ಮಂಗಳೂರು : ತಲೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ಕಾಂಗ್ರೆಸ್ ಹಿರಿಯ ಮುಖಂಡ, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಸಹಜ ಉಸಿರಾಟ ಶೇ.೧೧ರಷ್ಟು ಏರಿಕೆಯಾಗಿದ್ದು, ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.

ಆಸ್ಕರ್ ಫೆರ್ನಾಂಡಿಸ್ ಅವರು ಮನೆಯಲ್ಲಿ ಆಕಸ್ಮಿಕವಾಗಿ ಬಿದ್ದು ತಲೆಯ ಹಿಂಭಾಗಕ್ಕೆ ಪೆಟ್ಟು ಮಾಡಿಕೊಂಡಿದ್ದರು. ಆದರೆ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದಾಗಿ ವೈದ್ಯರು ಶಸ್ತ್ರ ಚಿಕಿತ್ಸೆಗೆ ಸೂಚನೆಯನ್ನು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಅವರಿಗೆ ಮಂಗಳೂರು ನಗರದ ಯೆನಪೋಯಾ ಆಸ್ಪತ್ರೆಗೆ ದಾಖಲಿಸಿ ಶಸ್ತ್ರ ಚಿಕಿತ್ಸೆಯನ್ನೂ ನೆರವೇರಿಸಲಾಗಿದೆ. ಇದೀಗ ಅವರ ಉಸಿರಾಟದಲ್ಲಿ ಚೇತರಿಕೆ ಕಂಡುಬಂದಿದೆ.

ಮೆದುಳು ಸ್ಪಂದಿಸುತ್ತಿದ್ದು ಕುಟುಂಬಸ್ಥರ ಮಾತಿಗೆ ಸ್ಪಂದನೆ ನೀಡುತ್ತಿದ್ದಾರೆ. ಇನ್ನು ಬಿಪಿ, ಮಧುಮೇಹ ನಾರ್ಮಲ್ ಸ್ಥಿತಿಗೆ ಬಂದಿದೆ. ಅಲ್ಲದೇ ಶನಿವಾರ ದ್ರವಾಹಾರ ಸೇವನೆಯನ್ನು ಮಾಡಿದ್ದಾರೆ. ತಲೆಯಲ್ಲಿ ಇನ್ನ ಹೆಪ್ಪುಗಟ್ಟಿರುವ ರಕ್ತ ಇದ್ದು ಅದನ್ನು ಹೊರತೆಗೆಯುವ ಹಿನ್ನೆಲೆಯಲ್ಲಿ ಒಂದೆರಡು ದಿನಗಳಲ್ಲಿ ನಿರ್ಧಾರ ಕೈಗೊಳ್ಳುಲು ವೈದ್ಯರು ತೀರ್ಮಾನಿಸಿದ್ದಾರೆ.

ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಇಂದು ಅವರಿಗೆ ಮತ್ತೆ ಡಯಾಲಿಸಿಸ್ ನಡೆಸಲಾಗುತ್ತದೆ. ಆಸ್ಕರ್ ಫೆರ್ನಾಂಡಿಸ್ ಅವರು ಆಸ್ಪತ್ರೆಗೆ ದಾಖಲಾದ ಬೆನ್ನಲ್ಲೇ ಹಿರಿಯ ಕಾಂಗ್ರೆಸ್ ಮುಖಂಡರು, ಗಣ್ಯರು ಆಸ್ಪತ್ರೆಗೆ ಭೇಟಿ ನೀಡಿ ಅವರ ಯೋಗ ಕ್ಷೇಮವನ್ನು ವಿಚಾರಿಸುತ್ತಿದ್ದಾರೆ. ಇನ್ನೊಂದೆಡೆ ಚರ್ಚ್‌ಗಳಲ್ಲಿ ಆಸ್ಕರ್ ಚೇತರಿಕೆಗೆ ಸಾಮೂಹಿಕ ಪ್ರಾರ್ಥನೆ ನಡೆಯುತ್ತಿದೆ.