ಸೋಮವಾರ, ಏಪ್ರಿಲ್ 28, 2025
HomeBreakingಯುದ್ಧರಂಗದಲ್ಲಿ ಗೆದ್ದು ಸೋತು ಹೋದ ಯೋಧನ ನೆನೆದು..!

ಯುದ್ಧರಂಗದಲ್ಲಿ ಗೆದ್ದು ಸೋತು ಹೋದ ಯೋಧನ ನೆನೆದು..!

- Advertisement -

ರಾಜ್ಯ ರಾಜಕೀಯ ಇತಿಹಾಸದಲ್ಲಿ ಎಷ್ಟೋ ವಿವಾದಿತ ಹೆಸರುಗಳು ಕಾಣಸಿಗುತ್ತವೆ. ಹಾಗೆ ಕಂಡು ಹೀಗೆ ನುಸುಳಿ ಹಾಗೆ ಮರೆಯಾಗಿ ಬಿಡುತ್ತವೆ. ಆದರೆ ಎಚ್. ವಿಶ್ವನಾಥ್ ಮಾತ್ರ ಮತ್ತೆ ಮತ್ತೆ ನೆನಪಾಗಿ ಉಳಿಯುತ್ತಾರೆ. ಅವರು ಯಾವುದೇ ಪಕ್ಷದಲ್ಲಿರಲಿ, ಯಾವುದೇ ಕ್ಷೇತ್ರದ ಶಾಸಕನಾಗಿರಲಿ, ಮೇಲ್ಮನೆ ಅಥವಾ ಕೆಳಮನೆಯಲ್ಲೇ ಇರಲಿ ಅಲ್ಲಿ ಅವರದೇ ಗತ್ತು ಇರುತ್ತದೆ. ಆರ್ಭಟಾವಸ್ಥೆಯ ತೀರ ಸರಳ ಧ್ವನಿಯ ಮಾತಿನ ಭರಾಟೆ ಇದ್ದೇ ಇರುತ್ತದೆ.

ನಿಮಗೆ ಅವರೊಬ್ಬ ಬರೀ ರಾಜಕಾರಣಿ ಅನ್ನಿಸಿದರೆ ಸಾಲದು. ಅವರ ಹೃದಯದಲ್ಲಿ ಒಬ್ಬ ಕವಿಯೂ ಇದ್ದಾನೆ..! ಇದಕ್ಕೆ ಅವರ ಹಲವು ಕೃತಿಗಳೇ ಸಾಕ್ಷಿ. ಇಂದಿರಾ – ಅರಸು ನಾಯಕತ್ವದ ಸಮರ್ಥನೆಯನ್ನು ನೆನಪಿಸುವ ‘ತುರ್ತು ಪರಿಸ್ಥಿತಿ-ಆಪತ್ಸ್ಥಿತಿಯ ಆಲಾಪಗಳು’, ಜೀವನದ ಕಷ್ಟ, ಬಡತನ, ಹಾಸ್ಯ, ರಾಜಕೀಯ ಸಿದ್ಧಾಂತಗಳ ಬಗ್ಗೆ ಚರ್ಚಿಸುವ ‘ಹಳ್ಳಿ ಹಕ್ಕಿಯ ಹಾಡು; ಭೂ ಸ್ವಾಧೀನ ಕುರಿತ ಪುನರಾವಲೋಕಿಸಲು ನೆರವಾಗುವ ‘ಸಿರಿ ಭೂಮಿ’ ಸಂಸದೀಯ ರಾಜಕೀಯ ಮತ್ತು ಅದರ ಇತಿಹಾಸ ಚಿತ್ರಿಸುವ ‘ದಿ ಟಾಕಿಂಗ್ ಶೋ’, ಪ್ರಜಾ ಪ್ರಭುತ್ವಕ್ಕಾಗಿ ಗ್ರೀಕ್ ದೇಶವು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸುವ ‘ಅಥೆನ್ಸ್ ರಾಜ್ಯಾಡಳಿತ’ ಕೃತಿಗಳು ವಿಶ್ವನಾಥ್ ಅವರೊಳಗೆ ಒಬ್ಬ ಸೃಜನಶೀಲ ಬರಹಗಾರನಿದ್ದಾನೆ ಎನ್ನುವುದನ್ನು ನೆನಪಿಸುತ್ತವೆ.

