
‘ಭಾರತ ದೇಶವೆಂದರೆ ಹಳ್ಳಿಗಳ ದೇಶ’ ಎಂದರು, ಮಹಾತ್ಮಗಾಂಧೀಜಿ. ಹಳ್ಳಿ ಸಂಸ್ಕೃತಿಗೆ ಸಮಾಜಮುಖಿ ನೆಲೆಯಾಗಿದ್ದು ರೈತರ ಕೃಷಿ ಪರಂಪರೆ. ಈ ತಳಹದಿ ಅರ್ಥವಾದರೆ ಭಾರತ ಸಮಷ್ಟಿಯಾಗಿರುತ್ತದೆ. ಇಲ್ಲದಿದರೆ ಛಿದ್ರ, ಛಿದ್ರ..!

ದೆಹಲಿ ಸುತ್ತ ಮುತ್ತ ನಡೆಯುತ್ತಿರುವ ರೈತ ಹೋರಾಟ ಹಾಗೂ ಕೇಂದ್ರ ಸರ್ಕಾರದ ಕೃಷಿ ಕಾಯಿದೆಗಳ ಕುರಿತ ಧೋರಣೆ ಇಡೀ ವಿಶ್ವದ ಗಮನ ಸೆಳೆದಿದೆ. ಒಂದು ಸಣ್ಣ ಸತ್ಯವೆಂದರೆ ರೈತರಿಗೆ ಇಷ್ಟವಿಲ್ಲದ ಕಾಯಿದೆ ಜಾರಿಗೊಳಿಸುವುದೇಕೆ ಎನ್ನುವುದು. ಭಾರತೀಯ ಕಿಸಾನ್ ಒಕ್ಕೂಟ(ಬಿಕೆಯು) ಮುಖಂಡ ಪಾಲ್ ಮಜ್ರಾ ಅವರ ಪ್ರಶ್ನೆ. ರೈತ ವಿರೋಧಿ ಕಾನೂನುಗಳ ಹಿಂಪಡೆಯಲೇ ಬೇಕೆ ಎಂಬ ಒತ್ತಾಯ ಎಲ್ಲೆಡೆ. ರೈತರಿಗೇ ಬೇಕಿಲ್ಲದ ಪ್ರಗತಿ ಸರ್ಕಾರಕ್ಕೇಕೆ ಇಷ್ಟೊಂದು ಮುತುವರ್ಜಿ..ಇದು ಸಿಂಪಲ್ ಪ್ರಶ್ನೆ. ಸಾವಿರಾರು ಉತ್ತರಗಳಿವೆಯಾದರೂ ಅವು ಅವರವರ ನೇರಕ್ಕೆ. ಅವರವರ ಹಿತಕ್ಕೆ. ಮೂಲ ಸಮಸ್ಯೆ ಇರುವುದೇ ಇಲ್ಲಿ.

ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ಹಮ್ಮಿಕೊಂಡಿದ್ದ ಟ್ರ್ಯಾಕ್ಟರ್ ರಾಲಿಯ ಸಂದರ್ಭದಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ 38 ದೂರು ದಾಖಲಿಸಿದ್ದು, 84 ಮಂದಿಯನ್ನು ಬಂಧಿಸಲಾಗಿದೆ ಎನ್ನುತ್ತದೆ ಪೊಲೀಸ್ ವಿವರ. ಈ ಸಂಖ್ಯೆ ಹೆಚ್ವಬಹುದು. ಕಡಿಮೆ ಆಗಲೂ ಬಹುದು. ಗಣರಾಜ್ಯೋತ್ಸವ ದಿನದಂದು ನಡೆದ ಗಲಭೆಯು ಬಿಜೆಪಿ ಪ್ರಾಯೋಜಿತವಾಗಿತ್ತು. ರೈತ ಚಳವಳಿಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ದೆಹಲಿ ಪೊಲೀಸರ ನೆರವಿನೊಂದಿಗೆ ಬಿಜೆಪಿಯವರು ಗಲಭೆ ನಡೆಸಿದ್ದಾರೆ ಇದು ಎಎಪಿ ಆರೋಪ. ಪ್ರತಿಭಟನೆಯನ್ನುಆರಂಭಿಸುವುದಕ್ಕೂ ಸಾಕಷ್ಟು ಮುಂಚಿತವಾಗಿಯೇ ದೀಪ್ ಸಿಧುಗೆ ದೆಹಲಿ ಒಳಗೆ ಪ್ರವೇಶಿಸಲು ಅವಕಾಶ ನೀಡಲಾಗಿತ್ತು. ಕೆಲವರ ಸೂಚನೆಯ ಮೇರೆಗೆ ದೆಹಲಿ ಪೊಲೀಸರು ಅವರಿಗೆ ಕೆಂಪುಕೋಟೆಯೊಳಗೆ ಪ್ರವೇಶಿಸಲು ಅವಕಾಶ ನೀಡಿದ್ದರು ಎನ್ನುವುದು ಎಎಪಿ ವಕ್ತಾರ ಸೌರಬ್ ಭಾರದ್ವಾಜ್ ಆರೋಪ.

