ನವದೆಹಲಿ : ದೇಶದ ಆರ್ಥಿಕ ಪಿತಾಮಹಾ ಅಂತಾ ಕರೆಯಿಸಿಕೊಳ್ಳುತ್ತಿರುವ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ವಿರುದ್ದವೇ ಇದೀಗ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಇತ್ತೀಚಿಗೆ ನಡೆದ ಕಾಂಗ್ರೆಸ್ ವಿಡಿಯೋ ಕಾನ್ಪರೆನ್ಸ್ ನಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣು ಗೋಪಾಲ್ ಹಾಗೂ ಶ್ರೀವಾಸ್ತವ್ ಮನಮೋಹನ್ ಸಿಂಗ್ ವಿರುದ್ದ ವಾಗ್ದಾಳಿ ನಡೆದಿರೋದು ಬಹಿರಂಗವಾಗಿದೆ.

ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಆಡಳಿತದಿಂದಾಗಿಯೇ ಕಾಂಗ್ರೆಸಿಗೆ ಇಂದು ಇಂತಹ ದಯನೀಯ ಸ್ಥಿತಿ ಬಂದಿದೆ ಎಂದು ವೇಣುಗೋಪಾಲ್ ಆರೋಪಿಸಿದ್ದಾರೆ. ಆದರೆ ಕೆ.ಸಿ.ವೇಣುಗೋಪಾಲ್ ಮನಮೋಹನ್ ಸಿಂಗ್ ವಿರುದ್ದ ಆರೋಪಗಳನ್ನು ಮಾಡುತ್ತಿದ್ದಂತೆಯೇ ಕಾಂಗ್ರೆಸ್ ನಾಯಕರು ವೇಣುಗೋಪಾಲ್ ವಿರುದ್ದ ತಿರುಗಿ ಬಿದ್ದಿದ್ದಾರೆ. ವೇಣುಗೋಪಾಲ್ ತನ್ನ ವೈಫಲ್ಯಗಳನ್ನು ಮುಚ್ಚಿ ಹಾಕಲು ಯತ್ನ ನಡೆಸಿದ್ದಾರೆಂಬ ಆರೋಪ ಕೇಳಿಬಂದಿದೆ.ಅಲ್ಲದೇ ಹಲವಾರು ಕಾಂಗ್ರೆಸ್ ನಾಯಕರು ಇದೀಗ ಆಕ್ರೋಶ ವ್ಯಕ್ತಪಡಿಸಿದ್ದು, ಮನಮೋಹನ್ ಸಿಂಗ್ ದೇಶಕ್ಕಾಗಿ ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ಪಕ್ಷದಲ್ಲಿ ಇತ್ತೀಚಿನ ದಿನಗಳಲ್ಲಿ ಕೆಸಿ ವೇಣುಗೋಪಾಲ್ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಅವರ ವೈಫಲ್ಯಗಳ ಬಗ್ಗೆ ಚರ್ಚೆ ಆರಂಭವಾಗಿತ್ತು. ಕೆಸಿ ವೇಣುಗೋಪಾಲ್ ಶಿಫಾರಸು ಪತ್ರ ಹಾಗೂ ಇನ್ನಿತರ ದಾರಿಗಳ ಮೂಲಕ ಪಕ್ಷದ ಟಿಕೆಟ್ ಹಂಚಿದ್ದಾರೆ, ಪಕ್ಷದ ಪದಾಧಿಕಾರಿಗಳ ಹುದ್ದೆಯನ್ನು ಲಾಬಿಗಳ ಮೂಲಕ ದಯಪಾಲಿಸುತ್ತಿದ್ದಾರೆಂಬ ಗಂಭೀರ ಆರೋಪವೂ ಕೇಳಿಬರುತ್ತಿದೆ. ಇಷ್ಟೇ ಅಲ್ಲಾ ಕರಾವಳಿಯಲ್ಲಿ ಕೆಸಿ ವೇಣುಗೋಪಾಲ್ ಶಿಫಾರಸಿನಲ್ಲಿ ಹಲವಾರು ಅನರ್ಹರಿಗೆ ಹುದ್ದೆಗಳು ಸಿಕ್ಕಿದೆಯೆಂಬ ಆರೋಪ ಕಾಂಗ್ರೆಸ್ ವಲಯದಲ್ಲಿ ಕೇಳಿಬಂದಿದೆ.

2009ರಲ್ಲಿ ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಡಾ.ಮನಮೋಹನ್ ಸಿಂಗ್, ದೇಶದ ಆರ್ಥಿಕತೆ ವಿಚಾರದಲ್ಲಿಯೂ ಅಪಾರ ಕೊಡುಗೆಗಳನ್ನು ನೀಡಿದ್ದಾರೆ. ಆದ್ರೀಗ ಕಾಂಗ್ರೆಸ್ ನಾಯಕರೇ ಮನಮೋಹನ್ ಸಿಂಗ್ ವಿರುದ್ದ ತಿರುಗಿ ಬಿದ್ದಿರೋದು ಆಶ್ವರ್ಯವನ್ನು ಮೂಡಿಸುತ್ತಿದೆ.

ಒಟ್ಟಿನಲ್ಲಿ ಇಡಿ ವಿಶ್ವವೇ ಮೆಚ್ಚಿದ ಆಧುನಿಕ ಭಾರತದ ಆರ್ಥಿಕ ಪಿತಾಮಹ ಡಾ. ಮನಮೋಹನ್ ಸಿಂಗ್ ಕಾಂಗ್ರೆಸ್ ನಿಂದ ದೂರವಾಗುವ ದಿನಗಳು ದೂರವಿಲ್ಲ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. ದೇಶ ಕಟ್ಟಿದ ಸರದಾರ್ ವಲ್ಲಬಾಯಿ ಪಟೇಲ್, ಲಾಲ್ ಬಹುದ್ದೂರ್ ಶಾಸ್ತ್ರಿ, ಪಿವಿ ನರಸಿಂಹ ರಾವ್ ರವರನ್ನು ಕಾಂಗ್ರೆಸ್ ನಿರ್ಲಕ್ಷಿಸಿದ ರೀತಿಯಲ್ಲಿ ಡಾ.ಮನಮೋಹನ್ ಸಿಂಗ್ ರವರನ್ನು ನಿರ್ಲಕ್ಷಿಸುತ್ತದೆಯೆ ಎಂಬುದನ್ನು ಕಾದುನೋಡಬೇಕಷ್ಟೇ.