ಜೊತೆ ಜೊತೆಗೆ ನಗೆ ಮಿಶ್ರಿತ ಗಡಸು ಧ್ವನಿ, ಕತ್ತಲಿಗೇ ಸಡ್ಡುಹೊಯುವ ಬಣ್ಣ, ಕ್ಯಾಮೆರಾ ಲೈಟಿಗೆ ಥಳಕ್ಕನೆ ಹೊಳೆಯುವ ಬೋಳು ತಲೆ, ಅತ್ತ ಅತಿ ಎತ್ತರವಲ್ಲದ, ಇತ್ತ ಅತಿ ಕುಳ್ಳ ಅಲ್ಲದ ನಿಡುಕಾಯ ಹಾಗೂ ಟಿಪಿಕಲ್ ಶೈಲಿಯ ಮೈಸೂರು ಪ್ರಾಂತ್ಯದ ಭಾಷಾ ಸೊಗಡು, ಹಿಡಿದ ಕಾರ್ಯವನ್ನು ಸಾಧಿಸಿಯೇ ತೀರುವ ದ್ರಾವಿಡಿಯನ್ನರ ಹಠವೇ ಎರಕ ಹೊಯ್ದಂತಿರುವ ವಿಶ್ವನಾಥ್ ಅವರು ಮನಸು ಮಾಡಿದ್ದರೆ ಇನ್ನೂ ಎತ್ತರಕ್ಕೆ ಬೆಳೆಯಬಹುದಿತ್ತ. ಆದರೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ಅವರು ಮಾಡಿಕೊಳ್ಳುವ ಯಡವಟ್ಟುಗಳು ಅವರನ್ನು ಬೆತ್ತಲು ಮಾಡಿವೆ. ಸಾರಾ ಮಹೇಶ್ ಜೊತೆ ನಡೆಸಿದ ವಾಕ್ಸಮರ ಅವರನ್ನು ಹತ್ತಿರದಿಂದ ಬಲ್ಲವರಿಗೂ ಸೋಜಿಗ ಉಂಟು ಮಾಡುತ್ತದೆ. ನಂಬಿದ ತತ್ವ, ಸಿದ್ಧಾಂತಗಳಿಂದ ಹೀರೊ ಆಗಬೇಕಿದ್ದ ವಿಶ್ವನಾಥ್ ಬೇರೇನೋ ಆಗಿದ್ದಾರೆ ಅನ್ನಿಸಿದೆ. ಇದನ್ನು ವಿಧಿ ಅನ್ನಬೇಕೋ, ವಿಪರ್ಯಾಸ ಅನ್ನಬೇಕೋ ಗೊತ್ತಿಲ್ಲ. ಅವರ ಆವೇಶದ ಒಡಕು ಮಾತು, ಅಪ್ರಿಯವಾದ ಸತ್ಯಪರ ನಿಲುವಿನಿಂದಾಗಿ ಅಕ್ಷರಶಃ ಜೀರೊ ಆಗಿರುವುದೇ ರಾಜಕಾರಣದ ವೈಚಿತ್ರ್ಯ.!

