ಶಿವಮೊಗ್ಗ : ಅದು ಮಲೆನಾಡ ಹೆಬ್ಬಾಗಿಲು. ರಾಜ್ಯದ ರಾಜಕೀಯಕ್ಕೆ ನಾಲ್ಕು ಮಂದಿ ಮುಖ್ಯಮಂತ್ರಿಗಳನ್ನು ಕೊಟ್ಟ ಜಿಲ್ಲೆ. ಆದ್ರೆ ಆ ಜಿಲ್ಲೆಯಿಂದ ಮುಖ್ಯಮಂತ್ರಿಗಳಾದ ಯಾರೂ ಕೂಡ ಇದುವರೆಗೂ ತಮ್ಮ ಅಧಿಕಾರ ಅವಧಿಯನ್ನು ಪೂರ್ಣಗೊಳಿಸಿಲ್ಲ. ಇದು ಶಿವಮೊಗ್ಗದ ದುರಂತ ನಾಯಕರ ಸ್ಟೋರಿ.

ಹೌದು, ರಾಜ್ಯ ರಾಜಕೀಯಕ್ಕೂ ಶಿವಮೊಗ್ಗ ಜಿಲ್ಲೆಗೂ ಅವಿನಾಭಾವ ಸಂಬಂಧವಿದೆ. ಕಡಿದಾಳ್ ಮಂಜಪ್ಪ ಅವರಿಂದ ಹಿಡಿದು ಇಂದಿನ ಬಿ.ಎಸ್.ಯಡಿಯೂರಪ್ಪ ಅವರ ವರೆಗೂ ರಾಜ್ಯ ರಾಜ್ಯಕೀಯದಲ್ಲಿ ಪ್ರಾಬಲ್ಯವನ್ನು ಮರೆದಿದ್ದಾರೆ. ಆದರೆ ಜಿಲ್ಲೆಯಿಂದ ಆಯ್ಕೆಯಾದ ನಾಲ್ವರು ಮುಖ್ಯಮಂತ್ರಿಗಳಾಗಿದ್ದಾರೆ. ಆದರೆ ಯಾರೂ ಕೂಡ ತಮ್ಮ ಅಧಿಕಾರದ ಅವಧಿ ಯನ್ನು ಪೂರ್ಣಗೊಳಿಸಿಲ್ಲ. ಅರ್ಧದಲ್ಲಿಯೇ ತಮ್ಮ ಅಧಿಕಾರವನ್ನು ತ್ಯೆಜಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹಾರೋಹಳ್ಳಿಯಲ್ಲಿ ಜನಿಸಿದ್ದ ಸ್ವಾತಂತ್ರ್ಯ ಹೋರಾಟಗಾರ, ರೈತ ಪರ ಹೋರಾಟಗಾರ ಕಡಿದಾಳ್ ಮಂಜಪ್ಪ ಅವರು ರಾಜ್ಯ ಮೂರನೇ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ಶಿವಮೊಗ್ಗ ಜಿಲ್ಲೆಯನ್ನು ಪ್ರತಿನಿಧಿಸಿದ ಮೊದಲ ಮುಖ್ಯಮಂತ್ರಿ ಅನ್ನೋ ಹೆಗ್ಗಳಿಕೆ ಕಡಿದಾಳ್ ಮಂಜಪ್ಪ ಅವರಿಗೆ ಸಲ್ಲುತ್ತದೆ. 1956 ಅಗಸ್ಟ್ 19ರಂದು ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದ ಕಡಿದಾಳ್ ಮಂಜಪ್ಪ ಅವರು ಅದೇ ವರ್ಷ (1956 ) ಅಕ್ಟೋಬರ್ 31ರಂದು ರಾಜಕೀಯದಲ್ಲಾದ ಬದಲಾವಣೆಯ ಹಿನ್ನೆಲೆಯಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಕೇವಲ 75 ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದರು.

