ಬುರ್ಜ್ ಖಲೀಫಾದಲ್ಲಿ ರಾರಾಜಿಸೋ ಕಿಚ್ಚನ 3 ನಿಮಿಷದ ಲೇಸರ್ ಟೀಸರ್ ಗೆ ವೆಚ್ಚ ಮಾಡಿದ್ದು ಎಷ್ಟು ಗೊತ್ತಾ ..?

  • ಅನಿತಾ ಬ್ರಹ್ಮಾವರ ( ದುಬೈ ಪ್ರತಿನಿಧಿ)

ದುಬೈ : ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣಾ ಅಬ್ಬರ ಜೋರಾಗಿದೆ. ದುಬೈನ ಬುರ್ಜ್ ಖಲೀಫಾದಲ್ಲಿಂದು ವಿಕ್ರಾಂತ್ ರೋಣಾನ ಟೀಸರ್ ರಾರಾಜಿಸಲಿದ್ದು, ಹೊಸ ದಾಖಲೆ ಬರೆಯಲು ಸಜ್ಜಾಗಿದೆ.

ಕಿಚ್ಚ ಚಿತ್ರರಂಗಕ್ಕೆ ಎಂಟ್ರಿಕೊಟ್ಟು 25 ವರ್ಷ ಕಳೆದಿದೆ. ಈ ಹಿನ್ನೆಲೆಯಲ್ಲಿ ಕಿಚ್ಚನ ಬೆಳ್ಳಿ ಹಬ್ಬವನ್ನು ದಬೈನಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ವಿಕ್ರಾಂತ್ ರೋಣಾ ಸಿನಿಮಾ ತಂಡ ಕಿಚ್ಚನ ಬೆಳ್ಳಿಹಬ್ಬಕ್ಕೆ ವಿಶೇಷ ಕೊಡುಗೆಯನ್ನು ನೀಡಲು ಸಜ್ಜಾಗಿದೆ. ಇಂದು ಸುದೀಪ್ ನಟನೆಯ ಬಹು ನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣಾದ ಹೆಸರು ಬಿಡುಗಡೆಯಾಗಲಿದ್ದು, 3 ನಿಮಿಷಗಳ ಲೇಸರ್ ಟೀಸರ್ ಕೂಡ ಬಿಡುಗಡೆಯಾಗಲಿದೆ.

ಕಿಚ್ಚನ ಬೆಳ್ಳಿ ಹಬ್ಬದ ಆಚರಣೆ ಕಾರ್ಯಕ್ರಮವು ಬುರ್ಜ್ ಖಲೀಫಾದಲ್ಲಿ ಸುಮಾರು 45 ನಿಮಿಷಗಳ ಕಾಲ ನಡೆಯಲಿದ್ದು, 3 ನಿಮಿಷಗಳ ಲೇಸರ್ ಟೀಸರ್ ಗೆ ಚಿತ್ರತಂಡ ಬರೋಬ್ಬರಿ 70 ಲಕ್ಷ ರೂಪಾಯಿಗಳನ್ನು ವಿನಿಯೋಗಿಸುತ್ತಿದೆ.

ಬುರ್ಜ್ ಖಲೀಫಾದಲ್ಲಿ ರಾರಾಜಿಸಲಿರುವ ಟೀಸರ್ ನ್ನು ಸುಮಾರು ಒಂದೂವರೆ ಕಿಲೋ ಮೀಟರ್ ದೂರದಿಂದಲೇ ಶೂಟಿಂಗ್ ಮಾಡಲಾಗುತ್ತಿದ್ದು, 6 ಕ್ಯಾಮರಾ ಯೂನಿಟ್ ಗಳನ್ನು ಬಳಕೆ ಮಾಡಲಾಗುತ್ತಿದೆ.

ಕಿಚ್ಚಿನ ಬೆಳ್ಳಿಹಬ್ಬ ಕಾರ್ಯಕ್ರಮದಲ್ಲಿ ಸುದೀಪ್ ಪತ್ನಿ ಪ್ರಿಯ ಹಾಗೂ ಪುತ್ರಿ ಭಾಗಿಯಾಗಲಿದ್ದಾರೆ. ಕಿಚ್ಚನ ಬೆಳ್ಳಿ ಹಬ್ಬದ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಕೇವಲ ಕಿಚ್ಚ ಅಭಿಮಾನಿಗಳಷ್ಟೇ ಅಲ್ಲಾ ದುಬೈನಲ್ಲಿ ನೆಲೆಸಿರುವ ಕನ್ನಡಗಿಗರು ಕೂಡ ತುದಿಗಾಲಿನಲ್ಲಿ ನಿಂತಿದ್ದಾರೆ.

Comments are closed.