ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸಂಕಷ್ಟ ತೀವ್ರಗೊಂಡ ಬೆನ್ನಲ್ಲೇ ಸಚಿವರ ಖಾತೆ ಬದಲಾವಣೆ ಇದೀಗ ರಾಜ್ಯ ರಾಜಕೀಯದಲ್ಲಿ ಅಸಮಾಧಾನದ ಕಿಡಿ ಹೊತ್ತಿಸಿದೆ. ಆರೋಗ್ಯ ಖಾತೆ ಕಳೆದುಕೊಂಡಿರುವ ಶ್ರೀರಾಮುಲು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ರಾಜ್ಯದ ಉಪಮುಖ್ಯಮಂತ್ರಿಯಾಗುವ ಕನಸು ಕಾಣುತ್ತದ್ದ ಹೊತ್ತಲೇ ಶ್ರೀರಾಮುಲು ಅವರಿಗೆ ಸಿಎಂ ಯಡಿಯೂರಪ್ಪ ಬಿಗ್ ಶಾಕ್ ಕೊಟ್ಟಿದ್ದಾರೆ. ಶ್ರೀರಾಮುಲು ಬಳಿಯಲ್ಲಿದ್ದ ಆರೋಗ್ಯ ಸಚಿವ ಖಾತೆಯನ್ನು ಹಿಂಪಡೆದು ವೈದ್ಯರಾಗಿರುವ ಡಾ.ಸುಧಾಕರ್ ಅವರಿಗೆ ನೀಡಲಾಗಿದೆ. ಮಾತ್ರವಲ್ಲ ಹಿಂದುಳಿದ ವರ್ಗಗಳ ಇಲಾಖೆ ಸಚಿವ ಸ್ಥಾನವನ್ನೂ ಕೂಡ ಕಿತ್ತುಕೊಂಡು ಕೇವಲ ಸಮಾಜ ಕಲ್ಯಾಣ ಇಲಾಖೆಯ ಜವಾಬ್ದಾರಿಯನ್ನಷ್ಟೇ ನೀಡಲಾಗಿದೆ. ದೀಢೀರ್ ನಡೆದ ಈ ಬದಲಾವಣೆ ಶ್ರೀರಾಮುಲು ಅವರಿಗೆ ಇರಿಸುಮುರುಸು ಉಂಟು ಮಾಡಿದ್ದು, ತಮ್ಮ ಆಪ್ತರ ಬಳಿ ಸಿಎಂ ನಿರ್ಧಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಆರೋಗ್ಯ ಖಾತೆಯ ಸಚಿವನಾಗಿ ನಾನು ಕಾರ್ಯನಿರ್ವಹಿಸುತ್ತಿದ್ದರೂ ಸಿಎಂ ಕುಟುಂಬಸ್ಥರು ಹಾಗೂ ಆಪ್ತರ ಹಸ್ತಕ್ಷೇಪ ಹೆಚ್ಚಾಗಿತ್ತು. ಈಗ ಸಮಾಜ ಕಲ್ಯಾಣ ಇಲಾಖೆ ನೀಡಿದ್ದಾರೆ. ಇದರಲ್ಲೂ ಸಿಎಂ ಆಪ್ತರು ಹಸ್ತಕ್ಷೇಪ ನಡೆಸೋದಾದರೇ ನಾನು ಸಚಿವನಾಗಿರೋದಕ್ಕಿಂತ ಶಾಸಕನಾಗಿ ಮುಂದುವರೆಯೋದೇ ಉತ್ತಮ ಎನ್ನುವ ಮೂಲಕ ಸಚಿವ ಸ್ಥಾನಕ್ಕೆ ರಾಜೀನಾಮೆ ಹಾಗೂ ಬಂಡಾಯದ ಮುನ್ಸೂಚನೆಯನ್ನು ನೀಡಿದ್ದಾರೆ ಎನ್ನಲಾಗಿದೆ.

ರಾಜ್ಯದಲ್ಲಿ ಕರೋನಾ ನಿಯಂತ್ರಣದಲ್ಲಿ ರಾಜ್ಯ ಸರ್ಕಾರ ನಿರೀಕ್ಷಿತ ಪ್ರಗತಿ ಸಾಧಿಸದ ಹಿನ್ನೆಲೆಯಲ್ಲಿ ತಜ್ಞರ ಜೊತೆ ಚರ್ಚೆ ನಡೆಸಿದ ಸಿಎಂ ಬಿಎಸ್ವೈ, ನಿಯಂತ್ರಣಕ್ಕೆ ಅಗತ್ಯ ಯೋಜನೆಗಳನ್ನು ರೂಪಿಸುವ ನಿಟ್ಟಿನಲ್ಲಿ ಸ್ವತಃ ವೈದ್ಯರು ಆಗಿರುವ ಉನ್ನತ ಶಿಕ್ಷಣ ಸಚಿವ ಡಾ. ಸುಧಾಕರ್ ಗೆ ವೈದ್ಯಕೀಯ ಖಾತೆ ನೀಡಿದ್ದರು. ಇದು ಶ್ರೀರಾಮುಲುಗೆ ಆಘಾತ ತಂದಿದೆ.

ಇನ್ನು ಖಾತೆ ಬದಲಾವಣೆ ಬಳಿಕ ಸಚಿವ ಶ್ರೀರಾಮುಲು ಸ್ವತಃ ಸಿಎಂ ಬಿಎಸ್ವೈ ಭೇಟಿ ಮಾಡಿದ್ದು, ಖಾತೆ ಬದಲಾವಣೆ ಮಾಡಿದ್ದಕ್ಕೆ ನೇರಾನೇರ ಅಸಮಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿರುವ ಶ್ರೀರಾಮುಲು ಖಾಸಗಿ ಕಾರನ್ನೇರಿ ಹುಣಸಮಾರನಹಳ್ಳಿ ನಿವಾಸಕ್ಕೆ ತೆರಳಿದ್ದಾರೆ. ಸದ್ಯದಲ್ಲಿಯೇ ಹೈಕಮಾಂಡ್ ಅವರನ್ನು ಶ್ರೀರಾಮುಲು ಭೇಟಿ ಮಾಡುವ ಸಾಧ್ಯತೆಯಿದ್ದು, ನಂತರದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸುತ್ತಾರೆನ್ನಲಾಗುತ್ತಿದೆ.

ಒಟ್ಟಿನಲ್ಲಿ ಈಗಾಗಲೇ ಸಚಿವ ಸಂಪುಟ ವಿಸ್ತರಣೆಯಾಗದ ಕಾರಣಕ್ಕೆ ಸಿಎಂ ಬಿಎಸ್ವೈ ವಿರುದ್ಧ ಹಲವು ಅತೃಪ್ತರು ಕತ್ತಿ ಮಸೆಯುತ್ತಿರು ವಾಗಲೇ ಸಿಎಂ ಇದ್ದ ಸಚಿವರ ಖಾತೆ ಬದಲಾವಣೆ ಮಾಡುವ ಮೂಲಕ ಮತ್ತಷ್ಟು ಅಸಮಧಾನ ಹುಟ್ಟುಹಾಕಿದ್ದು, ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ರಾಜಕೀಯ ಹೈಡ್ರಾಮಾ ಆರಂಭಗೊಂಡರು ಅಚ್ಚರಿ ಏನಿಲ್ಲ.