ಬೆಂಗಳೂರು : ರಾಜ್ಯದಲ್ಲಿ ನಡೆಯುತ್ತಿರುವ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯಿದೆ (Prohibition of Conversion Act) ಪಕ್ಷಗಳ ನಡುವೆ ಹೋರಾಟದ ಕಾವೇರಿಸಿದೆ. ಶತಾಯ ಗತಾಯ ಕಾನೂನು ಜಾರಿ ಮಾಡಿಯೇ ಸಿದ್ಧ ಎಂದು ಬಿಜೆಪಿ ( BJP ) ಪಣ ತೊಟ್ಟಿದ್ದರೇ ಕಾಂಗ್ರೆಸ್ ನಾಯಕರು ಯಾವುದೇ ಕಾರಣಕ್ಕೂ ಮತಾಂತರ ನಿಷೇಧ ಕಾಯಿದೆ ಜಾರಿ ಮಾಡಲು ಬಿಡೋದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಈ ಮಧ್ಯೆ ಮತಾಂತರ ನಿಷೇಧ ಕಾಯಿದೆ ಕುರಿತು ಜೆಡಿಎಸ್ ನಿಲುವೇನು ಎಂಬ ಪ್ರಶ್ನೆ ಕುತೂಹಲ ಮೂಡಿಸಿದ್ದು ಇದಕ್ಕೆ ಎಚ್ಡಿಕೆ ( HD Kumaraswami )ಸ್ಪಷ್ಟ ಉತ್ತರ ನೀಡಿದ್ದಾರೆ.
ರಾಜ್ಯದಲ್ಲಿ ಹಲವು ತಿಂಗಳಿನಿಂದ ಮತಾಂತರ ಪ್ರಕರಣಗಳು ಅಲ್ಲಲ್ಲಿ ವರದಿಯಾಗುತ್ತಲೇ ಇದೆ. ಬಡತನ, ಅನಾರೋಗ್ಯದ ಕಾರಣವನ್ನಿಟ್ಟುಕೊಂಡು ಮತಾಂತರ ಪ್ರಯತ್ನಗಳು ನಡೆಯುತ್ತಿರುವ ಸಂಗತಿಗಳು ವರದಿಯಾಗಿವೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರ ಆಮಿಷ ಒಡ್ಡಿ ಮತಾಂತರ ಮಾಡುವವರನ್ನು ಶಿಕ್ಷಿಸಲು ಕಠಿಣ ಕಾನೂನು ರೂಪಿಸಲು ಸಿದ್ಧವಾಗಿದೆ.
ಚಳಿಗಾಲದ ಅಧಿವೇಶನದಲ್ಲೇ ಮತಾಂತರ ನಿಷೇಧ ಕಾಯಿದೆ ಜಾರಿಗೆ ತರುವುದಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ರಾಜ್ಯದಲ್ಲಿ ಕಾನೂನು ಜಾರಿಯಾಗುತ್ತದೆ. ಆದರೆ ಇದಕ್ಕೆ ಯಾವುದೇ ಸಮುದಾಯದವರು ಹೆದರುವ ಅಗತ್ಯವಿಲ್ಲ. ಯಾವುದೇ ಧರ್ಮಕ್ಕೆ ಅನಗತ್ಯ ತೊಂದರೆಯಾಗುವುದಿಲ್ಲ. ಆದರೆ ಬಡತನ ಹಾಗೂ ಅನಕ್ಷರತೆಯನ್ನು ಬಂಡವಾಳಮಾಡಿಕೊಳ್ಳುವವರಿಗೆ ಶಿಕ್ಷೆಯಾಗಬೇಕು ಎಂದಿದ್ದರು.
ಇನ್ನು ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ ವಿಧೇಯಕ ವನ್ನು ಸದನದ ಒಳಗೆ ಮತ್ತು ಹೊರಗೆ ವಿರೋಧಿಸಲು ಕಾಂಗ್ರೆಸ್ ಸಿದ್ಧತೆಮಾಡಿಕೊಂಡಿದೆ. ಯಾವುದೇ ಕಾರಣಕ್ಕೂ ಕಾನೂನು ಜಾರಿಗೆ ಅವಕಾಶ ನೀಡುವುದಿಲ್ಲ ಎಂದು ಮಾಜಿಸಿಎಂ ಸಿದ್ಧು ಗುಡುಗಿದ್ದಾರೆ. ಈ ಮಧ್ಯೆ ಮತಾಂತರ ಕಾನೂನಿನ ಕುರಿತು ಜೆಡಿಎಸ್ ನಿಲುವನ್ನು ಮಾಜಿಸಿಎಂ ಎಚ್.ಡಿ.ಕೆ ಸ್ಪಷ್ಟ ಪಡಿಸಿದ್ದು, ರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಮತಾಂತರ ನಿಷೇಧ ಕಾಯಿದೆಗೆ ಬೆಂಬಲನೀಡುವುದಿಲ್ಲ ಎಂದು ಮಾಜಿಸಿಎಂ ಎಚ್.ಡಿ.ಕೆ ಸ್ಪಷ್ಟಪಡಿಸಿದ್ದಾರೆ.
ದೆಹಲಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಎಚ್ಡಿಕೆ, ಬೆಳಗಾವಿಯಲ್ಲಿ ಅಧಿವೇಶನ ಕರೆದಿರೋದು ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಲು. ಮತಾಂತರ ನಿಷೇಧ ಕಾನೂನು ಜಾರಿಗೆ ತರಲು ಅಲ್ಲ. ಹೀಗಾಗಿ ಜೆಡಿಎಸ್ ಈ ಕಾಯಿದೆಯನ್ನು ವಿರೋಧಿಸುತ್ತದೆ. ವಿಧಾನಸಭೆ ಯಲ್ಲಿರುವ ಜೆಡಿಎಸ್ ಶಾಸಕರು ಕೂಡ ಈ ಮಸೂದೆಯನ್ನು ವಿರೋಧಿಸಲಿದ್ದಾರೆ ಎಂದಿದ್ದಾರೆ. ರಾಜ್ಯ ಸರ್ಕಾರ ಕಾನೂನು ಜಾರಿಗೆ ತರುತ್ತಿರುವುದು ಸರಿಯಲ್ಲ ಎಂದು ಎಚ್ಡಿಕೆ ಟೀಕಿಸಿದ್ದಾರೆ.
ಈ ಮಧ್ಯೆ ಬಂಜಾರಾ ಸಮುದಾಯ ಪ್ರಮುಖವಾಗಿ ಮತಾಂತರಕ್ಕೆ ಒಳಗಾಗಿದೆ ಎಂಬ ಮಾತುಗಳು ಕೇಳಿಬಂದಿದ್ದು, ರಾಜ್ಯದ 47 ಲಂಬಾಣಿ ತಾಂಡಾದ 15 ಸಾವಿರ ಜನರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂಬ ಮಾತು ಕೇಳಿಬಂದಿದೆ. ಹೀಗಾಗಿ ರಾಜ್ಯ ಸರ್ಕಾರ ಬಲವಂತದ ಮತಾಂತರಕ್ಕೆ ಕಡಿವಾಣ ಹಾಕಲು ಮಸೂದೆ ಜಾರಿಗೆ ಸನ್ನದ್ಧವಾಗಿದೆ.
ಇದನ್ನೂ ಓದಿ :
ಇದನ್ನೂ ಓದಿ : The law of conversion : ಕಾಂಗ್ರೆಸ್ ವಿರೋಧದ ನಡುವೆಯೂ ಬಿಜೆಪಿ ಧೃಡ ನಿರ್ಧಾರ: ಜಾರಿಯಾಗಲಿದೆ ಮತಾಂತರ ಕಾನೂನು
( Prohibition of Conversion Act : HD Kumaraswami surprise statement on BJP stand)