ಇದಕ್ಕೆ ಒಂದು ಸಣ್ಣ ಫ್ಲಾಶ್ ಬ್ಯಾಕ್ ಅಗತ್ಯ. ಅವರ ಅದೆಸ್ಟೋ ಸೋಲು, ಹಲವಾರು ಗೆಲವುಗಳು ಒಂದು ಮೈಲುಗಲ್ಲಾದರೆ ಸಿದ್ದರಾಮಯ್ಯನವರೊಡನೆ ಆಗಾಗ ಕಾಲ್ಕೆರೆದು ಆಖಾಡಕ್ಕೆ ಕರೆಯುವುದು ಬೆರಗು ಹುಟ್ಟಿಸುತ್ತದೆ. ಜೆಡಿಎಸ್ ಒಳಗೆ ಇದ್ದಾಗ ಒಂದು, ಕಾಂಗ್ರೆಸ್ನಲ್ಲಿ ಇದ್ದಾಗ ಒನ್ನೊಂದು ನುಡಿ ಕಿಡಿ ಸಿಡಿಸುವುದು ಒಂದು ಹಂತವಾದರೆ, ಡಿಕೆ ಶಿವಕುಮಾರ್ ಜೊತೆ ನಡೆದ ವಾಗ್ವಾದ, ಜೆಎಚ್ ಪಟೇಲರ ಜೊತೆ ಸಮಾಜವಾದಿ ನೆಲೆಯ ಒಡನಾಟ, ಅರಸು ಜೊತೆ ಅವರಿಗಿದ್ದ ಗುರುಭಕ್ತಿ ಹಾಗೂ ಗುಂಡೂರಾಯ ಮಾತಿನ ಒರಸೆಯ ಛಾಯೆ ಇವರಲ್ಲಿ ಕಂಡರೂ ಒಂದು ಸಣ್ಣ ಪ್ರಮಾದ ಎಲ್ಲವನ್ನೂ ಮರೆ ಮಾಚುತ್ತದೆ. ಹಾಗಂತ ವಿಶ್ವನಾಥ್ ಸತ್ಯಹರಿಶ್ಚಂದ್ರರಿಂದಾಗಲಿ, ಅಪ್ಪಟ ಪ್ರಾಮಾಣಿಕ ರಾಜಕಾರಣಿ ಎನ್ನುವುದಾಗಲಿ ಸರಿಯಲ್ಲ. ಉಪ್ಪು ಖಾರ ತಿಂದ ದೇಹ. ಎಲ್ಲಾ ವೈರುಧ್ಯಗಳನ್ನು ಆಪೋಶನ ಮಾಡಿಕೊಳ್ಳುವುದು ಸಹಜ. ವಿಶ್ವನಾಥ್ ಅವರು ಇದಕ್ಕಿಂತ ಹೊರತಾಗಿಲ್ಲ.

ಈ ಹಿಂದೆ ಅವರು ಮಾಡಿದ ರಾಜಕಾರಣ ಅದೇನೇ ಇರಲಿ; ಇತ್ತೀಚೆಗೆ ಮೈತ್ರಿ ಸರ್ಕಾರವನ್ನು ‘(ಅ)ರಾಜತಾಂತ್ರಿಕ’ ಮಾರ್ಗದಿಂದ ನೆಲಕ್ಕುರುಳಿಸಿದ ಪರಿ ಅವರ ರಾಜಕಾರಣಕ್ಕೆ ಒಂದು ಕಪ್ಪುಚುಕ್ಕೆ. ಇದನ್ನೇ ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಿರುವುದೂ ಅವರ ಪ್ರಾಮಾಣಿಕತೆಯನ್ನು ಗುಮಾನಿಯಿಂದ ನೋಡುವಂತೆ ಮಾಡುತ್ತದೆ. ಹದಿನೇಳು ಶಾಸಕರ ಜೊತೆ ಬಾಂಬೆ ಬಾಯ್ಸ್ ಥರ ಮೆರೆದು, ಬಿ.ಎಸ್.ಯಡಿಯೂರಪ್ಪ ಅವರ ಸರ್ಕಾರ ಅಧಿಕಾರಕ್ಕೆ ಬರಲು ಕಾರಣಪುರುಷರಾಗಿದ್ದನ್ನು ಬೇರೆ ಹೇಳಬೇಕಿಲ್ಲ. ಆನಂತರ ವಿಶ್ವನಾಥ್ ಅವರನ್ನು ಒಂದರ ನಂತರ ಒಂದು ಅಪಶಕುನಗಳು ಬೆನ್ನಟ್ಟಿದ್ದು ಅವರ ವಿರೋಧಿಗಳಿಗೆ ಸಂತಸ ಉಂಟುಮಾಡಿರಲಿಕ್ಕೂ ಸಾಕು.ಮೊಟ್ಟ ಮೊದಲು ಸ್ಪೀಕರ್ ಅವರು ವಿಶ್ವನಾಥ್ ಅವರ ಜೊತೆ ಅನೇಕರನ್ನೂ ಪಕ್ಷಾಂತರ ಕಾಯಿದೆಯಡಿ ಅನರ್ಹಗೊಳಿಸಿದ್ದರು. ಮೊದಲೇ ಹಠಮಾರಿ ಸ್ವಭಾವದ ವಿಶ್ವನಾಥ್ ಸಹಜವಾಗಿಯೇ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೆಲ್ಲವನ್ನೂ ಕಾನೂನಾತ್ಮಕವಾಗಿ ಆಲಿಸಿದ ಹೈಕೋರ್ಟ್, ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆ ಆಗುವ ತನಕ ಅನರ್ಹತೆ ಮುಂದುವರಿಯಲಿದೆ ಎಂದು ಆದೇಶ ನೀಡಿತ್ತು.

