ಬೆಂಗಳೂರು : ಬಿಜೆಪಿ ಸಂಪುಟ ವಿಸ್ತರಣೆಯ ಸರ್ಕಸ್ ನಲ್ಲಿ ಈಗಾಗಲೇ ಬಿಎಸ್ವೈ ಪುತ್ರ ಬಿ.ವೈ.ವಿಜಯೇಂದ್ರ(BY Vijayendra) ಹೆಸರು ಶಿಫಾರಸ್ಸುಗೊಂಡಿದೆ. ಇನ್ನೇನು ಬಹುತೇಕ ವಿಜಯೇಂದ್ರ ಸಚಿವರಾಗೋದು ಖಚಿತ ಎಂದು ಅವರ ಆಪ್ತ ವಲಯ ಸಂಭ್ರಮಿಸುತ್ತಿದೆ. ಅಷ್ಟೇ ಅಲ್ಲ ರಾಜಕೀಯದ ರಾಜಾಹುಲಿ ಬಿ.ಎಸ್.ಯಡಿಯೂರಪ್ಪ ಕೊನೆಗೂ ಗೆದ್ದಿದ್ದಾರೆ ಎಂದೆಲ್ಲ ವಿಶ್ಲೇಷಿಸುತ್ತಿದ್ದಾರೆ. ಆದರೆ ಬಿಜೆಪಿಯ ಹಿರಿತಲೆಗಳ ಪ್ರಕಾರ ವಿಜಯೇಂದ್ರ (BY Vijayendra) ಸಚಿವ ಸ್ಥಾನದ ಹಾದಿ ಸುಲಭವಿಲ್ಲ.
ಹೌದು, ಬಿಜೆಪಿ ಹೈಕಮಾಂಡ್ ನ ಚಿಂತನೆ ಹಾಗೂ ಪಕ್ಷ ಸಂಘಟನೆ, ಚುನಾವಣೆ ರಣತಂತ್ರದ ಮಾದರಿ ಬದಲಾಗಿದೆ. ಈಗ ಹೈಕಮಾಂಡ್ ಯಾವುದೇ ಬ್ಲ್ಯಾಕ್ ಮೇಲ್ ಅಥವಾ ಪ್ರಭಾವದ ರಾಜಕಾರಣಕ್ಕೆ ಮಣೆ ಹಾಕುತ್ತಿಲ್ಲ. ಈಗಾಗಲೇ ಬಿಎಸ್ವೈ ಮುಖ್ಯಮಂತ್ರಿ ಸೇರಿದಂತೆ ಬಿಜೆಪಿಯ ಹಲವು ಉನ್ನತ ಸ್ಥಾನಗಳ ಆಧಿಕಾರ ಅನುಭವಿಸಿದ್ದಾರೆ. ಹಾಲಿ ಬಿಜೆಪಿಯಿಂದ ಶಾಸಕರಾಗಿದ್ದಾರೆ. ಮಾತ್ರವಲ್ಲ ಬಿಎಸ್ವೈ ಹಿರಿಯ ಪುತ್ರ ಬಿ.ವೈ.ರಾಘವೇಂದ್ರ ಕೂಡ ಸಂಸದರಾಗಿದ್ದಾರೆ. ಹೀಗಿರುವಾಗ ಮತ್ತೊಮ್ಮೆ ಬಿ.ವೈ.ವಿಜಯೇಂದ್ರ ಅವರನ್ನು ಪರಿಷತ್ ಸದಸ್ಯರನ್ನಾಗಿಸಿ ಸಚಿವ ಸ್ಥಾನ ನೀಡಿದಲ್ಲಿ ಇದು ಕುಟುಂಬ ರಾಜಕಾರಣಕ್ಕೆ ಹೈಕಮಾಂಡ್ ಸ್ವತಃ ಅನುವು ಮಾಡಿಕೊಟ್ಟಂತಾಗಲಿದೆ ಎಂಬ ಲೆಕ್ಕಾಚಾರ ಹೈಕಮಾಂಡ್ ನದ್ದು.