ಅವರು ಇವರ ಮೇಲೆ, ಇವರು ಅವರಮೇಲೆ ಬಾಣ, ತಿರುಗುಬಾಣ.!
ಬಸವಳಿದದ್ದು ಮಾತ್ರ ರೈತರು. ನೇಗಿಲು ಹಿಡಿದು ಉತ್ತು ಬಿತ್ತಿ ಹೊಟ್ಟೆ ತುಂಬಿಸಿಕೊಳ್ಳಬೇಕಾಗಿದ್ದ ಅನ್ನದಾತ ಇಂದು ಬೀದಿಯಲ್ಲಿದ್ದಾನೆ. ಗಾಜಿಪುರ ಸೇರಿದಂತೆ ದಿಲ್ಲಿಯ ವಿವಿಧಗಡಿ ಪ್ರದೇಶದಲ್ಲಿ ಹಾಗೂ ಸಿಂಘು ಗಡಿಯಲ್ಲಿ ಕೊರೆಯುವ ಚಳಿಗೆ, ಲಾಠಿ ಏಟಿನ ನೋವಿಗೆ ಎದೆಯೊಡ್ಡಿದ್ದಾನೆ. ಇದು ಮನ ಕಲಕುವ ಸಂಗತಿ. ಆತ ಬೇರೆ ಬೇಡಿಕೆ ಇಟ್ಟಿಲ್ಲ, ತಮ್ಮ ತಂಟೆಗೆ ಬರಬೇಡಿ. ನಮಗೆ ಬೇಡವಾದ ಕೃಷಿ ಕಾಯಿದೆ ಅನುಷ್ಠಾನಗೊಳಿಸಬೇಡಿ. ಇದಿಷ್ಟೇ ಆತನ ಮನವಿ..!

ಲಾಠಿ ಏಟು, ಅಶ್ರುವಾಯು ಸಿಡಿತ, ಸರ್ಕಾರದ ವಿರೋಧ ಹೆಚ್ಚಾದಷ್ಟೂ ಪ್ರತಿಭಟನೆ ಬಿಗಿಯಾಗುತ್ತಿದೆ. ಮೂರು ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ದೆಹಲಿಯ ಗಡಿಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ರೈತರ ಬೆಂಬಲವೂ ಹೆಚ್ಚುತ್ತಿದೆ. ಫೆಬ್ರುವರಿ ೨ರ ವೇಳೆಗೆ ದಾಖಲೆ ಸಂಖ್ಯೆಯ ಪ್ರತಿಭಟನಾಕಾರರು ಸೇರುವ ನಿರೀಕ್ಷೆಯಿದೆ ಎನ್ನುತ್ತಾರೆ ರೈತ ಮುಖಂಡ ಬಲ್ಬೀರ್ ಸಿಂಗ್ ರಾಜೇವಾಲ್. ಇದಕ್ಕೆ ಪೂರಕವೆಂಬಂತೆ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಉತ್ತರಾಖಂಡದಿಂದ ಸಾಗರೋಪಾದಿಯಲ್ಲಿ ಸೇರುತ್ತಿದ್ದಾರೆ. ಚಳವಳಿಯೂ ಪ್ರಬಲವಾಗುತ್ತಿರುವುದು ಗಮನಾರ್ಹ. ರೈತರ ಬೇಡಿಕೆ ಹಾಗೂ ಶಾಂತಿಯುತ ಪ್ರತಿಭಟನೆಗೆ ನಿರಂತರವಾಗಿ ಬೆಂಬಲ ಸಿಗುತ್ತಿದೆ. ಇದು ರಾಜಕೀಯ ಪ್ರತಿಭಟನೆ ಯಲ್ಲ. ಹೊಸ ರೀತಿಯ ಚಿಂತನೆಗಳನ್ನು ಹಂಚಿಕೊಳ್ಳುವವರಿಗೆ ಸ್ವಾಗತವಿದೆ. ಆದರೆ, ಕೊನೆಯವರೆಗೂ ಚಳವಳಿ ಯನ್ನು ಬೆಂಬಲಿಸುವವರು ಮಾತ್ರ ಬರಬಹುದು ಎನ್ನುತ್ತಾರೆ. ಭಾರತೀಯ ಕಿಸಾನ್ ಯೂನಿಯನ್ ಮೀರಠ್ ವಲಯದ ಮುಖ್ಯಸ್ಥ ಪವನ್ ಖತಾನಾ.