ಕಾಲ ಚಕ್ರದಡಿ ಮತ್ತೊಮ್ಮೆ ಉಪಚುನಾವಣೆ ಘೋಷಣೆಯಾಗಿ, ಹುಣುಸೂರಿನಿಂದ ಸ್ಪರ್ಧಿಸಿದ್ದ ವಿಶ್ವನಾಥ್ ವಿರೋಧಿಗಳ ಖೆಡ್ಡಾಕ್ಕೆ ಬಿದ್ದು ಸೋತು ಸುಣ್ಣವಾಗಿದ್ದು ಇಂದಿಗೂ ನೆನಪಿಟ್ಟುಕೊಳ್ಳುವಂತೆ ಮಾಡಿದೆ. ಕೊಟ್ಟಮಾತು ಉಳಿಸಿಕೊಳ್ಳಲು ಸದಾ ಮುಂದಿರುವ ಯಡಿಯೂರಪ್ಪ ಮತ್ತೊಮ್ಮೆ ಇವರನ್ನು ವಿಧಾನಪರಿಷತ್ಗೆ ನಾಮನಿರ್ದೇಶನ ಮಾಡಿಸಿದ್ದರು. ಈ ಮೂಲಕವೂ ಅವರಿಗೆ ಮಂತ್ರಿ ಸ್ಥಾನ ಸಿಗುವ ಚಾನ್ಸ್ ಇದೆ ಎಂದು ಅವರ ಅಭಿಮಾನಿಗಳು ಖುಷಿ ಖುಷಿಯಾಗಿದ್ದರು. ವಿಶ್ವನಾಥ್ ಮಂತ್ರಿ ಆಗ್ತಾರೆ ಎನ್ನುವ ಸುದ್ದಿ ಹರುಡುತ್ತಿದ್ದಂತೆಯೇ ಇವರಿಗೆ ಮಂತ್ರಿ ಸ್ಥಾನ ನೀಡುವುದನ್ನು ಪ್ರಶ್ನಿಸಿ, ಇದೇ ಹೈಕೋರ್ಟ್ನಲ್ಲಿ ಖಾಸಗಿ ದೂರು ದಾಖಲಾಗಿತ್ತು. ಇದರ ವಿಚಾರಣೆ ನಡೆಸಿದ ಹೈಕೋರ್ಟ್, ನಾಮನಿರ್ದೇಶನಗೊಂಡರೆ ಸಚಿವನಾಗಲು ಸಾಧ್ಯವಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕನಾಗಿ ಆಯ್ಕೆ ಆಗಿ ಬಂದರೆ ಮಾತ್ರ ಮಂತ್ರಿ ಆಗಲು ಸಾಧ್ಯ ಎನ್ನುವ ಆದೇಶ ನೀಡಿತ್ತು. ಅಲ್ಲಿಗೂ ಸುಮ್ಮನಾಗದ ವಿಶ್ವನಾಥ್ ಸುಪ್ರೀಮ್ನಲ್ಲಿ ಇದನ್ನು ಪ್ರಶ್ನಿಸಿದ್ದರು. ಹಣೆಬರಹ ಕಟ್ಟರೆ ಏನಾಗಬಾರದೋ ಅದೇ ಅಲ್ಲೂ ಆಯಯಿತು. ಹೈಕೋರ್ಟ್ ನೀಡಿದ ಆದೇಶವನ್ನೇ ಸುಪ್ರೀಮ್ ಎತ್ತಿ ಹಿಡಿದಿದ್ದರಿಂದ ವಿಶ್ವನಾಥ್ ಅವರಲ್ಲಿ ಚಿಗುರಿದ ಆಸೆಯ ಒರತೆ ಇದೀಗ ಬತ್ತಿಹೋಗಿದೆ..!

ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಬಂದ ಎಚ್.ವಿಶ್ವನಾಥ್ ಮತ್ತು ಮುನಿರತ್ನ ಅವರಿಗೆ ಸಚಿವ ಸ್ಥಾನ ಒಲಿಯಲಿಲ್ಲ. ಸಚಿವ ಸ್ಥಾನಕ್ಕಾಗಿ ಭಾರೀ ಒತ್ತಡವನ್ನು ಹೇರಿದರೂ, ವಿಶ್ವನಾಥ್ಗೆ ಸ್ಥಾನ ಸಿಗಲಿಲ್ಲ. ‘ರಾಜ್ಯದಲ್ಲಿ ಯಾವ ನಾಯಕನಿಗೂ ಕೃತಜ್ಞತೆ ಇಲ್ಲ. ಆ ಸಿದ್ದರಾಮಯ್ಯನನ್ನು ಕರೆದುಕೊಂಡು ಬಂದ್ವಿ, ಅವರೂ ಹೇಳಲಿಲ್ಲ. ಯಡಿಯೂರಪ್ಪಗೆ ತ್ಯಾಗ ಮಾಡಿದ್ವಿ ಅವರೂ ಹೇಳಲಿಲ್ಲ. ಯಡಿಯೂರಪ್ಪ ತಮ್ಮ ನಾಲಿಗೆ ಕಳೆದುಕೊಂಡಿದ್ದಾರೆ. ತಾವು ಕೊಟ್ಟಿದ್ದ ಮಾತು ಕಳೆದುಕೊಂಡಿದ್ದಾರೆ ‘ನಾಲಿಗೆ, ಮಾತು ಎರಡೂ ಕಳೆದುಕೊಂಡ ಸಿಎಂ ಯಡಿಯೂರಪ್ಪ’ ಅಂತ ಆಕ್ರೋಶ ವ್ಯಕ್ತ ಪಡಿಸುತ್ತಿರುವುದು ಯಾರ ಕಿವಿಗೂ ಬೀಳುತ್ತಿಲ್ಲ. ಒಕ್ಕಲಿಗರು ವರ್ಸಸ್ ಕುರುಬರು ಅಥವಾ ಲಿಂಗಾಯತರು ವರ್ಸಸ್ ಕುರುಬರು. ಹೀಗೆ ಬೇರೆ ಯಾವುದೋ ರೂಪ ಪಡೆಯುವ ಸಾಧ್ಯತೆ ಇರುತ್ತದೆ.

ಅದೇ ವಿಶ್ವನಾಥ್ ವರ್ಸಸ್ ಸಿದ್ದರಾಮಯ್ಯ ಎಂದಾಗಿಬಿಟ್ಟರೆ ಇದರಿಂದ ಜೆಡಿಎಸ್ಗೆ ಹಾನಿ ಆಗುವುದಿಲ್ಲ ಎಂಬ ಲೆಕ್ಕಾಚಾರ ಮಾಡುವ ಕಾಲವೊಂದಿತ್ತು. ದೇವೇಗೌಡರು ಕುರುಬರ ವಿರೋಧಿ ಎಂಬ ಆರೋಪವನ್ನು ದೂರ ಮಾಡಿಕೊಳ್ಳುವುದಕ್ಕಾಗಿಯೇ ಕುರುಬ ಸಮುದಾಯದ ವಿಶ್ವನಾಥ್ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡ್ತಿದ್ದು ಈಗ ಇತಿಹಾಸವಾಗಿದೆ. ವಿಶ್ವನಾಥ್ ಅವರು ಮೈಸೂರು ಭಾಗದವರು. ಜೆಡಿಎಸ್ಗೆ ಭದ್ರವಾದ ನೆಲೆ ಇರುವ ಪ್ರದೇಶಕ್ಕೆ ಸೇರಿದವರೊಬ್ಬರನ್ನು ಆಯ್ಕೆ ಮಾಡಿದ್ದು, ಗೌಡರ ಕುಟುಂಬದ ಹೊರಗಿನಿಂದ ಒಬ್ಬರನ್ನು ಮುಂಚೂಣಿಯಲ್ಲಿ ನಿಲ್ಲಿಸಿದ್ದು. ಇಂಥ ಹಲವು ಲೆಕ್ಕಾಚಾರಗಳೂ ಕಾಲ ಗರ್ಭದಲ್ಲಿ ಹುದುಗಿ ಹೋಗಿವೆ. ಮೊನ್ನೆ ಮೊನ್ನೆಯಷ್ಟೇ ಇದೇ ವಿಶ್ವನಾಥ್ ಅವರು ದಿಲ್ಲಿಗೂ ಹೋಗಿದ್ದರು. ಬಿಜೆಪಿ ವರಿಷ್ಠರನ್ನೂ ಕಂಡು ಬಂದರು. ಮಂತ್ರಿ ಮಾಡಿ ಸಾರ್ ಎನ್ನುವ ಅವರ ಮನವಿಯೇ ಬಿಜೆಪಿ ನಾಯಕರಿಗೆ ಇರಿಸುಮುರಿಸು ತರಿಸುತ್ತದೆ.