ಆರಂಭದಿಂದಲೂ ಬಿಜೆಪಿ ಮಾತು ಮಾತಿಗೆ ಕಾಂಗ್ರೆಸ್ ಗೆ ಕುಟುಂಬ ರಾಜಕಾರಣ ಎಂದು ಟೀಕಿಸುತ್ತ ಬಂದಿದೆ. ಹೀಗಿರುವಾಗ ಮತ್ತೆ ಬಿ.ಎಸ್.ಯಡಿಯೂರಪ್ಪ ಕುಟುಂಬಕ್ಕೆ ಅಧಿಕಾರ ನೀಡೋದು ಟೀಕೆಗೆ ಆಹ್ವಾನ ಕೊಟ್ಟಂತಾಗಲಿದೆ. ಅಲ್ಲದೇ ಈಗಾಗಲೇ ಕೈ ಚಿಂತನ – ಮಂಥನದಲ್ಲ ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ಎಂದು ತೀರ್ಮಾನ ಮಾಡಲಾಗಿದೆ. ಇಂಥ ಹೊತ್ತಿನಲ್ಲಿ ಬಿ.ವೈ.ವಿಜಯೇಂದ್ರ (BY Vijayendra) ಸಂಪುಟ ಸೇರ್ಪಡೆ ಬಿಜೆಪಿ ಶಾಸಕರಲ್ಲೇ ಬಿರುಕು ಮೂಡಿಸಬಹುದು ಎಂಬ ಆತಂಕವೂ ಹೈಕಮಾಂಡ್ ಗಿದೆ. ಹೀಗಾಗಿ ಕೋರ್ ಕಮಿಟಿ ತೀರ್ಮಾನವನ್ನು ಹೈಕಮಾಂಡ್ ತಿರಸ್ಕರಿಸುವ ಸಾದ್ಯತೆ ಕೂಡ ಇದೆ. ಈ ಹಿಂದೆಯೂ ಕೋರ್ ಕಮಿಟಿ ತೀರ್ಮಾನ ತಿರಸ್ಕರಿಸಿದ್ದ ಹೈಕಮಾಂಡ್ ಈರಣ್ಣ ಕಡಾಡಿ, ಅಶೋಕ್ ಗಸ್ತಿ ಹೆಸರು ಪ್ರಕಟಿಸಿ ಸ್ವತಃ ಬಿಜೆಪಿಗರಿಗೆ ಶಾಕ್ ನೀಡಿತ್ತು.
ಅಲ್ಲದೇ ಈಗಾಗಲೇ ನೂರಾರು ಭಾರಿ ಪಿಎಂ ಮೋದಿ ಕುಟುಂಬ ರಾಜಕಾರಣದ ವಿರುದ್ಧ ಮಾತನಾಡಿದ್ದಾರೆ. ಅಲ್ಲದೇ ಮುಂದಿನ ಚುನಾವಣೆಯಲ್ಲೂ ಕುಟುಂಬ ರಾಜಕಾರಣಕ್ಕೆ ಅವಕಾಶವಿಲ್ಲ ಎಂದಿದ್ದಾರೆ. ಹೀಗಾಗಿ ವಿಜಯೇಂದ್ರ ಆಯ್ಕೆ ಕಷ್ಟವಿದೆ ಎನ್ನುತ್ತಾರೆ ಹಿರಿಯ ಬಿಜೆಪಿ ನಾಯಕರು. ಆದರೆ ವಿಜಯೇಂದ್ರ ಉತ್ತಮ ಸಂಘಟನಾ ಚತುರ ಎಂಬ ಅಭಿಪ್ರಾಯವಿದೆ. ಹೀಗಾಗಿ ಹಳೆ ಮೈಸೂರು ಭಾಗದಲ್ಲಿ ಅವರನ್ನು ಪಕ್ಷ ಸಂಘಟನೆಗೆ ಬಳಸಿಕೊಳ್ಳಬೇಕು ಎಂಬ ಅಭಿಪ್ರಾಯವೂ ಇದೆ. ಹೀಗಾಗಿ ಮಂತ್ರಿ ಸ್ಥಾನ ನೀಡಬೇಕೆಂಬ ಒತ್ತಡವೂಪಕ್ಷದಲ್ಲೇಇದೆ. ಒಟ್ಟಿನಲ್ಲಿ ಬಿಜೆಪಿ ಸಂಪುಟದಲ್ಲಿ ವಿಜಯೇಂದ್ರ ಸೇರ್ಪಡೆ ಫಿಫ್ಟಿ ಫಿಫ್ಟಿ ಸಾಧ್ಯತೆಯನ್ನು ಬಿಂಬಿಸುತ್ತಿದೆ.
ಇದನ್ನೂ ಓದಿ : ಪಿ.ಚಿದಂಬರಂ, ಕಾರ್ತಿ ಚಿದಂಬರಂಗೆ ಸಂಬಂಧಿಸಿದ 7 ಸ್ಥಳಗಳಲ್ಲಿ ಸಿಬಿಐ ದಾಳಿ
ಇದನ್ನೂ ಓದಿ : ರಾಷ್ಟ್ರ ರಾಜಕಾರಣದಿಂದ ರಾಜ್ಯ ರಾಜಕಾರಣಕ್ಕೆ : ಮತ್ತೆ ಸಚಿವರಾಗ್ತಾರಾ ಸಿ.ಟಿ.ರವಿ
Obstacle for BY Vijayendra join Karnataka Cabinet