ಉದ್ಯಮಿ ಭಾಸ್ಕರ ಶೆಟ್ಟಿ ಹತ್ಯೆ ಪ್ರಕರಣ : ರಾಜ್ಯ ಸರಕಾರ ಕ್ಕೆ ಸುಪ್ರೀಂ ನೋಟಿಸ್

0

ಉಡುಪಿ : ಉದ್ಯಮಿ ಭಾಸ್ಕರ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

2016ರಲ್ಲಿ ಉಡುಪಿಯ ಉದ್ಯಮಿ ಭಾಸ್ಕರ ಶೆಟ್ಟಿ ಅವರನ್ನು ಭಾಸ್ಕರ ಶೆಟ್ಟಿ ಅವರ ಪತ್ನಿ ರಾಜೇಶ್ವರಿ, ಪುತ್ರ ನವನೀತ್ ಶೆಟ್ಟಿ ಹಾಗೂ ಜ್ಯೋತಿಷಿ ನಂದಳಿಕೆಯ ನಿರಂಜನ ಭಟ್ ಸೇರಿಕೊಂಡು ಹತ್ಯೆ ಮಾಡಿ ಹೋಮ ಕುಂಡದಲ್ಲಿ ಶವವನ್ನು ಸುಟ್ಟು ಹಾಕಿದ್ದರು. ಭಾಸ್ಕರ್ ಶೆಟ್ಟಿ ಅವರ ಪತ್ನಿ ರಾಜೇಶ್ವರಿ ಹಾಗೂ ಜ್ಯೋತಿಷಿ ನಿರಂಜನ ಭಟ್ ಅವರು ಅನೈತಿಕ ಸಂಬಂಧ ಹೊಂದಿದ್ದರೆಂದ ಆರೋಪ ಕೇಳಿಬಂದಿತ್ತು.

ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ಭಾಸ್ಕರ ಶೆಟ್ಟಿ ಅವರ ಪತ್ನಿ ರಾಜೇಶ್ವರಿ, ಮಗ ನವನೀತ್ ಶೆಟ್ಟಿ ಹಾಗೂ ಸಾಕ್ಷಿ ನಾಶದ ಆರೋಪ ಹಿನ್ನೆಲೆಯಲ್ಲಿ ಜೈಲು ಸೇರಿದ್ದ ನಿರಂಜನ ಭಟ್ ಅವರ ತಂದೆ ಶ್ರೀನಿವಾಸ ಭಟ್ ಹಾಗೂ ಚಾಲಕ ರಾಘವೇಂದ್ರ ಅವರಿಗೆ ನ್ಯಾಯಾಲಯ ಜಾಮೀನು ನೀಡಿತ್ತು.

ಆದರೆ ಪ್ರಕರಣದ ಪ್ರಮುಖ ಆರೋಪಿ ನಿರಂಜನ ಭಟ್ ಜಾಮೀನು ಸಿಗದೇ ಇರೋ ಹಿನ್ನೆಲೆಯಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಹೈಕೋರ್ಟ್ ನಿರಂಜನ ಭಟ್ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಅಲ್ಲದೇ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ವಸ್ತುಗಳನ್ನು ವಶಕ್ಕೆ ಪಡೆದಿಲ್ಲ. ಮಾತ್ರವಲ್ಲ ಹಲವು ಸಾಕ್ಷಿಗಳನ್ನು ಇನ್ನಷ್ಟೇ ವಿಚಾರಣೆಗೆ ಒಳಪಡಿಸಬೇಕಾಗಿದೆ. ಈ ಪ್ರಕ್ರಿಯೆಯನ್ನು ಮುಗಿಸಲು ಇನ್ನೂ ಆರು ತಿಂಗಳ ಕಾಲಾವಕಾಶ ಬೇಕಾಗಿದೆ. ಆ ನಂತರದಲ್ಲಿ ಜಾಮೀನು ಅರ್ಜಿ ಸಲ್ಲಿಸಲು ಹೈಕೋರ್ಟ್ ಸೂಚನೆಯನ್ನು ನೀಡಿತ್ತು.

ಹೈಕೋರ್ಟ್ ಆದೇಶದ ಸಿಂಧುತ್ವವನ್ನು ಪ್ರಶ್ನಿಸಿ ನಿರಂಜನ ಭಟ್ ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಕುರಿತು ವಿಚಾರಣೆಯನ್ನು ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಬೊಬ್ಡೆ ಹಾಗೂ ನ್ಯಾಯಮೂರ್ತಿಗಳಾದ ಎಸ್.ಎಸ್.ಬೋಪಣ್ಣ, ವಿ. ರಾಮಸುಬ್ರಹ್ಮಣ್ಯಂ ಅವರನ್ನು ಒಳಗೊಂಡ ನ್ಯಾಯಪೀಠವು ಜಾಮೀನು ಅರ್ಜಿಯ ಕುರಿತು ಎರಡು ವಾರಗಳ ಒಳಗಾಗಿ ಉತ್ತರ ನೀಡುವಂತೆ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ ಎಂದು ರಾಷ್ಟ್ರೀಯ ದೈನಿಕ ವರದಿ ಮಾಡಿದೆ.

Leave A Reply

Your email address will not be published.