ಒಂದು ಕಡೆ ಕೋರ್ಟ್ ಆದೇಶ, ಇನ್ನೊಂದು ಕಡೆ ಶತ್ರು ಪಡೆ ಅವರನ್ನು, ಅವರ ಸಾಮರ್ಥ್ಯವನ್ನು ಕುಗ್ಗಿಸಿದಂತೆ ಕಾಣುತ್ತಿಲ್ಲ. ಇವರೊಬ್ಬನ್ನು ಬಿಟ್ಟು, ಇವರ ಜೊತೆಗೆ ಬಿಜೆಪಿ ಸರ್ಕಾರವನ್ನು ರಚಿಸಲು ನೆರವಾದವರಿಗೆಲ್ಲಾ ಉತ್ತಮ ಸ್ಥಾನ ಸಿಕ್ಕಿದೆ. ಇವರ ಸ್ನೇಹಿತರೆಲ್ಲಾ ಸಂಭ್ರಮಾಚರಣೆಯಲ್ಲಿ ಗೂಟದ ಕಾರಲ್ಲಿ ಝುಮ್ಮನೆ ಓಡಾಡುತ್ತಿದ್ದಾರೆ. ವಿಶ್ವನಾಥ್ ಮಾತ್ರ ಹೀಗೆ ಯುದ್ಧರಂಗದಲ್ಲಿ ಗೆದ್ದು ಸೋತು ಹೋದ ವಯೋವೃದ್ಧನಂತೆ ಮತ್ತೆ ಮತ್ತೆ ಅಧಿಕಾರದ ಖಡ್ಗ ಹಿಡಿಯಲು ಶತ ಪ್ರಯತ್ನ ಮಾಡುತ್ತಲೇ ಇದ್ದಾರೆ. ಎಸ.ಎಲ್. ಧರ್ಮೇಗೌಡ ಅವರ ನಿಧನದಿಂದ ತೆರುವಾಗಿದ್ದ ಸ್ಥಾನ ವಿಧಾನ ಪರಿಷತ್ ಜೆಡಿಎಸ್ ಸದಸ್ಯರಾಗಿದ್ದ ಎಸ್.ಎಲ್. ಧರ್ಮೇಗೌಡ ಅವರ ನಿಧನದಿಂದ ತೆರುವಾಗಿದ್ದ ಸ್ಥಾನಕ್ಕೆ ಕೇಂದ್ರ ಚುನಾವಣಾ ಆಯೋಗ ಚುನಾವಣೆ ದಿನಾಂಕವನ್ನು ಘೊಷಿಸಿದೆ. ಮಾರ್ಚ್ 15 ರಂದು ಚುನಾವಣೆ ನಡೆಯಲಿದೆ. ಟಿಕೆಟ್ಗಾಗಿ ವಿಶ್ವನಾಥ್ ಸಿಎಂ ಬಳಿ ಸುಳಿದಾಡುತ್ತಿದ್ದಾರೆ ಎನ್ನುವ ಸುದ್ದಿಯೂ ಹೊರ ಬಿದ್ದಿದೆ. ಇದು ಸತ್ಯವೋ, ಮಿಥ್ಯವೋ ಅನ್ನುವುದಕಿಂತ ವಿಶ್ವನಾಥ್ ಅವರ ಜೀವನದಲ್ಲಿ ಮತ್ತೊಂದು ರಾಜಕೀಯ ಸಂಚಲನವಾಗಲಿದೆಯೇ, ಬಲ್ಲವರಾರು..?

ವರ್ತಮಾನದ ಒಗಟು: ಇರುವಾಗ ಎಲ್ಲಾ ನೆಂಟರು, ಇಲ್ಲದಿರುವಾಗ ಯಾರೂ ಇಲ್ಲ ಅನ್ನುವ ಫಿಲಾಸಫಿಗೆ ರಾಜಕೀಯದ ಆಸೆಯೊಂದು ಮರು ವ್ಯಾಖ್ಯಾನ ಮಾಡಲು ಹವಣಿಸುತ್ತಿದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular