂಗ್ ನೀಡಿದ್ದಾರೆ.
ಮಿತ್ರಪಕ್ಷಗಳನ್ನು ಆಪೋಷನ್ ತೆಗೆದುಕೊಂಡು ಬದುಕುತ್ತಿರುವ ಕಾಂಗ್ರೆಸ್ ಈಗಾಗಲೇ ಜನರಿಂದ ತಿರಸ್ಕಾರಕ್ಕೊಗಳಾಗಿದೆ. ಇದೇ ಪ್ರವೃತ್ತಿಯನ್ನು ಮುಂದುವರೆಸಿಕೊಂಡು ಹೋದರೇ ಕಾಂಗ್ರೆಸ್ ಕರ್ನಾಟಕದಲ್ಲೂ ನೆಲೆಕಳೆದುಕೊಳ್ಳುವ ದಿನ ದೂರವಿಲ್ಲ ಎಂದು ಎಚ್‍ಡಿಕೆ ಭವಿಷ್ಯ ನುಡಿದಿದ್ದಾರೆ.

2018 ರ ಚುನಾವಣೆಯಲ್ಲಿ ಸಿದ್ಧರಾಮಯ್ಯನವರ ಆಣೆ-ಪ್ರಮಾಣಗಳಿಗೆ ಜನರು ತಕ್ಕಪಾಠ ಕಲಿಸಿದ್ದು, ಉಪಚುನಾವಣೆಯಲ್ಲೂ ಕಾಂಗ್ರೆಸ್ ಗೆ ತಕ್ಕಪಾಠ ಕಲಿಸಲು ಜನರು ಸಿದ್ಧವಾಗಿದ್ದಾರೆ ಎನ್ನುವ ಮೂಲಕ ಕುಮಾರಸ್ವಾಮಿ ಒಂದು ಕಾಲದ ತಮ್ಮ ಮಿತ್ರಪಕ್ಷ ಕಾಂಗ್ರೆಸ್ ಗೆ ಹಾಗೂ ಕೈ ನಾಯಕ ಸಿದ್ಧರಾಮಯ್ಯನವರಿಗೆ ಟ್ವೀಟ್ ಚಾಟಿ ಬೀಸಿದ್ದಾರೆ.