Vijay Mallya : ವಿಜಯ್‌ ಮಲ್ಯಗೆ ಮತ್ತೊಂದು ಸಂಕಷ್ಟ : “ಮಲ್ಯ ದಿವಾಳಿ” ಎಂದ ಲಂಡನ್‌ ಹೈಕೋರ್ಟ್‌

ಲಂಡನ್ : ಬಹುಕೋಟಿ ವಂಚನೆ ಆರೋಪ ಎದುರಿಸುತ್ತಿರುವ ಉದ್ಯಮಿ ವಿಜಯ್‌ ಮಲ್ಯ ಅವರಿಗೆ ಸಂಕಷ್ಟ ಎದುರಾಗಿದೆ. ಇದೀಗ ಲಂಡನ್‌ ಕೋರ್ಟ್‌ ವಿಜಯ್‌ ಮಲ್ಯ ಅವರನ್ನು ದಿವಾಳಿ ಎಂದು ಘೋಷಣೆ ಮಾಡಿದೆ. ಲಂಡನ್‌ ಕೋರ್ಟ್‌ ತೀರ್ಪು ಇದೀಗ ಭಾರತೀಯ ಬ್ಯಾಂಕುಗಳಿಗೆ ವರದಾನವಾಗಿ ಪರಿಣಮಿಸಿದೆ.

ಭಾರತೀಯ ಬ್ಯಾಂಕುಗಳಿಗೆ ವಂಚಿಸಿ ಲಂಡನ್‌ ಸೇರಿದ್ದ ಮದ್ಯದ ದೊರೆ ವಿಜಯ್‌ ಮಲ್ಯರನ್ನು ಲಂಡನ್‌ ಹೈಕೋರ್ಟ್‌ ದಿವಾಳಿ ಎಂದು ಘೋಷಿಸಿದೆ. ಅಲ್ಲದೇ ತೀರ್ಪಿನ ವಿರುದ್ದ ಮೇಲ್ಮನವಿ ಸಲ್ಲಿಸಲು ಕೂಡ ಅವಕಾಶವನ್ನು ನಿರಾಕರಿಸಲಾಗಿದೆ. ಇದು ವಿಜಯ್‌ ಮಲ್ಯರನ್ನು ಸಂಕಷ್ಟಕ್ಕೆ ನೂಕಿದೆ.

ಎಸ್‌ಬಿಐ ನೇತೃತ್ವದ ಬ್ಯಾಂಕ್ ಒಕ್ಕೂಟ ಲಂಡನ್ ನ್ಯಾಯಾಲಯದಲ್ಲಿ ವಿಜಯ್‌ ಮಲ್ಯ ದಿವಾಳಿತನದ ಅರ್ಜಿಯನ್ನು ತಿದ್ದುಪಡಿ ಮಾಡಬೇಕು. ಹಾಗೂ ಮಲ್ಯ ಆಸ್ತಿಯನ್ನು ಮುಟ್ಟು ಗೋಲು ಹಾಕಿಕೊಳ್ಳಲು ಅನುಮತಿ ನೀಡುವಂತೆ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಲಂಡನ್‌ ಹೈಕೋರ್ಟ್‌ ವಿಚಾರಣೆಯನ್ನು ನಡೆಸಿದೆ.

ಇನ್ನು ಲಂಡನ್ ಹೈಕೋರ್ಟ್ ಮಲ್ಯರನ್ನು ದಿವಾಳಿ ಎಂದು ಘೋಷಿಸುತ್ತಿದ್ದಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಭಾರತೀಯ ಬ್ಯಾಂಕ್‌ಗಳ ಒಕ್ಕೂಟ ಸಂಭ್ರಮಿಸಿದೆ. ನ್ಯಾಯಾಲಯದ ಆದೇಶದಿಂದಾಗಿ ಸ್ಥಗಿತಗೊಂಡಿರುವ ಕಿಂಗ್‌ಫಿಶರ್ ಏರ್‌ಲೈನ್ಸ್‌ನ ಭಾರತದಲ್ಲಿರುವ ಆಸ್ತಿಗಳನ್ನು ವಶಪಡಿಸಿಕೊಂಡು ಇದರಿಂದ ಸಾಲದ ಮೊತ್ತವನ್ನು ಪಡೆಯಲು ಈ ಘೋಷಣೆ ಸಹಕಾರಿಯಾಗಲಿದೆ. ಅಲ್ಲದೇ ವಿಜಯ ಮಲ್ಯ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಸಹಕಾರಿಯಾಗಿದೆ.

Comments are closed.