ಮುಂಜಾಗ್ರತಾ ಕ್ರಮ ಕೈಗೊಳ್ಳುವ ಭರದಲ್ಲಿ ಕೇಂದ್ರ ಹಾಗೂ ಉತ್ತರಪ್ರದೇಶದ ಸರ್ಕಾರಗಳು ನೀರು, ಕರೆಂಟ್, ಇಂಟರ್ನೆಟ್ ಸೇರಿ ಎಲ್ಲಾ ಬಗೆಯ ಸೌಲಭ್ಯಗಳನ್ನು ಕಡಿತ ಗೊಳಿಸಿರುವುದು ಆತಂಕಕಾರಿ ಬೆಳವಣಿಗೆ. ಇದು ಪ್ರಜಾ ಪ್ರಭುತ್ವ. ನಿರಂಕುಶತ್ವಕ್ಕೆ ಇಲ್ಲಿ ಅವಕಾಶವಿಲ್ಲ. ಆದರೆ ಆಗುತ್ತಿರುವುದೇ ಬೇರೆ. ಪ್ರತಿಭಟನಾ ಸ್ಥಳಗಳಲ್ಲಿ ರೈತರು ಹೆಚ್ಚಾಗಿ ಜಮಾಯಿಸುತ್ತಿರುವುದರಿಂದ ಅಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಗಾಜಿಪುರ ಗಡಿಯನ್ನು ಸಂಪರ್ಕಿಸುವ ರಸ್ತೆಯನ್ನೂ ಮುಚ್ಚಲಾಗಿದೆ.ಈ ರೀತಿಯ ಚಳವಳಿ ಮತ್ತು ಪ್ರತಿಭಟನೆಗೆ ಪರಿಹಾರೋಪಾಯ ಕಂಡುಕೊಳ್ಳುವುದರ ಬದಲು ಹಠಕ್ಕೆ ಬಿದ್ದಂತಿರುವ ಸರ್ಕಾರ ಈ ಧೋರಣೆ ಅನೇಕ ಯಡುವಟ್ಟುಗಳಿಗೆ ಕಾರಣವಾಗಿದೆ. ಇಷ್ಟು ದಿನ ಮೌನವಾಗಿದ್ದ ಮೋದಿ ಅವರು ಕೊನೆಗೂ ಮಾತಾಡಿದ್ದಾರೆ.