ಕಡಿದಾಳ್ ಮಂಜಪ್ಪ ಅವರ ನಂತರದಲ್ಲಿ ಶಿವಮೊಗ್ಗ ಜಿಲ್ಲೆಯಿಂದ ಸಿಎಂ ಆದ ಖ್ಯಾತಿ ಎಸ್.ಬಂಗಾರಪ್ಪ ಅವರಿಗೆ ಸಲ್ಲುತ್ತದೆ. 1990 ಅಕ್ಟೋಬರ್ 17ರಂದು ರಾಜ್ಯದ ಮುಖ್ಯಮಂತ್ರಿ ಯಾಗಿ ಅಧಿಕಾರ ಸ್ವೀಕರಿಸಿದ್ದ ಬಂಗಾರಪ್ಪ1992ರ ನವೆಂಬರ್ 19ರ ವರೆ ಮಾತ್ರವೇ ಅಧಿಕಾರದಲ್ಲಿದ್ದರು. ತನಕ ಕಾರ್ಯ ನಿರ್ವಹಿಸಿದರು. ರಾಜೀವ ಗಾಂಧಿ ಅವರ ನಂಬುಗೆ ಗಳಿಸಿದ್ದ ಬಂಗಾರಪ್ಪ, ವೀರೇಂದ್ರ ಪಾಟೀಲ್ ಅವರನ್ನು ಹುದ್ದೆಯಿಂದ ಕೆಳಗಿಳಿಸಿ, ಸಿಎಂ ಪಟ್ಟ ಅಲಂಕರಿಸಿದ್ದರು. ಆದರರೆ ರಾಜೀವ ಗಾಂಧಿ ನಿಧನದ ನಂತರ ಸೀತಾರಾಮ್ ಕೇಸರಿ ಅವರು ಬಂಗಾರಪ್ಪ ಅವರನ್ನು ಹುದ್ದೆಯಿಂದ ಕೆಳಗಿಸಿದ್ದರು. ಬಂಗಾರಪ್ಪ ಅವಧಿ ಕೇವಲ 2 ವರ್ಷ 33 ದಿನಗಳಿಗೆ ಮಾತ್ರವೇ ಸೀಮಿತವಾಗಿತ್ತು.

ಕಡಿದಾಳ್ ಮಂಜಪ್ಪ, ಬಂಗಾರಪ್ಪ ಸೇರಿದಂತೆ ಘಟಾನುಘಟಿ ರಾಜಕಾರಣಿಗಳನ್ನು ಹೊಂದಿದ್ದ ಶಿವಮೊಗ್ಗ ಜಿಲ್ಲೆ ರಾಜ್ಯ ರಾಜಕೀಯದಲ್ಲಿ ಪ್ರಾಬಲ್ಯವನ್ನು ಹೊಂದಿದ್ದರು. ಜನತಾ ಪರಿವಾರದ ನಾಯಕರಾಗಿ ಗುರುತಿಸಿಕೊಂಡಿದ್ದ ಜೆ.ಎಚ್.ಪಟೇಲ್ ಅವರು ಮಾಜಿ ಪ್ರಧಾನಿ ದೇವೇಗೌಡರ ನಂತರದಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಈ ಮೂಲಕ ಶಿವಮೊಗ್ಗ ಜಿಲ್ಲೆಯಿಂದ ಆಯ್ಕೆಯಾದ ಮೂರನೇ ಮುಖ್ಯಮಂತ್ರಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 1996ರ ಮೇ 31ರ ವರೆಗೆ ಸಿಎಂ ಆಗಿದ್ದ ಜೆ.ಎಚ್. ಪಟೇಲ್ ಬದಲಾದ ರಾಜಕೀಯ ವಿದ್ಯಾಮಾನಗಳಿಂದಾಗಿ ಸಿಎಂ ಹುದ್ದೆಯಿಂದ ಕೆಳಗಿಳಿದಿದ್ದರು. ಹೀಗಾಗಿ ಜೆ.ಎಚ್. ಪಟೇಲ್ ಅವರು ಅಧಿಕಾರದಲ್ಲಿ ಇದ್ದಿದ್ದು, ಕೇವಲ 3 ವರ್ಷ 129 ದಿನಗಳ ಕಾಲ ಮಾತ್ರ.

ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಅಸ್ತಿತ್ವವನ್ನು ತಂದುಕೊಟ್ಟು ಕರ್ನಾಟದಲ್ಲಿ ಕೇಸರಿ ಪತಾಕೆಯನ್ನು ಹಾರಿಸಿದ್ದ ಖ್ಯಾತಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ. ಮಂಡ್ಯ ಜಿಲ್ಲೆಯ ಬೂಕನಕೆರೆಯಲ್ಲಿ ಜನಿಸಿದ್ದ ಯಡಿಯೂರಪ್ಪ ರಾಜಕೀಯದ ಅಸ್ಥಿತ್ವವನ್ನು ಕಂಡುಕೊಂಡಿದ್ದು ಶಿಕಾರಿಪುರದಲ್ಲಿ. ಕಡಿದಾಳ್ ಮಂಜಪ್ಪ, ಬಂಗಾರಪ್ಪ, ಜೆ.ಎಚ್. ಪಟೇಲ್ ಅಂತೆಯೇ ಯಡಿಯೂರಪ್ಪ ಕೂಡ ತಮ್ಮ ಅಧಿಕಾರವನ್ನು ಪೂರ್ಣಗೊಳಿಸಿಲ್ಲ. ರಾಜ್ಯದಲ್ಲಿ ನಾಲ್ಕೂ ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು ಕೂಡ ಅಧಿಕಾರ ನಡೆಸಿದ್ದುಕೇವಲ 5 ವರ್ಷ 70 ದಿನಗಳ ಕಾಲ ಮಾತ್ರ.

ಜೆಡಿಎಸ್ ಹಾಗೂ ಬಿಜೆಪಿ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಮೊದಲು ಬಾರಿ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದರು. ಆದ್ರೆ ಜೆಡಿಎಸ್ ಪಕ್ಷ ಬೆಂಬಲ ವಾಪಾಸ್ ಪಡೆಯುತ್ತಿದ್ದಂತೆಯೇ ಯಡಿಯೂರಪ್ಪ ಆಡಳಿತ ಕೇವಲ 7 ದಿನಗಳಿಗೆ ಮಾತ್ರವೇ ಸೀಮಿತವಾಯ್ತು. ಆದರೆ ಆದರೆ 2008ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ಸ್ಪಷ್ಟ ಬಹುಮತವನ್ನು ಪಡೆದುಕೊಂಡಿತ್ತು. ಇದರ ಫಲವಾಗಿ ಯಡಿಯೂರಪ್ಪ 2008ರ ಮೇ 30ರಂದು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಯಡಿಯೂರಪ್ಪ ಪೂರ್ಣ ಅವಧಿಯ ವರೆಗೂ ಮುಖ್ಯಮಂತ್ರಿಯಾಗಿ ಇರುತ್ತಾರೆ ಅಂತಾನೇ ಎಲ್ಲರೂ ಬಾವಿಸಿಕೊಂಡಿದ್ದರು. ಆದರೆ ಕಿಕ್ ಬ್ಯಾಕ್ ಪ್ರಕರಣದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಜೈಲು ಸೇರುವ ಸ್ಥಿತಿ ಎದುರಾಗುತ್ತಲೇ ನವೆಂಬರ್ 19, 2011ರಂದು ರಾಜೀನಾಮೆಯನ್ನು ಸಲ್ಲಿಸಿದ್ದರು.

ನಂತರ 2018ರಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದ ಸಂದರ್ಭದಲ್ಲಿ ಬಿ.ಎಸ್.ಯಡಿಯೂರಪ್ಪ ಅವರು 2018ರ ಮೇ ರಂದು ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡಿದ್ದರೂ ಕೂಡ ಕೇವಲ ಬಹುಮತದ ಕೊರತೆಯಿಂದಾಗಿ ಎರಡು ದಿನಗಳ ಕಾಲ ಮಾತ್ರವೇ ಸಿಎಂ ಆಗಿದ್ದರು. ಅಷ್ಟಕ್ಕೆ ಸುಮ್ಮನಾಗದ ಯಡಿಯೂರಪ್ಪ ಆಪರೇಷನ್ ಕಮಲದ ಮೂಲಕ 2019ರ ಜುಲೈ 26 ರಂದು ಅಧಿಕಾರ ಸ್ವೀಕಾರ ಮಾಡಿದ್ದರೂ ಕೂಡ 2021ರ ಜುಲೈ 26ರಂದೇ ಸಿಎಂ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಹೊರ ನಡೆದಿದ್ದಾರೆ. ಕಡಿದಾಳ್ ಮಂಜಪ್ಪ, ಬಂಗಾರಪ್ಪ, ಜೆ.ಎಚ್. ಪಟೇಲ್ ಹಾಗೂ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದರೂ ಕೂಡ ಅಧಿಕಾರದ ಅವಧಿಯನ್ನು ಪೂರ್ಣಗೊಳಿಸುವುದಕ್ಕೆ ಮಾತ್ರ ಸಾಧ್ಯವಾಗಿಲ್ಲ.