‘ಜನವರಿ 22ರಂದು ರೈತರ ಮುಂದೆ ಇಟ್ಟಿದ್ದ ಪ್ರಸ್ತಾವಕ್ಕೆ ಕೇಂದ್ರ ಸರ್ಕಾರವು ಈಗಲೂ ಬದ್ಧವಾಗಿದೆ. ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರಿಗೆ ಒಂದು ಫೋನ್ ಕರೆ ಮಾಡಿದರೆ ಮಾತುಕತೆಯ ಸಮಯ ನಿಗದಿಯಾಗುತ್ತದೆ’ ಎನ್ನುವ ಪ್ರಧಾನಿ ನರೇಂದ್ರ ಮೋದಿ ಅವರು ಸರ್ವಪಕ್ಷ ಸಭೆಯಲ್ಲಿ ಈ ಕುರಿತು ಸ್ಪಂದಿಸಿರುವುದು ಆಶಾದಾಯಕ ಬೆಳವಣಿಗೆ. ಕಾಯ್ದೆಗಳನ್ನು 18 ತಿಂಗಳ ಕಾಲ ಅಮಾನತಿನಲ್ಲಿಡಲು ಸಿದ್ಧ. ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ರೈತರು ಯಾವಾಗ ಮಾತುಕತೆಗೆ ಬಂದರೂ ನಾವು ಸಿದ್ಧ’ ಎಂದಿರುವುದನ್ನು ರೈತರು ಸಮಮನ್ವಯ ದೃಷ್ಟಿಯಿಂದ ಸ್ವೀಕರಿಸಬೇಕು. ಮೋದಿ ಅವರು ಮಾತನಾಡಿರುವುದರ ಹಿಂದಿನ ಸತ್ಯವನ್ನು ಅರಿಯಬೇಕು. ಅವರ ಹೇಳಿಕೆಗೆ ಪ್ರಮುಖ ಕಾರಣ; ರಾಕೇಶ್ ಟಿಕಾಯತ್..!

ಗಣರಾಜ್ಯೋತ್ಸವ ವೇಳೆ ಉಂಟಾದ ಕಲಹ ಇದರ ಹಿಂದಿನ ಪಿತೂರಿಯಿಂದ ಚಳವಳಿ ಇನ್ನೇನು ಮಕಾಡೆ ಮಲಗುತ್ತದೆ ಎಂದು ಭಾವಿಸಿದವರು ಟಿಕಾಯತ್ ಎದೆನಡುಗುವಂಥ ಮಾತನಾಡಿದ್ದಾರೆ. ‘ಪೊಲೀಸರ ಗುಂಡಿಗೆ ನಾವು ಎದೆ ಕೊಡಲು ಸಿದ್ಧರಿದ್ದೇವೆ. ನಮ್ಮ ಗುಂಡಿಗೆ ಅಷ್ಟು ಗಟ್ಟಿ ಇದೆ. ನೆನಪಿಡಿ: ಭವಿಷ್ಯದಲ್ಲಿ ನಮ್ಮ ಮಕ್ಕಳು ಭಯೋತ್ಪಾದಕರಾಗಿ ಬೆಳೆಯುತ್ತಾರೆ. ಅದಕ್ಕೆ ಅವಕಾಶ ಮಾಡಿಕೊಡಬೆಡಿ.’ ಅವರ ಮಾತುಗಳು ಅವರ ತಂದೆ ಮಹೇಂದ್ರಸಿಂಗ್ ಟಿಕಾಯತ್ ಅವರ ಮಾತುಗಳಂತೆಯೇ ಇವೆ. ಪ್ರಮುಖ ಜಾಟ್ ಸಮುದಾಯದ ಈ ನಾಯಕರು ಅಂದು ಇಂದು ಮುಂದು ಎಂದೆAದೂ ಪ್ರಭಾವಿಗಳೇ. 1988 ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರನ್ನು ನಡುಗಿಸಿದ್ದು ಇದೇ ಮಹೇಂದ್ರ ಸಿಂಗ್ ಟಿಕಾಯಕತ್. ರಾಕೇಶ್ ಟಿಕಾಯತ್ ಅವರು ಕೂಡ ಮೋದಿ ಅವರ ಸರ್ಕಾರಕ್ಕೇ ಸಡ್ಡು ಹೊಡೆದಿರುವುದು ಗಮನಾರ್ಹ.

1993 ರಲ್ಲಿ ಅಂದಿನ ಪ್ರಧಾನಿ ನರಸಿಂಹರಾವ್ ಅವರ ಕೆಲವು ಯಡವಟ್ಟು ನಿರ್ಣಯಗಳ ವಿರುದ್ಧ ಧ್ವನಿ ಎತ್ತಿದ್ದ ಮಹೇಂದ್ರ ಸಿಂಗ್ ಟಿಕಾಯಕತ್ ಕಿಸಾನ್ ಪೌಝಿ ಸೇನೆಯು ದಿಲ್ಲಿಗೆ ಲಗ್ಗೆ ಇಟ್ಟಿದ್ದು ಇತಿಹಾಸ. ಅಂಥದೇ ಪರಂಪರೆ ಇಂದು ಮರುಕಳಿಸುತ್ತಿದೆ. ರಾಕೇಶ್ ಟಿಕಾಯತ್ ಅವರ ಒಂದೇ ಒಂದು ಮಾತಿಗೆ, ಅವರ ಒಂದುಕಣ್ಣೀರ ಹನಿಗೆ ಸಮಸ್ತ ಭಾರತದ ರೈತ ಸಮುದಾಯ ಅಲೆ ಅಲೆಯಾಗಿ ಪ್ರತಿಭಟನೆಯತ್ತ ಹರಿದು ಬರುತ್ತಿದೆ. ಪ್ರಧಾನಿ ಮೋದಿ ಅವರಿಗೆ ಇದೆಲ್ಲವೂ ತಿಳಿಯದಿರುವ ವಿಚಾರವಲ್ಲ. ಐತಿಹಾಸಿಕ ಕೆಂಪು ಕೋಟೆಯಲ್ಲಿ ನಡೆದ ರೈತ ಗಲಭೆ ಕುರಿತು ತನಿಖೆ ತೀವ್ರಗೊಳಿಸಲಾಗಿದೆ. ವಿಧಿವಿಜ್ಞಾನ ಪರಿಣಿತರ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪುರಾವೆಗಳನ್ನು ಕಲೆಹಾಕಿತು. ದಿಲ್ಲಿ ಕ್ರೈಂ ಬ್ರಾಂಚ್ ಪೊಲೀಸರು ಹಿಂಸಾ ಘಟನೆಯ ತನಿಖೆ ಕೈಗೊಂಡಿದ್ದಾರೆ. ಸತ್ಯ ಶೋಧನೆಗಾಗಿ ಹಲವು ತಂಡಗಳನ್ನು ಕೂಡ ರಚಿಸಲಾಗಿದೆ ಇದೆಲ್ಲವೂ ಕಾನೂನಾತ್ಮಕವಾಗಿ ಸರಿ.

ಆದರೆ ರೈತರು ಬೀಡುಬಿಟ್ಟಿರುವ ಟಿಕ್ರಿ, ಸಿಂಘು, ಗಾಜಿಪುರ ಗಡಿಪ್ರದೇಶ ಹಾಗೂ ಅವುಗಳಿಗೆ ಹೊಂದಿಕೊಂಡಿರುವ ಕೆಲವು ಪ್ರದೇಶಗಲ್ಲಿ ಅಂತರ್ಜಾಲ ಸ್ಥಗಿತಗೊಳಿಸಿ ಕೇಂದ್ರ ಗೃಹಸಚಿವಾಲಯ ಆದೇಶ ಹೊರಡಿಸಿರುವುದನ್ನು ಮೋದಿ ಅವರು ಗಮನಿಸಬೇಕು. ಉದಾತ್ತ ದೃಷ್ಟಿಯಿಂದ ಕೃಷಿ ಕಾಯಿದೆಗಳನ್ನು ತಿದ್ದುಪಡಿ ಅಥವಾ ಹಿಂಪಡೆಯುವ ಧೋರಣೆ ತೋರುವ ಮೂಲಕ ಎಲ್ಲರ ಮನದಲ್ಲಿ ಅಚ್ಚಳಿಯದ ಸ್ಥಾನಗಳಿಸಬೇಕು. ಘಾಜಿಪುರ ಗಡಿಯಲ್ಲಿನ ಪ್ರತಿಭಟನೆಯ ನೇತೃತ್ವ ವಹಿಸಿರುವ ಭಾರತೀಯ ಕಿಸಾನ್ ಒಕ್ಕೂಟ (ಬಿಕೆಯು), ರಾಕೇಶ್ ಟಿಕಾಯತ್ ಜತೆಗಿರುವ ಮೀರತ್ ವಲಯದ ಅಧ್ಯಕ್ಷ ಪವನ್ ಖಟನಾ ಜೊತೆ ಮುಕ್ತವಾಗಿ ಮಾತನಾಡಬೇಕು. ಗಣರಾಜ್ಯೋತ್ಸವ ದಿನದಂದು ಟ್ರ್ಯಾಕ್ಟರ್ ರಾಲಿಯ ವೇಳೆ ನಡೆದ ಹಿಂಸಾಚಾರ ಸಂಬಂಧ ಪತ್ರಕರ್ತರ ವಿರುದ್ಧ ದಾಖಲಿಸಿರುವ ದೇಶದ್ರೋಹ ಹಾಗೂ ಇತರ ಅಪರಾಧ ಪ್ರಕರಣಗಳನ್ನು ಕೂಡಲೇ ಹಿಂಪಡೆಯಬೇಕು. ಭಾರತದ ಸಂಪಾದಕರ ವೇದಿಕೆಯ ಆಶವೂ ಇದೇ ಆಗಿದೆ.

ತುರ್ತು ಪರಿಸ್ಥಿತಿಯಂತಹ ಸಂದರ್ಭದಲ್ಲೂ ಪತ್ರಕರ್ತರ ವಿರುದ್ಧ ಕ್ರಮ ಕೈಗೊಳ್ಳುವುದು ವಿಷಾದಕರ ಸಂಗತಿಯಾಗಿದೆ. ಇಡೀ ಜಗತ್ತಿನ ಯಾವುದೇ ಪ್ರಜಾಪ್ರಭುತ್ವ ರಾಷ್ಟçವು ತನ್ನ ಶಾಸನದಲ್ಲಿ ದೇಶದ್ರೋಹಕ್ಕೆ ಅವಕಾಶ ಕಲ್ಪಿಸಿಕೊಡುವುದಿಲ್ಲ. ಹೀಗಿರುವಾಗ ಪತ್ರಕರ್ತರ ವಿರುದ್ಧ ಈ ಆರೋಪ ಹೊರಿಸುವುದನ್ನು ನಾವು ಒಪ್ಪುವುದಿಲ್ಲ ಎನ್ನುವುದು ಪ್ರೆಸ್ ಕ್ಲಬ್ ಆಫ್ ಇಂಡಿಯಾದ ಅಧ್ಯಕ್ಷ ಆನಂದ್ ಕೆ ಸಹಾಯ್ ವಾದ. ರಾಷ್ಟç ರಾಜಧಾನಿಯಲ್ಲಿ ನಡೆದ ಹಿಂಸಾಚಾರ ಸಂಬಂಧ ದೇಶದ್ರೋಹ ಹಾಗೂ ತಪ್ಪು ಮಾಹಿತಿ ವರದಿ ಮಾಡಿ, ಹಿಂಸಾಚಾರಕ್ಕೆ ಪ್ರಚೋದಿಸಿದ್ದಾರೆ ಎಂಬ ಆರೋಪದಡಿ ಆರು ಮಂದಿ ಪತ್ರಕರ್ತರಾದ ರಾಜ್ದೀಪ್ ಸರ್ದೇಸಾಯಿ, ನಿರ್ಮಲ್ ಪಾಂಡೆ, ಜಾಫರ್ ಆಘಾ, ಆನಂದ್ ನಾಥ್, ವಿನೋದ್ ಜೋಸ್ ಮತ್ತು ಪರೇಶ್ ನಾಥ್ ವಿರುದ್ಧ ನೊಯಿಡಾ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಹರಿಯಾಣ ಮತ್ತು ಮಧ್ಯಪ್ರದೇಶದಲ್ಲೂ ಪತ್ರಕರ್ತರ ವಿರುದ್ಧ ಕೇಸ್ ದಾಖಲಿರುವುದು ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಇದು ಹೀಗೆ ಮುಂದುವರಿದರೆ ದೇಶದ ಆರ್ಥಿಕ ಸ್ಥಿತಿ ಎತ್ತ ಸಾಗುತ್ತದೋ..?!
ವರ್ತಮಾನದ ಒಗಟು: ಪ್ರಜಾ ಪ್ರಭುತ್ವದ ಆಶಯ ಒಂದಾದರೆ ಅದರ ವಿರುದ್ಧದ ಪ್ರವಾಹ ಮತ್ತೊಂದು ಬದಿಯಾಗಿದೆ. ಇದರ ನಡುವೆ ಅದೆಷ್ಟೋ ಅಮಾಯಕರು ಬಲಿಯಾಗುತ್ತಿರುವುದೇ ವೈರುಧ್ಯ